ಏಷ್ಯಾಕಪ್‌ಗಾಗಿಂದು ಶ್ರೀಲಂಕಾ vs ಪಾಕಿಸ್ತಾನ ಕದನ

By Kannadaprabha NewsFirst Published Sep 11, 2022, 10:45 AM IST
Highlights

ಏಷ್ಯಾಕಪ್ ಫೈನಲ್‌ಗಿಂದು ದುಬೈ ಅಂತಾರಾಷ್ಟ್ರೀಯ ಮೈದಾನ ಆತಿಥ್ಯ
ಏಷ್ಯಾಕಪ್ ಟ್ರೋಫಿಗಾಗಿ ಪಾಕಿಸ್ತಾನ-ಶ್ರೀಲಂಕಾ ನಡುವೆ ಫೈಟ್
6ನೇ ಏಷ್ಯಾಕಪ್ ಮೇಲೆ ಕಣ್ಣಿಟ್ಟಿರುವ ಲಂಕಾಗೆ, ಪಾಕ್‌ ಸವಾಲು

ದುಬೈ(ಸೆ.11): 15ನೇ ಆವೃತ್ತಿಯ ಏಷ್ಯಾ ಕಪ್‌ ಟಿ20 ಟೂರ್ನಿಯ ಫೈನಲ್‌ಗೆ ವೇದಿಕೆ ಸಜ್ಜುಗೊಂಡಿದ್ದು, ಮಾಜಿ ಚಾಂಪಿಯನ್‌ಗಳಾದ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಟೂರ್ನಿಯ ಆತಿಥ್ಯ ವಹಿಸಿರುವ ಲಂಕಾ 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಪಾಕ್‌ 3ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳಲು ಕಾತರಿಸುತ್ತಿದೆ.

ಉಭಯ ತಂಡಗಳು ಸೂಪರ್‌-4 ಹಂತದ ಅಂತಿಮ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಿದ್ದು, ಲಂಕಾ ಸುಲಭ ಗೆಲುವು ಸಾಧಿಸಿತ್ತು. ಲಂಕಾ ತಂಡ ಈ ಮೊದಲು 11 ಬಾರಿ ಫೈನಲ್‌ ಆಡಿದ್ದು, 5 ಬಾರಿ ಪ್ರಶಸ್ತಿ ಗೆದ್ದಿದೆ. 1986 ಹಾಗೂ 2014ರಲ್ಲಿ ಪಾಕ್‌ ವಿರುದ್ಧವೇ ಗೆದ್ದು ಚಾಂಪಿಯನ್‌ ಆಗಿತ್ತು. ಉಭಯ ತಂಡಗಳ ನಡುವಿನ ಮತ್ತೊಂದು ಫೈನಲ್‌ ಹಣಾಹಣಿ 2000ರಲ್ಲಿ ನಡೆದಿದ್ದು, ಪಾಕ್‌ ಪ್ರಶಸ್ತಿ ಗೆದ್ದಿತ್ತು.

ಟೂರ್ನಿಯಲ್ಲಿ ಈ ಬಾರಿ ಲಂಕಾದ ಆರಂಭ ಉತ್ತಮವಾಗಿರಲಿಲ್ಲ. ದೇಶದ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಟೂರ್ನಿಗೆ ಕಾಲಿರಿಸಿದ್ದ ಲಂಕಾ ಆರಂಭಿಕ ಪಂದ್ಯದಲ್ಲಿ ಅಷ್ಘಾನಿಸ್ತಾನ ವಿರುದ್ಧ 8 ವಿಕೆಟ್‌ ಸೋಲನುಭವಿಸಿತ್ತು. ಬಳಿಕ ಬಾಂಗ್ಲಾದೇಶವನ್ನು ಸೋಲಿಸಿದ್ದ ತಂಡ, ಸೂಪರ್‌-4 ಹಂತದಲ್ಲಿ ಆಫ್ಘನ್‌, ಭಾರತ ಹಾಗೂ ಪಾಕ್‌ ತಂಡವನ್ನು ಮಣಿಸಿ ಫೈನಲ್‌ಗೇರಿದೆ. ಅತ್ತ ಪಾಕ್‌ ತಂಡ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ವೈರಿ ಭಾರತ ವಿರುದ್ಧ ಮುಗ್ಗರಿಸಿದ್ದರೂ ಬಳಿಕ ಹಾಂಕಾಂಗ್‌ ಹಾಗೂ ಸೂಪರ್‌-4 ಹಂತದಲ್ಲಿ ಭಾರತ, ಆಫ್ಘನ್‌ ವಿರುದ್ಧ ಜಯಭೇರಿ ಬಾರಿಸಿತ್ತು.

ಪಾಕಿಸ್ತಾನ ಏಷ್ಯಾಕಪ್ ಗೆಲ್ಲೊಲ್ಲ: ಪಾಕ್ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಬಾಬರ್ ಅಜಂ ಪಡೆ ಮೇಲೆ ಗರಂ

ಲಂಕಾ ತಂಡ ಈ ಬಾರಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದು, ಟೂರ್ನಿಯುದ್ದಕ್ಕೂ 28 ಸಿಕ್ಸರ್‌, 62 ಬೌಂಡರಿಗಳನ್ನು ಬಾರಿಸಿದೆ. ಕುಸಾಲ್‌ ಮೆಂಡಿಸ್‌, ಪಥುಮ್‌ ನಿಸ್ಸಾಂಕ, ದನುಷ್ಕಾ ಗುಣತಿಲಕ, ರಾಜಪಕ್ಸ ಹಾಗೂ ಶನಕ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಎದುರಾಳಿ ಬೌಲರ್‌ಗಳ ಮುಂದೆ ದಿಟ್ಟಹೋರಾಟ ನೀಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ವನಿಂಡು ಹಸರಂಗ, ಮಧುಶನಕ ಮಾತ್ರ ತಂಡಕ್ಕೆ ನೆರವಾಗುತ್ತಿದ್ದಾರೆ. ಮತ್ತೊಂದೆಡೆ ಪಾಕ್‌ ತಂಡ ಈ ಬಾರಿಯೂ ಬೌಲಿಂಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿದೆ. ಯುವ ವೇಗಿ ನಸೀಂ ಶಾ, ಹಾರಿಸ್‌ ರೌಫ್‌ ಹಾಗೂ ಮೊಹಮದ್‌ ಹಸ್ನೈನ್‌ ತಂಡದ ಆಧಾರಸ್ತಂಭವಾಗಿದ್ದು, ಸ್ಪಿನ್ನರ್‌ಗಳಾದ ಶಾದಬ್‌ ಖಾನ್‌ ಹಾಗೂ ಮೊಹಮದ್‌ ನವಾಜ್‌ ಕೂಡಾ ಮಿಂಚುತ್ತಿದ್ದಾರೆ. ಆದರೆ ಬ್ಯಾಟಿಂಗ್‌ನಲ್ಲಿ ಮೊಹಮದ್‌ ರಿಜ್ವಾನ್‌ ಹೊರತುಪಡಿಸಿ ಉಳಿದವರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ.

ದುಬೈನಲ್ಲಿ ಟೂರ್ನಿಯುದ್ದಕ್ಕೂ ಟಾಸ್‌ ಬಹುತೇಕ ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಈ ಪಂದ್ಯದಲ್ಲೂ ಟಾಸ್‌ ನಿರ್ಣಾಯ ಎನಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಸಂಭವನೀಯ ಆಟಗಾರರ ಪಟ್ಟಿ

ಶ್ರೀಲಂಕಾ: ನಿಸ್ಸಂಕ, ಮೆಂಡಿಸ್‌, ಗುಣತಿಲಕ, ಡಿ ಸಿಲ್ವ, ರಾಜಪಕ್ಸ, ಶನಕ(ನಾಯಕ), ಹಸರಂಗ, ಕರುಣಾರತ್ನೆ, ಮದುಶಾನ್‌, ತೀಕ್ಷಣ, ಮಧುಶನಕ

ಪಾಕಿಸ್ತಾನ: ರಿಜ್ವಾನ್‌, ಬಾಬರ್‌ ಆಜಂ(ನಾಯಕ), ಜಮಾನ್‌, ಇಫ್ತಿಕಾರ್‌, ಕುಶ್ದಿಲ್‌, ಆಸಿಫ್‌, ನವಾಜ್‌, ಶಾದಾಬ್‌, ಹಾರಿಸ್‌, ಹಸ್ನೈನ್‌, ನಸೀಂ.

ಸ್ಥಳ: ದುಬೈ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
 

click me!