
ದುಬೈ(ಆ.29) ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಕೊನೆಗೂ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಯಶಸ್ವಿಯಾಗಿದೆ. ಈ ಮೂಲಕ 10 ತಿಂಗಳ ಹಿಂದಷ್ಟೇ ಇದೇ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅನುಭವಿಸಿದ್ದ ಹೀನಾಯ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಮೈದಾನದಲ್ಲಿ ಕಾದಾಡುತ್ತಿವೆ ಎಂದರೇ ಇಡೀ ಕ್ರಿಕೆಟ್ ಜಗತ್ತೇ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುತ್ತದೆ. ಇನ್ನು ಈ ಪಂದ್ಯವನ್ನು ಮೊಬೈಲ್ ಮೂಲಕ ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ನೋಡಿದವರ ಸಂಖ್ಯೆ 1.30 ಕೋಟಿ ಎಂದರೇ ನೀವೇ ಯೋಚಿಸಿ. ರಾಜತಾಂತ್ರಿಕ ಕಾರಣಗಳಿಂದಾಗಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಹೀಗಾಗಿ ಹಲವು ದೇಶಗಳು ಪಾಲ್ಗೊಳ್ಳುವ ಟೂರ್ನಿಗಳಲ್ಲಿ(ಐಸಿಸಿ ಟೂರ್ನಿ, ಏಷ್ಯಾಕಪ್) ಮಾತ್ರ ಈ ಎರಡು ತಂಡಗಳು ಸೆಣಸಾಡುವುದರಿಂದಾಗಿ ಸಹಜವಾಗಿಯೇ ಈ ಎರಡು ತಂಡಗಳ ನಡುವಿನ ಪಂದ್ಯ ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಉತ್ಸುಕರಾಗಿರುತ್ತಾರೆ.
ಇನ್ನು 15ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡವು ಮೊಹಮ್ಮದ್ ರಿಜ್ವಾನ್ ಸಮಯೋಚಿತ ಬ್ಯಾಟಿಂಗ್(42) ನೆರವಿನಿಂದ 147 ರನ್‌ಗಳ ಗೌರವಾನ್ವಿತ ಮೊತ್ತ ಕಲೆ ಹಾಕಿತು. ಭಾರತ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಉರುಳಿಸಿದರೇ, ಹಾರ್ದಿಕ್ ಪಾಂಡ್ಯ 3, ಆರ್ಶದೀಪ್ ಸಿಂಗ್ 2 ಹಾಗೂ ಆವೇಶ್ ಖಾನ್ ಒಂದು ವಿಕೆಟ್ ಪಡೆದರು.
ಮಸ್ತ್ ಮಜಾ ಬಂತು; ಪಾಕ್ ಮಣಿಸಿದ ಟೀಂ ಇಂಡಿಯಾಗೆ ವಿನೂತನವಾಗಿ ಅಭಿನಂದಿಸಿದ ಸೆಹ್ವಾಗ್, ತೆಂಡುಲ್ಕರ್..!
ಇನ್ನು ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಚೊಚ್ಚಲ ಟಿ20 ಪಂದ್ಯವನ್ನಾಡಿದ ನಸೀಂ ಶಾ ಶಾಕ್ ನೀಡಿದರು. ಕೆ ಎಲ್ ರಾಹುಲ್ ಶೂನ್ಯ ಸುತ್ತಿ ವಿಕೆಟ್ ಒಪ್ಪಿಸಿದರು. ಆದರೆ ಎರಡನೇ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ 49 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವಿರಾಟ್ ಕೊಹ್ಲಿ 35 ರನ್ ಬಾರಿಸಿದರು. ಇನ್ನು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕದ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರವೀಂದ್ರ ಜಡೇಜಾ 35 ರನ್ ಬಾರಿಸಿ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಬೌಲಿಂಗ್‌ನಲ್ಲಿ ಪ್ರಮುಖ 3 ವಿಕೆಟ್ ಕಬಳಿಸಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ, ಬ್ಯಾಟಿಂಗ್‌ನಲ್ಲಿ ಅಜೇಯ 33 ರನ್ ಬಾರಿಸುವ ಮೂಲಕ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೀಮ್ಸ್‌ಗಳು ವೈರಲ್ ಆಗಿವೆ. ಅಂತಹ ಬೆಸ್ಟ್ ಮೀಮ್ಸ್‌ಗಳು ಇಲ್ಲಿವೆ ನೋಡಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.