Ashes 2021: ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ಮತ್ತೆ ಪಂಚ್‌ ಕೊಟ್ಟ ಆಸೀಸ್‌

By Suvarna NewsFirst Published Dec 26, 2021, 3:35 PM IST
Highlights

*  ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಮತ್ತೆ ನೀರಸ ಬ್ಯಾಟಿಂಗ್ ಪ್ರದರ್ಶನ ತೋರಿದ ಇಂಗ್ಲೆಂಡ್‌

* ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಆಲೌಟ್‌ ಆದ ಇಂಗ್ಲೆಂಡ್

* ಆಕರ್ಷಕ ಅರ್ಧಶತಕದ ಮೂಲಕ ಆಸರೆಯಾದ ನಾಯಕ ಜೋ ರೂಟ್

ಮೆಲ್ಬೊರ್ನ್‌(ಡಿ.26): ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ತಂಡಗಳ ನಡುವಿನ ಆ್ಯಷಸ್ ಟೆಸ್ಟ್ ಸರಣಿಯ (Ashes Test Series) ಮೂರನೇ ಪಂದ್ಯವಾದ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದಲ್ಲಿ ಮತ್ತೊಮ್ಮೆ ಇಂಗ್ಲೆಂಡ್‌ ಎದುರು ಆತಿಥೇಯ ಆಸ್ಟ್ರೇಲಿಯಾ ತಂಡವು (Australia Cricket Team) ಭರ್ಜರಿ ಪ್ರದರ್ಶನ ತೋರಿದೆ. ಮೂರನೇ ಟೆಸ್ಟ್‌ ಪಂದ್ಯದಲ್ಲಿ ಮತ್ತೊಮ್ಮೆ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಇಂಗ್ಲೆಂಡ್ ತಂಡವು (England Cricket Team) ಮೊದಲ ಇನಿಂಗ್ಸ್‌ನಲ್ಲಿ ಕೇವಲ 185 ರನ್‌ಗಳಿಗೆ ಸರ್ವಪತನ ಕಂಡಿದೆ. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, ಮೊದಲ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 61 ರನ್ ಬಾರಿಸಿದ್ದು, ಇನ್ನು ಕೇವಲ 124 ರನ್‌ಗಳ ಹಿನ್ನೆಡೆಯಲ್ಲಿದೆ.

ಇಲ್ಲಿನ ಮೆಲ್ಬೊರ್ನ್‌ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್‌ (Pat Cummins) ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡದ ಆರಂಭಿಕರು ಬದಲಾದರು, ಪರಿಸ್ಥಿತಿ ಬದಲಾಗಲಿಲ್ಲ. ಆರಂಭಿಕ ಬ್ಯಾಟರ್ ಹಸೀಬ್ ಹಮೀದ್ ಖಾತೆ ತೆರೆಯುವ ಮುನ್ನವೇ ಪ್ಯಾಟ್‌ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ ಸೇರಿದರು. ಇನ್ನು ಮತ್ತೋರ್ವ ಅರಂಭಿಕ ಬ್ಯಾಟರ್ ಜಾಕ್ ಕ್ರಾವ್ಲಿ(12) ಹಾಗೂ ಡೇವಿಡ್ ಮಲಾನ್‌ಗೂ(14) ಆಸೀಸ್‌ ನಾಯಕ ಪ್ಯಾಟ್ ಕಮಿನ್ಸ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಅವಕಾಶ ನೀಡಲಿಲ್ಲ.
  
ಮತ್ತೆ ನಾಯಕನ ಆಟವಾಡಿದ ಜೋ ರೂಟ್‌: ಅಗ್ರಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ ಸಹಾ, ಮಧ್ಯಮ ಕ್ರಮಾಂಕದಲ್ಲಿ ನಾಯಕ ಜೋ ರೂಟ್ ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಒಟ್ಟು 82 ಎಸೆತಗಳನ್ನು ಎದುರಿಸಿದ ಜೋ ರೂಟ್‌, 4 ಬೌಂಡರಿ ಸಹಿತ 50 ರನ್‌ ಬಾರಿಸಿ ಮಿಚೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು.

Ind vs SA, Boxing Day Test: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್‌ ಬೆನ್ ಸ್ಟೋಕ್ಸ್ (Ben Stokes) ಹಾಗೂ ಜಾನಿ ಬೇರ್‌ಸ್ಟೋವ್‌ ಕೆಲಕಾಲ ಆಸೀಸ್‌ ಬೌಲರ್‌ಗಳನ್ನು ಕಾಡಿದರಾದರೂ, ದೊಡ್ಡ ಮೊತ್ತ ಗಳಿಸಲು ಯಶಸ್ವಿಯಾಗಲಿಲ್ಲ. ಬೆನ್ ಸ್ಟೋಕ್ಸ್‌ 25 ರನ್‌ ಬಾರಿಸಿ ಕ್ಯಾಮರೋನ್ ಗ್ರೀನ್‌ಗೆ ವಿಕೆಟ್‌ ಒಪ್ಪಿಸಿದರೆ, ಜಾನಿ ಬೇರ್‌ಸ್ಟೋವ್‌ 35 ರನ್‌ ಬಾರಿಸಿ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್‌ಗೆ ಎರಡನೇ ಬಲಿಯಾದರು. ವಿಕೆಟ್‌ ಕೀಪರ್ ಬ್ಯಾಟರ್‌ ಜೋಸ್ ಬಟ್ಲರ್ (Jos Buttler) 3 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರೆ, ಮಾರ್ಕ್‌ ವುಡ್‌ 6 ರನ್‌ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಕೊನೆಯಲ್ಲಿ ರಾಬಿನ್‌ಸನ್‌ 22 ಹಾಗೂ ಜಾಕ್ ಲೀಚ್ 13 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಸಮೀಪ ಕೊಂಡೊಯ್ಯದರು.

Australia finish on a high despite losing David Warner late in the day. | | https://t.co/QKpJv6gXeP pic.twitter.com/u7lF0k0dyI

— ICC (@ICC)

ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ಶಿಸ್ತುಬದ್ದ ದಾಳಿಯ ಮೂಲಕ ಗಮನ ಸೆಳೆಯಿತು. ನಾಯಕ ಪ್ಯಾಟ್ ಕಮಿನ್ಸ್ ಹಾಗೂ ನೇಥನ್ ಲಯನ್‌ ತಲಾ 3 ವಿಕೆಟ್ ಪಡೆದರು. ಇನ್ನು ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದರೆ, ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬೊಲ್ಯಾಂಡ್ ಹಾಗೂ ಕ್ಯಾಮರೋನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆದರು.

ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ, ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಮಾರ್ಕಸ್‌ ಹ್ಯಾರಿಸ್ ಹಾಗೂ ಡೇವಿಡ್ ವಾರ್ನರ್ (David Warner) ಜೋಡಿ 14.1 ಓವರ್‌ಗಳಲ್ಲಿ 57 ರನ್‌ಗಳ ಜತೆಯಾಟ ನಿಭಾಯಿಸಿತು. ಮೊದಲೆರಡು ಟೆಸ್ಟ್‌ ಪಂದ್ಯಗಳಲ್ಲಿ ಕೆಲವೇ ರನ್‌ಗಳ ಅಂತರದಲ್ಲಿ ಶತಕವಂಚಿತರಾಗಿದ್ದ ಡೇವಿಡ್‌ ವಾರ್ನರ್‌, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 42 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 38 ರನ್‌ ಬಾರಿಸಿ ಜೇಮ್ಸ್‌ ಆ್ಯಂಡರ್‌ಸನ್‌ಗೆ ವಿಕೆಟ್‌ ಒಪ್ಪಿಸಿದರು. ಸದ್ಯ ಮಾರ್ಕಸ್ ಹ್ಯಾರಿಸ್(20) ಹಾಗೂ ನೈಟ್‌ ವಾಚ್‌ಮನ್ ನೇಥನ್ ಲಯನ್‌(0) ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 185/10(ಮೊದಲ ಇನಿಂಗ್ಸ್‌)
ಜೋ ರೂಟ್‌: 50
ನೇಥನ್ ಲಯನ್: 36/3

ಆಸ್ಟ್ರೇಲಿಯಾ: 61/1
ಡೇವಿಡ್ ವಾರ್ನರ್: 38
ಜೇಮ್ಸ್ ಆ್ಯಂಡರ್‌ಸನ್: 14/1
(* ಮೊದಲ ದಿನದಾಟದಂತ್ಯದ ವೇಳೆಗೆ)

click me!