
ದುಬೈ: ಉಗ್ರರಿಗೆ ಸದಾ ಕುಮ್ಮಕ್ಕು ನೀಡುತ್ತಾ ಭಾರತದ ಭದ್ರತೆಗೆ ಸದಾ ಭಂಗ ತರಲು ಪ್ರಯತ್ನಿಸುವ ಪಾಕಿಸ್ತಾನಕ್ಕೆ ಇದೀಗ ಟೀಂ ಇಂಡಿಯಾ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಭಾರತ, ತಾವು ಗಡಿಯಲ್ಲಿ ಆದರೂ ಸೈ, ಮೈದಾನದಲ್ಲಾದರೂ ಸೈ ಕೊಡುವ ಉತ್ತರ ಭಯಂಕರವಾಗಿರುತ್ತದೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಅಂದಹಾಗೆ ಪಾಕ್ ಪ್ರೇರಿತ ಉಗ್ರರು ಪೆಹಲ್ಗಾಂನಲ್ಲಿ ನಮ್ಮ ದೇಶದ ನಾಗರೀಕರ ಮೇಲೆ ದಾಳಿ ನಡೆಸಿ ಸುಮಾರು 26 ಮಂದಿಯನ್ನು ಬಲಿ ಪಡೆದಿದ್ದರು. ಇದಕ್ಕೆ ಪ್ರತಿಯಾಗಿ ಆಪರೇಷನ್ ಸಿಂದೂರ್ ನಡೆಸುವ ಮೂಲಕ ಉಗ್ರನೆಲೆಗಳನ್ನು ಧ್ವಂಸ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು. ಇದೆಲ್ಲದರ ಹೊರತಾಗಿಯೂ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಭಾರತ ಕಣಕ್ಕಿಳಿಯಬಾರದು ಎನ್ನುವಂತಹ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿತ್ತು. ಇದೆಲ್ಲದರ ಹೊರತಾಗಿಯೂ ಕೇಂದ್ರ ಸರ್ಕಾರ, ಪಾಕಿಸ್ತಾನ ಎದುರು ಭಾರತ ತಂಡ ಕಣಕ್ಕಿಳಿಯಲು ಗ್ರೀನ್ ಸಿಗ್ನಲ್ ನೀಡಿತ್ತು. ದ್ವಿಪಕ್ಷೀಯ ಸರಣಿಗಳನ್ನು ಹೊರತುಪಡಿಸಿ, ಬಹುಪಕ್ಷೀಯ ಟೂರ್ನಿಯಲ್ಲಿ ಪಾಕ್ ಎದುರು ಆಡಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.
ಸಾಕಷ್ಟು ನಿರೀಕ್ಷೆ ಹಾಗೂ ಒತ್ತಡದಲ್ಲಿಯೇ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಮೈದಾನಕ್ಕಿಳಿದಿತ್ತು. ಟಾಸ್ ಗೆದ್ದ ಪಾಕಿಸ್ತಾನ ತಂಡವು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಪಾಕಿಸ್ತಾನಕ್ಕೆ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಶಾಕ್ ನೀಡಿದರು. ಇನ್ನು ಮರು ಓವರ್‌ನಲ್ಲಿ ಬುಮ್ರಾ ಕೂಡಾ ವಿಕೆಟ್ ಕಬಳಿಸುವ ಮೂಲಕ ಪಾಕಿಗೆ ಡಬಲ್ ಶಾಕ್ ನೀಡಿದರು. ಶಾಹಿಝಾದ್ ಫರ್ಹಾನ್ 44 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ 40 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಶಾಹೀನ್ ಶಾ ಅಫ್ರಿದಿ ಕೇವಲ 16 ಎಸೆತಗಳಲ್ಲಿ 33 ರನ್ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.
ಭಾರತ ಪರ ಚೈನಾಮನ್ ಸ್ಪಿನ್ನರ್ ಖ್ಯಾತಿಯ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಇನ್ನು ಹಾರ್ದಿಕ್ ಪಾಂಡ್ಯ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಸಾಧಾರಣ ಗುರಿ ಬೆನ್ನತ್ತಿದ ಭಾರತ ಕೇವಲ 15.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ನಗೆ ಬೀರಿತು. ಅಭಿಷೇಕ್ ಶರ್ಮಾ ಕೇವಲ 13 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ರನ್ ಸಿಡಿಸಿದರು. ಇನ್ನು ತಿಲಕ್ ವರ್ಮಾ 31 ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 47 ರನ್ ಸಿಡಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಇನ್ನು ಈ ಗೆಲುವಿನೊಂದಿಗೆ ಭಾರತ ತಂಡವು ಸತತ ಗೆಲುವು ಸಹಿತ 4 ಅಂಕಗಳೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಇದರ ಜತೆಗೆ ಬಹುತೇಕ ಸೂಪರ್ 4 ಹಂತದ ಹಾದಿಯನ್ನು ಸುಲಭ ಮಾಡಿಕೊಂಡಿದೆ. ಇನ್ನು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡವು ಓಮಾನ್ ತಂಡವನ್ನು ಎದುರಿಸಲಿದ್ದು, ಆ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಅಧಿಕೃತವಾಗಿ ಗುಂಪಿನ ಅಗ್ರಸ್ಥಾನಿಯಾಗಿಯೇ ಸೂಪರ್ 4 ಹಂತಕ್ಕೆ ಲಗ್ಗೆಯಿಡಲಿದೆ. ಪಾಕಿಸ್ತಾನ ಕೂಡಾ ಸೂಪರ್ 4 ಹಂತಕ್ಕೇರುವ ವಿಶ್ವಾಸದಲ್ಲಿದ್ದು, ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಯುಎಇ ಎದುರು ಗೆಲುವು ಸಾಧಿಸಿದರೆ, ಎರಡನೇ ತಂಡವಾಗಿ ಪಾಕ್ ಸೂಪರ್ 4 ಹಂತಕ್ಕೇರಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.