
ಇಸ್ಲಾಮಾಬಾದ್(ಸೆ.05): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಎದುರು ಭಾರತ ಕ್ರಿಕೆಟ್ ತಂಡವು 5 ವಿಕೆಟ್‌ಗಳ ರೋಚಕ ಸೋಲು ಅನುಭವಿಸಿದೆ. ಟೀಂ ಇಂಡಿಯಾ ಸೋಲು ಅನುಭವಿಸುತ್ತಿದ್ದಂತೆಯೇ ಯುವ ವೇಗದ ಬೌಲರ್ ಆರ್ಶದೀಪ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ
23 ವರ್ಷದ ಯುವ ಎಡಗೈ ವೇಗದ ಬೌಲರ್ ಆರ್ಶದೀಪ್ ಸಿಂಗ್, ಪಾಕಿಸ್ತಾನ ಎದುರು 3.5 ಓವರ್ ಬೌಲಿಂಗ್ ಮಾಡಿ 27 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಆದರೆ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ಆಸಿಫ್ ಅಲಿ ಬ್ಯಾಟಿಂದ ಚಿಮ್ಮಿದ ಸುಲಭ ಕ್ಯಾಚ್ ಕೈಚೆಲ್ಲಿದ್ದು, ಟೀಂ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ತಮಗೆ ಸಿಕ್ಕ ಜೀವದಾನವನ್ನು ಭರ್ಜರಿಯಾಗಿಯೇ ಬಳಸಿಕೊಂಡ ಆಸಿಫ್ ಅಲಿ ಪಾಕಿಸ್ತಾನ ತಂಡವು ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು.
ಪಾಕಿಸ್ತಾನ ತಂಡವು ಗೆಲ್ಲಲು ಕೊನೆಯ 3 ಓವರ್‌ಗಳಲ್ಲಿ 34 ರನ್‌ಗಳ ಅಗತ್ಯವಿತ್ತು. 18ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಹೊತ್ತುಕೊಂಡಿದ್ದರು. ಈ ಸಂದರ್ಭದಲ್ಲಿ ಖಷ್‌ದಿಲ್ ಶಾ ಹಾಗೂ ಆಸಿಫ್ ಅಲಿ ಕ್ರೀಸ್‌ನಲ್ಲಿದ್ದರು. ಆ ಓವರ್‌ನ ಮೂರನೇ ಎಸೆತದಲ್ಲಿ ಆಸಿಫ್ ಅಲಿ ಸ್ವೀಪ್ ಶಾಟ್ ಮಾಡುವ ಯತ್ನದಲ್ಲಿ ಚೆಂಡು ಬ್ಯಾಟ್ ಅಂಚನ್ನು ಸವರಿ ಗಾಳಿಯಲ್ಲಿ ತೇಲಿ ಆರ್ಶದೀಪ್ ಸಿಂಗ್ ಬಳಿ ಬಂತು. ಈ ಸುಲಭ ಕ್ಯಾಚ್ ಅನ್ನು ಆರ್ಶದೀಪ್ ಸಿಂಗ್ ಕೈಚೆಲ್ಲಿದರು. ಹೀಗಾಗಿ ಆಸಿಫ್ ಅಲಿಗೆ ಜೀವದಾನ ಸಿಕ್ಕಿತು.
ಆಸಿಫ್ ಅಲಿ ಇದಾದ ಬಳಿಕ ಕೇವಲ 8 ಎಸೆತಗಳಲ್ಲಿ ಚುರುಕಿನ 16 ರನ್ ಸಿಡಿಸುವ ಮೂಲಕ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡಿದರು. ಹೀಗಾಗಿ ಹಲವು ಕ್ರಿಕೆಟ್ ಅಭಿಮಾನಿಗಳು ಟೀಂ ಇಂಡಿಯಾ ಸೋಲಿಗೆ ಆರ್ಶದೀಪ್ ಸಿಂಗ್ ಅವರೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ. ಹೀಗಿದ್ದೂ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಅಭಿನವ್ ಮುಕುಂದ್ ಸೇರಿದಂತೆ ಹಲವು ಕ್ರಿಕೆಟಿಗರು ಆರ್ಶದೀಪ್ ಬೆನ್ನಿಗೆ ನಿಂತಿದ್ದಾರೆ.
ಕ್ರಿಕೆಟಿಗ ಆರ್ಶದೀಪ್ ಸಿಂಗ್ ಕುರಿತು ಸುಳ್ಳು ಮಾಹಿತಿ ತುಂಬಿದ ವಿಕಿಪೀಡಿಯಾಗೆ ಕೇಂದ್ರದಿಂದ ಸಮನ್ಸ್ ಜಾರಿ!
ಭಾರತದ ಕ್ರಿಕೆಟಿಗರು ಮಾತ್ರವಲ್ಲದೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಕೂಡಾ ಟ್ವೀಟ್ ಮೂಲಕ ಆರ್ಶದೀಪ್ ಸಿಂಗ್‌ಗೆ ಬೆಂಬಲ ನೀಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ನಾನೊಂದು ಮನವಿ ಮಾಡುತ್ತಿದ್ದೇನೆ. ನಾವೆಲ್ಲರೂ ಮನುಷ್ಯರೆ, ಕ್ರೀಡೆಯಲ್ಲಿ ಈ ರೀತಿ ಪ್ರಮಾದಗಳು ಆಗುತ್ತವೆ. ಇದನ್ನೇ ದೊಡ್ಡ ತಪ್ಪು ಎಂದು ಯಾರೊಬ್ಬರನ್ನಯ ಅವಮಾನಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡಾ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಪರಿಸ್ಥಿತಿ ಸಾಕಷ್ಟು ಒತ್ತಡದಿಂದ ಕೂಡಿತ್ತು. ಇಂದೊಂದು ಸಾಕಷ್ಟು ಒತ್ತಡದಿಂದ ಕೂಡಿದ್ದ ಪಂದ್ಯವಾಗಿದ್ದರಿಂದ ತಪ್ಪುಗಳಾಗಿವೆ. ನನಗಿನ್ನೂ ನೆನಪಿದೆ, ನಾನು ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಆಡುವ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ದ ಶಾಹಿದ್ ಅಫ್ರಿದಿ ಬೌಲಿಂಗ್‌ನಲ್ಲಿ ಕೆಟ್ಟ ಹೊಡೆತ ಹೊಡೆದು ವಿಕೆಟ್ ಒಪ್ಪಿಸಿದ್ದೆ. ಅಂದು ಬೆಳಗ್ಗೆ 5 ಗಂಟೆಯವರೆಗೆ ಮೇಲ್ಚಾವಣಿ ನೋಡುತ್ತಾ ಇದ್ದೆ, ರಾತ್ರಿಯಿಡಿ ನಿದ್ರೆ ಮಾಡಿರಲಿಲ್ಲ. ವೃತ್ತಿಜೀವನದಲ್ಲಿ ಇದೆಲ್ಲ ಸಹಜ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.