
ದುಬೈ: ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇಂದು ಏಷ್ಯಾಕಪ್ ಟೂರ್ನಿಯಲ್ಲಿ ಮುಖಾಮುಖಿಯಾದವು. ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಈ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಪಿ ಪಾಕಿಸ್ತಾನ ನಾಯಕನಿಗೆ ಕೈಕುಲುಕದೇ ಪೆಹಲ್ಗಾಂ ದುರ್ಘಟನೆಯ ಕುರಿತಂತೆ ಬಹಿರಂಗವಾಗಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಟಾಸ್ ನಿರ್ವಹಣೆ ಮಾಡಿದರು. ರವಿಶಾಸ್ತ್ರಿ ಅಕ್ಕಪಕ್ಕ ಸೂರ್ಯಕುಮಾರ್ ಯಾದವ್ ಹಾಗೂ ಸಲ್ಮಾನ್ ಅಲಿ ಅಘಾ ನಿಂತಿದ್ದರು. ಟಾಸ್ ಬಳಿಕ ಸಾಮಾನ್ಯವಾಗಿ ಉಭಯ ತಂಡಗಳ ಆಟಗಾರರು ಕೈಕುಲುಕುತ್ತಾರೆ. ಆದರೆ ಟಾಸ್ ಆರಂಭಕ್ಕೂ ಮೊದಲೇ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ತಾವು ಟಾಸ್ ವೇಳೆ ಪಾಕ್ ನಾಯಕನ ಜತೆ ಕೈಕುಲುಕುವುದಿಲ್ಲ ಎಂದು ತಿಳಿಸಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅದೇ ರೀತಿ ಟಾಸ್ ಮುಗಿಯುತ್ತಿದ್ದಂತೆಯೇ ಉಭಯ ದೇಶಗಳ ನಾಯಕರು ಶೇಕ್ ಹ್ಯಾಂಡ್ ಮಾಡದೇ ಪೆವಿಲಿಯನ್ ಕಡೆ ವಾಪಸ್ಸಾದರು.
ಇನ್ನು ಏಷ್ಯಾಕಪ್ ಟೂರ್ನಿಗೆ ವೇಳಾಪಟ್ಟಿ ಪ್ರಕಟವಾದಾಗಿನಿಂದಲೇ ಭಾರತ ತಂಡವು ಶತ್ರುರಾಷ್ಟ್ರ ಪಾಕಿಸ್ತಾನ ಎದುರು ಕ್ರಿಕೆಟ್ ಆಡಬಾರದು ಎನ್ನುವ ಆಗ್ರಹ ಕೇಳಿಬಂದಿತ್ತು. ಕೆಲವು ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ಎದುರಿನ ಪಂದ್ಯವನ್ನು ಬಾಯ್ಕಾಟ್ ಮಾಡಬೇಕು ಎಂದು ಆಗ್ರಹಿಸಿದ್ದರು.
ಕಣಿವೆ ರಾಜ್ಯದ ಪೆಹಲ್ಗಾಂನಲ್ಲಿ ಪಾಕಿಸ್ತಾನ ಪ್ರೇರಿತ ಉಗ್ರರು ನಿರಾಯುಧವಾಗಿ ಬಂದಿದ್ದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಮಂದಿ ನಾಗರೀಕರನ್ನು ಹತ್ಯೆ ಮಾಡಿದ್ದರು. ಹೀಗಾಗಿ ಉಗ್ರವಾದಕ್ಕೆ ಸದಾ ಕುಮ್ಮಕ್ಕು ನೀಡುತ್ತಾ ಬಂದಿರುವ ಪಾಕ್ ಜತೆ ಕ್ರಿಕೆಟ್ ಆಡಬಾರದು ಎನ್ನುವ ಆಗ್ರಹ ಕೇಳಿ ಬಂದಿತ್ತು. ಆದರೆ ಕೇಂದ್ರ ಸರ್ಕಾರ ಪಾಕ್ ಎದುರು ಕ್ರಿಕೆಟ್ ಆಡಲು ಸಮ್ಮತಿ ನೀಡಿತ್ತು. ದ್ವಿಪಕ್ಷೀಯ ಸರಣಿ ಹೊರತುಪಡಿಸಿ ಬಹುಪಕ್ಷೀಯ ಟೂರ್ನಿಗಳಲ್ಲಿ ಪಾಕ್ ಎದುರು ಕ್ರಿಕೆಟ್ ಆಡಲು ಭಾರತಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು.
ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ರೆಯಾನ್ ಟೆನ್ ಡೆಸ್ಕ್ಯಾಟ್ ಅವರನ್ನು ಉದ್ದೇಶಿಸಿ ಮಾಧ್ಯಮದವರು ತಂಡದ ವಾತಾವರಣ, ಆಟಗಾರರ ಮನಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಹೆಡ್ ಕೋಚ್ ಗೌತಮ್ ಗಂಭೀರ್, ಆಟಗಾರರಿಗೆ ಮ್ಯಾಚ್ ಬಗ್ಗೆ ಗಮನ ಹರಿಸುವುದಕ್ಕೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ತವರಿನಲ್ಲಿ ಯಾವ ರೀತಿ ಫೀಲಿಂಗ್ಸ್ ಇದೆ ಎಂದು ನಮಗೆ ಗೊತ್ತಿದೆ ಎಂದಿದ್ದರು.ಭಾರತೀಯರು ಸೂರ್ಯಕುಮಾರ್ ಯಾದವ್ ಅವರಿಂದ ಇಂತಹದ್ದೇ ಪ್ರತಿರೋಧವನ್ನು ನಿರೀಕ್ಷಿಸುತ್ತಿದ್ದರು. ಅದನ್ನು ಅರ್ಥಮಾಡಿಕೊಂಡು ಸೂರ್ಯಕುಮಾರ್ ಯಾದವ್ ಹಾಗೆಯೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.