
ಬರ್ಮಿಂಗ್ಹ್ಯಾಮ್(ಜೂ.16): ಇಂಗ್ಲೆಂಡ್ ಹಾಗೂ ಆಸ್ಪ್ರೇಲಿಯಾ ನಡುವಿನ ಮಹತ್ವದ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯಕ್ಕೆ ಬರ್ಮಿಂಗ್ಹ್ಯಾಮ್ ಆತಿಥ್ಯ ವಹಿಸಲಿದೆ. ಇದು 2023-25ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಸರಣಿಯಾಗಿದ್ದು, ಬದ್ಧವೈರಿಗಳ ನಡುವಿನ ಕಾದಾಟ ಕುತೂಹಲ ಮೂಡಿಸಿದೆ.
ಆಸ್ಪ್ರೇಲಿಯಾದಲ್ಲಿ ನಡೆದಿದ್ದ 2021-22ರ ಸರಣಿಯಲ್ಲಿ ಇಂಗ್ಲೆಂಡ್ ಎದುರು ಆಸೀಸ್ 4-0 ಕ್ಲೀನ್ ಸ್ವೀಪ್ ಸಾಧಿಸಿತ್ತು. ಇಂಗ್ಲೆಂಡ್ 2015ರಲ್ಲಿ ಕೊನೆ ಬಾರಿ ಸರಣಿ ಗೆದ್ದಿದ್ದು, ಈ ಬಾರಿ ತವರಿನಲ್ಲಿ ಮತ್ತೊಮ್ಮೆ ಸರಣಿ ಕೈವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ನಲ್ಲೇ ಭಾರತವನ್ನು ಮಣಿಸಿ ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದಿದ್ದ ಆಸೀಸ್ ತುಂಬು ಆತ್ಮವಿಶ್ವಾಸದೊಂದಿಗೆ ಸರಣಿಗೆ ಕಾಲಿಡಲಿದೆ.
ಬಜ್ ಬಾಲ್ ಆಟ ಮುಂದುವರೆಸುತ್ತೇವೆ ಎಂದ ಬೆನ್ ಸ್ಟೋಕ್ಸ್: ಜೋ ರೂಟ್ ನಾಯಕತ್ವದ ಕ್ರಿಸ್ ಸಿಲ್ವರ್‌ವುಡ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಬೆನ್ ಸ್ಟೋಕ್ಸ್ ಟೆಸ್ಟ್ ನಾಯಕರಾಗಿ ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ಆಕ್ರಮಣಕಾರಿ ಆಟದ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಬಜ್ ಬಾಲ್ ಶೈಲಿಯ ಮೂಲಕ ಇಂಗ್ಲೆಂಡ್ ತಂಡವು ಕಳೆದ 13 ಟೆಸ್ಟ್ ಪಂದ್ಯಗಳ ಪೈಕಿ 11 ಪಂದ್ಯಗಳಲ್ಲಿ ಗೆಲುವಿನ ಗೆಲುವಿನ ನಗೆ ಬೀರಿದೆ.
Asia Cup 2023: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪಾಕ್, ಶ್ರೀಲಂಕಾ ಹೈಬ್ರಿಡ್ ಆತಿಥ್ಯ!
"ಇದೇ ರಣತಂತ್ರವನ್ನು ಮುಂದುವರೆಸಬೇಕಾ ಎನ್ನುವುದಕ್ಕೆ, ಕೆಲವೊಂದು ಪ್ರಶ್ನೆಗಳಿಗೆ ನನ್ನಷ್ಟಕ್ಕೆ ನಾನೇ ಉತ್ತರಗಳನ್ನು ಕಂಡುಕೊಂಡಿದ್ದೇನೆ. ವೈಯುಕ್ತಿಕವಾಗಿ ಪ್ರತಿಯೊಬ್ಬರಿಗೂ ಹಾಗೂ ತಂಡಕ್ಕೂ ಈ ರಣತಂತ್ರ ತುಂಬಾ ಸ್ಪಷ್ಟವಾಗಿ ಅರ್ಥವಾಗಿದೆ ಹಾಗೂ ಅನುಕೂಲವೂ ಆಗಿದೆ. ನಾವಿದರಲ್ಲಿ ಯಶಸ್ಸನ್ನು ಗಳಿಸಿದ್ದೇವೆ. ಈ ರಣತಂತ್ರವು ಯಾವಾಗಲೂ ಗೆಲುವು ತಂದುಕೊಡುತ್ತದೆ ಅಥವಾ ಯಾವಾಗಲೂ ಸೋಲು ಕಾಣುತ್ತೇವೆ ಎಂದರ್ಥವಲ್ಲ, ಆದರೆ ಇದು ಡ್ರೆಸ್ಸಿಂಗ್ ರೂಂನಲ್ಲಿರುವ ಪ್ರತಿಯೊಬ್ಬರಿಗೂ ಹೊಸ ಹುರುಪು ತಂದುಕೊಡುತ್ತಿದೆ. ಹೀಗಾಗಿ ಎದುರಾಳಿ ಯಾರೇ ಇದ್ದರೂ ನಮ್ಮ ಆಕ್ರಮಣಕಾರಿ ಮನೋಭಾವ ಬದಲಾಗುವುದಿಲ್ಲ" ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ
ಸಂಭಾವ್ಯ ತಂಡಗಳು ಹೀಗಿವೆ:
ಆಸ್ಟ್ರೇಲಿಯಾ:
ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕೇರಿ(ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೋಲೆಂಡ್, ನೇಥನ್ ಲಯನ್
ಇಂಗ್ಲೆಂಡ್:
ಬೆನ್ ಡುಕೆಟ್, ಜಾಕ್ ಕ್ರಾವ್ಲಿ, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜಾನಿ ಬೇರ್‌ಸ್ಟೋವ್(ವಿಕೆಟ್ ಕೀಪರ್), ಮೋಯಿನ್ ಅಲಿ, ಓಲಿ ರಾಬಿನ್‌ಸನ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್‌ಸನ್.
ಪಂದ್ಯ ಆರಂಭ: ಮಧ್ಯಾಹ್ನ 3.30
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.