
ದುಬೈ: 2025ರ ಏಷ್ಯಾಕಪ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಭಾರತ ತಂಡವು 7 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಸುಲಭ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಹೀನಾಯ ಸೋಲು ಕಂಡ ಪಾಕಿಸ್ತಾನ ತಂಡವು ಇದೀಗ ಗ್ರೂಪ್ ಹಂತದಿಂದಲೇ ಹೊರಬೀಳುವ ಭೀತಿಗೆ ಸಿಲುಕಿದೆ.
ಭಾರತ ತಂಡವು ಈ ಗೆಲುವಿನೊಂದಿಗೆ 4 ಅಂಕಗಳ ಸಹಿತ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ಭಾರೀ ಅಂತರದ ಸೋಲು ಅನುಭವಿಸಿದ, ಪಾಕಿಸ್ತಾನ ತಂಡವು ಸದ್ಯ ಎರಡನೇ ಸ್ಥಾನದಲ್ಲಿಯೇ ಮುಂದುವರೆದಿದೆಯಾದರೂ ಇನ್ನೊಂದು ತಪ್ಪು ಹೆಜ್ಜೆ ಪಾಕ್ ತಂಡದ ಏಷ್ಯಾಕಪ್ ಅಭಿಯಾನ ಗ್ರೂಪ್ ಹಂತದಲ್ಲೇ ಹೊರಬೀಳುವ ಆತಂಕಕ್ಕೆ ಸಿಲುಕಿದೆ. ಸದ್ಯ ಗ್ರೂಪ್ ಸ್ಟೇಜ್‌ನಲ್ಲಿ ಆರು ಪಂದ್ಯಗಳು ಮುಕ್ತಾಯವಾಗಿದ್ದು, ಪಾಕಿಸ್ತಾನ ತಂಡವು ಸೂಪರ್ 4 ಹಂತಕ್ಕೇರಬೇಕಿದ್ದರೇ ಯುಎಇ ತಂಡವನ್ನು ಸೋಲಿಸಬೇಕಾದ ಒತ್ತಡಕ್ಕೆ ಸಿಲುಕಿದೆ.
2025ರ ಏಷ್ಯಾಕಪ್ ಟೂರ್ನಿಯಲ್ಲಿ ಏಷ್ಯಾದ ಎಂಟು ತಂಡಗಳು ಪಾಲ್ಗೊಂಡಿವೆ. 8 ತಂಡಗಳು ತಲಾ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್ 4ಗೆ ಎಂಟ್ರಿ ಕೊಡಲಿವೆ. ಗ್ರೂಪ್ ಹಂತದಲ್ಲಿ ಎಲ್ಲಾ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಿಂದ ಮೊದಲ ಹಾಗೂ ಎರಡನೇ ಸ್ಥಾನ ಪಡೆಯುವ ತಂಡಗಳು ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿವೆ. ಇನ್ನೆರಡು ತಂಡಗಳು ಗ್ರೂಪ್ ಹಂತದಲ್ಲೇ ಹೊರಬೀಳಲಿವೆ.
ಗ್ರೂಪ್ 'ಎ'ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಹಾಗೂ ಓಮಾನ್ ತಂಡಗಳು ಸ್ಥಾನ ಪಡೆದಿವೆ. ಸದ್ಯ ನಂ.1 ಸ್ಥಾನದಲ್ಲಿ ಭಾರತ ಭದ್ರವಾಗಿದೆ. ಭಾರತ ತಾನಾಡಿದ ಎರಡೂ ಪಂದ್ಯ ಗೆದ್ದು, ಬಹುತೇಕ ಸೂಪರ್ 4 ಹಂತಕ್ಕೆ ಒಂದು ಕಾಲಿಟ್ಟಿದೆ. ಯಾಕೆಂದರೆ ಭಾರತದ ನೆಟ್ ರನ್‌ರೇಟ್ ಕೂಡಾ ಧನಾತ್ಮಕವಾಗಿದೆ. ಇನ್ನು ಕೇವಲ ಒಂದು ಪಂದ್ಯ ಗೆದ್ದಿರುವ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಸದ್ಯ ಏಷ್ಯಾಕಪ್‌ನಲ್ಲಿ ಒಂದು ಗೆಲುವು ಹಾಗೂ ಒಂದು ಸೋಲು ಕಂಡಿದೆ. ಪಾಕಿಸ್ತಾನದ ಬಳಿ ಎರಡು ಅಂಕಗಳಿದ್ದರೂ, ಸೂಪರ್ 4 ಹಂತಕ್ಕೇರುವುದು ಇನ್ನೂ ಕನ್ಫರ್ಮ್ ಆಗಿಲ್ಲ. ಮೂರನೇ ಸ್ಥಾನದಲ್ಲಿ ಓಮಾನ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಯುಎಇ ತಂಡವಿದೆ.
ಪಾಕಿಸ್ತಾನ ತಂಡವು ಗ್ರೂಪ್ ಹಂತದಲ್ಲಿ ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಸೆಪ್ಟೆಂಬರ್ 17ರಂದು ಈ ಪಂದ್ಯ ನಡೆಯಲಿದೆ. ಈಗಾಗಲೇ ಪಾಕಿಸ್ತಾನ ತಂಡವು ಭಾರತದ ಎದುರು ಹೀನಾಯವಾಗಿ ಸೋಲು ಕಂಡಿದ್ದು, ಒಂದು ವೇಳೆ ಯುಎಇ ಎದುರು ಕೂಡಾ ಹೀನಾಯ ಸೋಲು ಕಂಡರೇ ಪಾಕಿಸ್ತಾನ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬೀಳಲಿದೆ.
ಅಂದಹಾಗೆ ಯುಎಇ ತಂಡವು ಕೇವಲ ಒಂದು ಪಂದ್ಯವನ್ನಾಡಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದರ ನೆಟ್ ರನ್‌ರೇಟ್ ಕೂಡಾ -10.483 ಇದೆ. ಆದರೆ ಯುಎಇ ಇನ್ನೂ ಎರಡು ಪಂದ್ಯವನ್ನಾಡುವುದು ಬಾಕಿ ಇದೆ. ಒಂದು ವೇಳೆ ಯುಎಇ ತಂಡವು ಮುಂದಿನ ಪಂದ್ಯದಲ್ಲಿ ಓಮಾನ್ ಹಾಗೂ ಪಾಕಿಸ್ತಾನ ತಂಡವನ್ನು ಸೋಲಿಸಿದರೆ 4 ಅಂಕಗಳೊಂದಿಗೆ 'ಎ' ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿ ಸೂಪರ್ 4 ಪ್ರವೇಶಿಸಲಿದೆ. ಇದರೊಂದಿಗೆ ಪಾಕಿಸ್ತಾನ ತಂಡದ ಸೂಪರ್ 4 ಕನಸು ನುಚ್ಚುನೂರಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.