ಏಷ್ಯಾಕಪ್ ಟೂರ್ನಿಗೂ ಮುನ್ನ ಗಾಳಿ ಸುದ್ದಿ ಹಬ್ಬರಿಸುವ ಪತ್ರಕರ್ತರಿಗೆ ರೋಹಿತ್ ಶರ್ಮಾ ಕ್ಲಾಸ್
ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ದ ಹಿಟ್‌ಮ್ಯಾನ್ ಗರಂ
ಯುಜುವೇಂದ್ರ ಚಹಲ್ ಪರ ಬ್ಯಾಟ್ ಬೀಸಿದ ಟೀಂ ಇಂಡಿಯಾ ನಾಯಕ
ದುಬೈ(ಆ.27): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೇವಲ ಮೈದಾನದಲ್ಲಷ್ಟೇ ಅಲ್ಲದೇ ಮೈದಾನದಾಚೆಗಿನ ವಿಚಾರದಲ್ಲೂ ತಮ್ಮ ಆಟಗಾರರನ್ನು ಡಿಫೆಂಡ್ ಮಾಡಿಕೊಳ್ಳುವುದನ್ನು ನೋಡುತ್ತಲೇ ಬಂದಿದ್ದೇವೆ. ಅದು ವಿರಾಟ್ ಕೊಹ್ಲಿಯ ವಿಚಾರವೇ ಇರಲಿ ಅಥವಾ ಉಳಿದ ಯುವ ಆಟಗಾರರ ವಿಚಾರವೇ ಇರಲಿ, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಯಾವಾಗಲೂ ತಮ್ಮ ತಂಡದ ಆಟಗಾರರ ಬೆಂಬಲಕ್ಕೆ ನಿಲ್ಲುತ್ತಲೇ ಬಂದಿದ್ದಾರೆ. ಇದೀಗ ಕೆಲ ದಿನಗಳ ಹಿಂದಷ್ಟೇ ಸಂಚಲನ ಮೂಡಿಸಿದ್ದ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ದಾಂಪತ್ಯ ಜೀವನದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದ್ದ ಗಾಳಿ ಸುದ್ದಿ ಕುರಿತಂತೆ ಪತ್ರಕರ್ತ ಮೇಲೆ ಚಾಟಿ ಬೀಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏಷ್ಯಾಕಪ್ ಟೂರ್ನಿಯನ್ನಾಡಲು ಈಗಾಗಲೇ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಯುಎಇಗೆ ಬಂದಿಳಿದ್ದು, ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಆಟಗಾರರು ನೆಟ್ಸ್‌ನಲ್ಲಿ ಭರ್ಜರಿ ತಯಾರಿ ನಡೆಸುವ ಮೂಲಕ ಬೆವರು ಹರಿಸುತ್ತಿದ್ದಾರೆ. ಈ ಸಂದರ್ಭದಲ್ಲೇ ನಾಯಕ ರೋಹಿತ್ ಶರ್ಮಾ ಹಾಗೂ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಭಾರತೀಯ ಪತ್ರಕರ್ತರ ಮೇಲೆ ಗರಂ ಆಗಿರುವ ಘಟನೆ ನಡೆದಿದೆ.
ಈ ಮೊದಲು ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿದ್ದು, ಡೈವರ್ಸ್‌ಗೆ ಮುಂದಾಗಿದ್ದಾರೆ ಎಂದೆಲ್ಲಾ ವರದಿಯಾಗಿತ್ತು. ಆದರೆ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಈ ಗಾಳಿ ಸುದ್ದಿಗಳಿಗೆ ಸ್ಪಷ್ಟನೆ ನೀಡುವ ಮೂಲಕ ಈ ವಿಚಾರಕ್ಕೆ ತೆರೆ ಎಳೆದಿದ್ದರು.
ಒಂದು ತಿಂಗಳು ತವರಿಗೆ ಹೊರಟುನಿಂತ ಧನಶ್ರೀ ವರ್ಮಾ! ಕುಣಿದು ಕುಪ್ಪಳಿಸಿದ ಯುಜುವೇಂದ್ರ ಚಹಲ್..!
ಪತ್ರಕರ್ತರ ಮೇಲೆ ರೋಹಿತ್ ಶರ್ಮಾ ಗರಂ:
ಅಭ್ಯಾಸ ನಡೆಸಿದ ಬಳಿಕ ರೋಹಿತ್ ಶರ್ಮಾ, ಯುಜುವೇಂದ್ರ ಚಹಲ್ ತಮಾಷೆಯಾಗಿ ಕಾಲ ಕಳೆಯುವ ಸಂದರ್ಭದಲ್ಲಿ ಅಲ್ಲೇ ಮೈದಾನದ ಸ್ಟ್ಯಾಂಡ್‌ನಲ್ಲಿ ನಿಂತಿದ್ದ ಪತ್ರಕರ್ತರನ್ನು ಉದ್ದೇಶಿಸಿ, ಜೋರಾಗಿಯೇ ಯುಜುವೇಂದ್ರ ಚಹಲ್ ದಾಂಪತ್ಯ ಜೀವನದ ಕುರಿತಂತೆ ಗಾಳಿ ಹಬ್ಬಿಸಿದ್ದು ಯಾರು ಅಂತ ಹೇಳಿ. ಇನ್ನು ಅವನ ಮೇಲೆ ವಾತಾವರಣ ಕೂಡಾ ಸರಿಯಿಲ್ಲ ಎಂದು ಕಥೆ ಬರೆಯಿರಿ ಎಂದು ಪತ್ರಕರ್ತರ ಕಾಲೆಳೆದಿದ್ದಾರೆ.
Rohit Sharma asking journalists on who started the fake rumours on Yuzvendra Chahal's personal life. 😂 pic.twitter.com/A6V9fkz9R1
— Mufaddal Vohra (@mufaddal_vohra)ಇದಕ್ಕೆ ಸಾಥ್ ನೀಡಿದ ಯುಜುವೇಂದ್ರ ಚಹಲ್, ಇದೊಂಥರ ಅಂತ್ಯಾಕ್ಷರಿ ಆಟ ನಡೆಯುತ್ತಿದೆ. ನಾವಿಲ್ಲಿ ಅಂತ್ಯಾಕ್ಷರಿ ಆಡಲು ಬಂದಿಲ್ಲ ಎಂದು ಪತ್ರಕರ್ತರ ಮೇಲೆ ಯುಜಿ ಅಸಮಾಧಾನ ಹೊರಹಾಕಿದ್ದಾರೆ. ಒಬ್ಬರ ಖಾಸಗಿ ಜೀವನದ ಕುರಿತಂತೆ ಆದಾರ ರಹಿತ ಗಾಳಿ ಸುದ್ದಿ ಹರಡುವವರ ಮೇಲೆ ಈ ಇಬ್ಬರು ಕ್ರಿಕೆಟಿಗರು ಗರಂ ಆಗಿದ್ದಾರೆ.
ಇನ್ನು ಏಷ್ಯಾಕಪ್ ಕ್ರಿಕೆಟ್ ಟೂರ್ನಿ ವಿಚಾರಕ್ಕೆ ಬರುವುದಾದರೇ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಭಾರತ, ಪಾಕಿಸ್ತಾನ ಸೇರಿ ಪ್ರಮುಖ ತಂಡಗಳಿಗೆ ಅಂತಿಮ ಸುತ್ತಿನ ತಯಾರಿ ನಡೆಸಲು ಏಷ್ಯಾಕಪ್ ಸಹಕಾರಿಯಾಗಲಿದೆ. 6 ವರ್ಷಗಳ ಬಳಿಕ ಟಿ20 ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ದುಬೈ ಮತ್ತು ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿವೆ.
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. 14 ಆವೃತ್ತಿಗಳಲ್ಲಿ 7 ಬಾರಿ ಚಾಂಪಿಯನ್ ಆಗಿದ್ದು 3 ಬಾರಿ ರನ್ನರ್-ಅಪ್ ಸ್ಥಾನ ಪಡೆದಿದೆ. ಇನ್ನು ಶ್ರೀಲಂಕಾ 5 ಬಾರಿ ಪ್ರಶಸ್ತಿ ಗೆದ್ದಿದ್ದು, ಪಾಕಿಸ್ತಾನ 2 ಬಾರಿ ಪ್ರಶಸ್ತಿ ಜಯಿಸಿದೆ. 2016, 2018ರಲ್ಲಿ ಚಾಂಪಿಯನ್ ಆಗಿದ್ದ ಭಾರತ, ಹ್ಯಾಟ್ರಿಕ್ ಪ್ರಶಸ್ತಿ ಜೊತೆ ಒಟ್ಟಾರೆ 8ನೇ ಬಾರಿಗೆ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.