Asia Cup 2023: ಏಷ್ಯಾ ಕಿರೀಟಕ್ಕೆ ಭಾರತ vs ಲಂಕಾ ಫೈಟ್..!

By Kannadaprabha News  |  First Published Sep 17, 2023, 9:29 AM IST

ಏಷ್ಯಾಕಪ್‌ನಲ್ಲಿ ಈವರೆಗೆ ಟೀಂ ಇಂಡಿಯಾ ಹೆಚ್ಚಿನ ಯಶಸ್ಸು ಸಾಧಿಸಿದ್ದು, 7 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅತ್ತ ಟೂರ್ನಿಯಲ್ಲಿ ಭಾರತದ ಪ್ರಬಲ ಎದುರಾಳಿಯಾಗಿರುವ ಶ್ರೀಲಂಕಾ 6 ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.


ಕೊಲಂಬೊ(ಸೆ.17): ಈ ಬಾರಿ ಏಷ್ಯಾದ ಕ್ರಿಕೆಟ್‌ ಅಧಿಪತಿ ಯಾರಾಗಲಿದ್ದಾರೆ ಎಂಬ ಕ್ರೀಡಾಭಿಮಾನಿಗಳ ಕುತೂಹಲಕ್ಕೆ ತೆರೆ ಬೀಳುವ ಸಮಯ ಬಂದಿದೆ. ಭಾನುವಾರ 16ನೇ ಆವೃತ್ತಿ ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ ನಡೆಯಲಿದ್ದು, ಭಾರತ ಹಾಗೂ ಶ್ರೀಲಂಕಾ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಏಷ್ಯಾಕಪ್‌ನಲ್ಲಿ ಈವರೆಗೆ ಟೀಂ ಇಂಡಿಯಾ ಹೆಚ್ಚಿನ ಯಶಸ್ಸು ಸಾಧಿಸಿದ್ದು, 7 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅತ್ತ ಟೂರ್ನಿಯಲ್ಲಿ ಭಾರತದ ಪ್ರಬಲ ಎದುರಾಳಿಯಾಗಿರುವ ಶ್ರೀಲಂಕಾ 6 ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಆದರೆ ಕಳೆದ 5 ವರ್ಷಗಳಲ್ಲಿ ಐಸಿಸಿ ಜೊತೆ ಏಷ್ಯಾಕಪ್‌ ಪ್ರಶಸ್ತಿಗೂ ಬರ ಎದುರಿಸುತ್ತಿರುವ ಭಾರತ ಈ ಬಾರಿ ಅದನ್ನು ನೀಗಿಸಲು ಎದುರು ನೋಡುತ್ತಿದೆ. ಹಾಲಿ ಚಾಂಪಿಯನ್‌ ಲಂಕಾ ತವರಿನಲ್ಲಿ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

Tap to resize

Latest Videos

ಏಷ್ಯಾಕಪ್ ಫೈನಲ್‌ಗೇರದ ಪಾಕ್‌ ತಂಡದಲ್ಲಿ ಕಿತ್ತಾಟ..! ಡ್ರೆಸ್ಸಿಂಗ್ ರೂಂನಲ್ಲಿ ಬಾಬರ್-ಅಫ್ರಿದಿ ನಡುವೆ ಮಾತಿನ ಚಕಮಕಿ

ಕುಗ್ಗಿದ ಆತ್ಮವಿಶ್ವಾಸ: ಸೂಪರ್‌-4 ಹಂತದ ಕೊನೆ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೋಲನುಭವಿಸಿದ್ದು, ಫೈನಲ್‌ ಪಂದ್ಯಕ್ಕೂ ಮುನ್ನ ತಂಡದ ಆತ್ಮವಿಶ್ವಾಸ ಕುಗ್ಗಿಸಿದ್ದು ಸುಳ್ಳಲ್ಲ. ಕಳೆದೆರಡೂ ಪಂದ್ಯಗಳಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ನೀರಸ ಪ್ರದರ್ಶನ ತೋರಿದೆ. ಲಂಕಾ ವಿರುದ್ಧವೇ ತಂಡ 213ಕ್ಕೆ ಆಲೌಟಾಗಿದ್ದನ್ನು ಮರೆಯುವಂತಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಬ್ಯಾಟರ್‌ಗಳು ಲಂಕಾ ಸ್ಪಿನ್ನರ್‌ಗಳ ಮುಂದೆ ಜವಾಬ್ದಾರಿ ಅರಿತು ಆಡಬೇಕಿದೆ. ರೋಹಿತ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಕೆ.ಎಲ್‌.ರಾಹುಲ್‌, ಇಶಾನ್‌ ಕಿಶನ್‌ ನಿರ್ಣಾಯಕ ಪಂದ್ಯದಲ್ಲಿ ಅಬ್ಬರಿಸುವ ಅನಿವಾರ್ಯತೆ ಇದೆ. ಹಾರ್ದಿಕ್‌ ಜೊತೆ ರವೀಂದ್ರ ಜಡೇಜಾ, ಶಾರ್ದೂಲ್‌ ಆಲ್ರೌಂಡ್‌ ಬ್ಯಾಟಿಂಗ್‌ನಲ್ಲಿ ಮಿಂಚದಿದ್ದರೆ ಗೆಲುವು ಕಷ್ಟಸಾಧ್ಯ. ಇನ್ನು, ಬೌಲಿಂಗ್‌ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌ ಟ್ರಂಪ್‌ ಕಾರ್ಡ್‌ ಎನಿಸಿಕೊಂಡಿದ್ದು, ಬೂಮ್ರಾ, ಸಿರಾಜ್‌ ಮೇಲೆ ಲಂಕಾ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಾದ ಜವಾಬ್ದಾರಿಯಿದೆ.

ಭಾರತ ಎದುರಿನ ಏಷ್ಯಾಕಪ್ ಫೈನಲ್‌ಗೂ ಮುನ್ನ ಶ್ರೀಲಂಕಾಗೆ ಬಿಗ್ ಶಾಕ್‌..! ಗಾಯದ ಮೇಲೆ ಬರೆ ಎಳೆದಂತಾದ ಲಂಕಾ ಪಾಡು

ವಾಷಿಂಗ್ಟನ್‌ ತಂಡಕ್ಕೆ: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ಗೆ ಗಾಯವಾಗಿದ್ದು, ಹೀಗಾಗಿ ಬೆಂಗಳೂರಲ್ಲಿದ್ದ ವಾಷಿಂಗ್ಟನ್‌ ಸುಂದರ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪಂದ್ಯ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ನಡೆಯಲಿರುವ ಕಾರಣ, ಅವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಬಹುದು.

ತೀಕ್ಷಣ ಔಟ್‌: ಈಗಾಗಲೇ ಗಾಯ, ಕೋವಿಡ್‌ ಕಾರಣದಿಂದ ಹಲವು ತಾರಾ ಆಟಗಾರರ ಸೇವೆಯಿಂದ ವಂಚಿತರಾಗಿರುವ ಶ್ರೀಲಂಕಾಕ್ಕೆ ಮತ್ತೆ ಗಾಯದ ಸಮಸ್ಯೆ ಎದುರಾಗಿದೆ. ಪ್ರಮುಖ ಸ್ಪಿನ್ನರ್‌ ಮಹೀಶ ತೀಕ್ಷಣ ಫೈನಲ್‌ನಿಂದ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ 20ರ ದುನಿಲ್‌ ವೆಲ್ಲಲಗೆ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಬ್ಯಾಟಿಂಗ್‌ ವಿಭಾಗದಲ್ಲಿ ಕುಸಾಲ್‌ ಮೆಂಡಿಸ್‌, ಸಮರವಿಕ್ರಮ ತಂಡದ ಆಧಾರಸ್ತಂಭಗಳಾಗಿದ್ದು, ಚರಿತ್‌ ಅಸಲಂಕ ಆಲ್ರೌಂಡ್‌ ಆಟ ತಂಡದ ಗೆಲುವು-ಸೋಲು ನಿರ್ಧರಿಸುವಂತಿದೆ.

ಒಟ್ಟು ಮುಖಾಮುಖಿ: 166

ಭಾರತ: 97

ಶ್ರೀಲಂಕಾ: 57

ಫಲಿತಾಂಶವಿಲ್ಲ: 12

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಕೆ ಎಲ್ ರಾಹುಲ್‌, ಇಶಾನ್‌ ಕಿಶನ್, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್/ವಾಷಿಂಗ್ಟನ್‌ ಸುಂದರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌, ಕುಲ್ದೀಪ್‌ ಯಾದವ್.

ಶ್ರೀಲಂಕಾ: ಪೆರೇರಾ, ನಿಸ್ಸಾಂಕ, ಮೆಂಡಿಸ್‌, ಸಮರವಿಕ್ರಮ, ಅಸಲಂಕ, ಧನಂಜಯ, ಶಾನಕ(ನಾಯಕ), ವೆಲ್ಲಲಗೆ, ಹೇಮಂತ, ರಜಿತ, ಪತಿರನ.

ಪಂದ್ಯ: ಮಧ್ಯಾಹ್ನ 3ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

ಪಿಚ್‌ ರಿಪೋರ್ಟ್‌

ಪ್ರೇಮದಾಸ ಕ್ರೀಡಾಂಗಣದಲ್ಲಿ ಕಳೆದ 9 ದಿನಗಳಲ್ಲಿ ಇದು 6ನೇ ಪಂದ್ಯ. ಹೀಗಾಗಿ ಪಿಚ್‌ ಸಹಜವಾಗಿಯೇ ತನ್ನ ಗುಣಮಟ್ಟ ಕಳೆದುಕೊಂಡಿರಲಿದೆ. ನಿಧಾನಗತಿಯ ಹಾಗೂ ಸ್ಪಿನ್‌ ಸ್ನೇಹಿ ಪಿಚ್‌ ನಿರೀಕ್ಷಿಸಬಹುದಾಗಿದೆ. ಮಳೆ ಮುನ್ಸೂಚನೆ ಇರುವ ಕಾರಣ, ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸುವ ಸಾಧ್ಯತೆಯೇ ಹೆಚ್ಚು.

ಭಾರತ-ಲಂಕಾ ಮಧ್ಯೆ 8ನೇ ಬಾರಿ ಫೈನಲ್‌! 

ಭಾರತ ಹಾಗೂ ಶ್ರೀಲಂಕಾ ಏಷ್ಯಾಕಪ್‌ನ ಫೈನಲ್‌ನಲ್ಲಿ ಎದುರಾಗುತ್ತಿರುವುದು ಇದು 8ನೇ ಬಾರಿ. ಈ ವರೆಗಿನ 7 ಫೈನಲ್‌ ಮುಖಾಮುಖಿಗಳ ಪೈಕಿ 1988, 1990-91, 1995, 2010ರಲ್ಲಿ ಭಾರತ ಚಾಂಪಿಯನ್‌ ಆಗಿದೆ. 1994, 2004 ಹಾಗೂ 2008ರಲ್ಲಿ ಭಾರತವನ್ನು ಸೋಲಿಸಿ ಲಂಕಾ ಪ್ರಶಸ್ತಿ ಗೆದ್ದಿದೆ.

ನಾಳೆ ಮೀಸಲು ದಿನ

ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ. ಭಾನುವಾರ ಮಳೆಯಿಂದಾಗಿ ಪಂದ್ಯ ಮುಗಿಯದಿದ್ದರೆ, ಅಂದರೆ ಮೊದಲ ಇನ್ನಿಂಗ್ಸ್‌ ಮುಗಿದು 2ನೇ ಇನ್ನಿಂಗ್ಸಲ್ಲಿ ಕನಿಷ್ಠ 20 ಓವರ್‌ ಆಟವೂ ಸಾಧ್ಯವಾಗದೆ ಇದ್ದರೆ ಆಗ ಸೋಮವಾರ ಪಂದ್ಯ ಮುಂದುವರಿಯಲಿದೆ.
 

click me!