
ಕೊಲಂಬೊ(ಸೆ.09): ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನವನ್ನು ಕುತೂಹಲದ ಕಣ್ಣಿನಿಂದ ಎದುರು ನೋಡುತ್ತಿರುವ ಕ್ರೀಡಾಭಿಮಾನಿಗಳಿಗೆ ಮತ್ತೆ ಮಳೆರಾಯ ತಣ್ಣೀರೆರಚುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಭಾನುವಾರ ನಡೆಯಲಿರುವ ಏಷ್ಯಾಕಪ್‌ನ ಸೂಪರ್-4 ಹಂತದ ಭಾರತ-ಪಾಕ್ ಪಂದ್ಯಕ್ಕೆ ಭಾರೀ ಮಳೆ ಭೀತಿ ಇದ್ದು, ಸಂಪೂರ್ಣ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈಗಾಗಲೇ ಪಲ್ಲಕೆಲೆಯಲ್ಲಿ ನಡೆದಿದ್ದ ಗುಂಪು ಹಂತದ ಉಭಯ ತಂಡಗಳ ನಡುವಿನ ಪಂದ್ಯ ಮಳೆಗೆ ಆಹುತಿಯಾಗಿತ್ತು. ಸೂಪರ್-4 ಪಂದ್ಯ ಕೊಲಂಬೊದಲ್ಲಿ ನಿಗದಿಯಾಗಿದ್ದು, ಅಲ್ಲೂ ಮಳೆರಾಯ ಬಿಡುವು ನೀಡದ ಕಾರಣ ಪಂದ್ಯದ ಮೇಲೆ ಕರಿಛಾಯೆ ಆವರಿಸಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ ಕೆಲ ದಿನ ಕೊಲಂಬೊದಲ್ಲಿ ಭಾರೀ ಮಳೆ ಬೀಳಲಿದ್ದು, ಪಂದ್ಯಕ್ಕೆ ಅಡ್ಡಿಯಾಗುವುದು ಬಹುತೇಕ ಖಚಿತ.
Breaking: ಏಷ್ಯಾಕಪ್ ನಡೆಯುತ್ತಿರುವಾಗಲೇ ಲಂಕಾ ಮಾಜಿ ಕ್ರಿಕೆಟಿಗ ಆರೆಸ್ಟ್..!
90% ಮಳೆ ಮುನ್ಸೂಚನೆ: ಸದ್ಯದ ವರದಿ ಪ್ರಕಾರ ಭಾನುವಾರ ಶೇ.80ರಿಂದ 90ರ ವರೆಗೆ ಮಳೆ ಬೀಳಲಿದೆ. ಅಂದು ಬೆಳಗ್ಗೆ ಶೇ.70ರಷ್ಟು ಮಳೆ ಸಾಧ್ಯತೆಯಿದ್ದು, ಮಧ್ಯಾಹ್ನ ವೇಳೆಗೆ ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವರದಿಯಂತೆ ಮಳೆ ಸುರಿದರೆ ಈ ಬಾರಿ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನದ ಸತತ ಎರಡನೇ ಪಂದ್ಯ ರದ್ದುಗೊಳ್ಳುವುದು ಖಚಿತ.
ಈಗಾಗಲೇ ಕೊಲಂಬೊದಲ್ಲಿ ಹಲವು ದಿನಗಳಿಂದ ಮಳೆಯಾಗುತ್ತಿದ್ದು, ಹಲವು ಕಡೆಗಳಲ್ಲಿ ನೆರೆ ಸೃಷ್ಠಿಯಾಗಿದೆ. ಹವಾಮಾನ ವರದಿ ನಿಜವಾದರೆ ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ-ಪಾಕಿಸ್ತಾನದ ಸತತ ಎರಡನೇ ಪಂದ್ಯವನ್ನು ರದ್ದುಗೊಳ್ಳುವ ಸಾಧ್ಯತೆಗಳಿವೆ
ಇತರ ಪಂದ್ಯಕ್ಕೂ ಮಳೆ ಕಾಟ ಉಳಿದ ಪಂದ್ಯಗಳಿಗೂ ಮಳೆ ಕಾಟ
ಕೊಲಂಬೊದಲ್ಲಿ ಭಾರತ-ಪಾಕ್ ಪಂದ್ಯದ ಜೊತೆ ಇತರ ಪಂದ್ಯಗಳಿಗೂ ಮಳೆ ಭೀತಿ ಇದೆ ಎಂದು ವರದಿಯಾಗಿದೆ. ಸೆ.12ರಂದು ಇದೇ ಮೈದಾನದಲ್ಲಿ ಭಾರತ-ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಮಳೆ ಕಾಟ ಸಾಧ್ಯತೆಯಿದೆ. ಆದರೆ, ಸೆ.15ರಂದು ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆಗೆ ಮಳೆ ಬಿಡುವು ನೀಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಟೀಂ ಇಂಡಿಯಾ ಎದುರು ಅಬ್ಬರಿಸಿದ ನೇಪಾಳ ಆಟಗಾರನಿಗೆ ಪದಕ ತೊಡಿಸಿದ ಕೊಹ್ಲಿ..! ವಿಡಿಯೋ ವೈರಲ್
ಒಳಾಂಗಣದಲ್ಲೇ ಆಟಗಾರರ ಪ್ರ್ಯಾಕ್ಟೀಸ್!
ಕೊಲಂಬೊದಲ್ಲಿ ಮಳೆ ಬಿಡುವು ನೀಡದ ಕಾರಣ ಒಳಾಂಗಣ ಕ್ರೀಡಾಂಗಣದಲ್ಲೇ ಭಾರತೀಯ ಆಟಗಾರರು ಗುರುವಾರ ಅಭ್ಯಾಸ ನಡೆಸಿದರು. ಕೆ.ಎಲ್.ರಾಹುಲ್, ಶುಭ್‌ಮನ್ ಗಿಲ್, ಹಾರ್ದಿಕ್ ಸೇರಿದಂತೆ ಹಲವರು ಕೆಲ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ.
ಏಷ್ಯಾಕಪ್‌ನ ಸೂಪರ್-4 ಹಂತ ಸ್ಥಳಾಂತರ ಇಲ್ಲ!
ಕೊಲಂಬೊ: ಏಷ್ಯಾಕಪ್ ಸೂಪರ್-4 ಪಂದ್ಯಗಳನ್ನು ಕೊಲಂಬೊದಿಂದ ಸ್ಥಳಾಂತರ ಮಾಡದಿರಲು ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ) ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ) ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕೊಲಂಬೊದಲ್ಲಿ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೆ.9ರಿಂದ ನಡೆಯಬೇಕಿರುವ 5 ಸೂಪರ್-4 ಪಂದ್ಯ ಹಾಗೂ ಫೈನಲ್ ಪಂದ್ಯ ಹಂಬನ್‌ತೋಟಾಗೆ ಸ್ಥಳಾಂತರಗೊಳ್ಳಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಸದ್ಯ ಕೊಲಂಬೊದಲ್ಲಿ ಮಳೆ ಸಾಧ್ಯತೆ ಕಡಿಮೆಯಾದ ಹಾಗೂ ಪ್ರಸಾರಕರು ಪಂದ್ಯ ಸ್ಥಳಾಂತರಕ್ಕೆ ಅಸಮ್ಮತಿ ಸೂಚಿಸಿದ ಕಾರಣ ಯಾವುದೇ ಪಂದ್ಯಗಳನ್ನು ಸ್ಥಳಾಂತರಿಸದಿರಲು ಎಸಿಸಿ ಹಾಗೂ ಎಸ್‌ಎಲ್‌ಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.