
ಬೆಂಗಳೂರು(ನ.08): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಮೀಪಿಸಿದ್ದು, ಇದೀಗ ಸೆಮಿಫೈನಲ್ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯು ಹಲವು ಅಚ್ಚರಿಯ ಫಲಿತಾಂಶಗಳಿಗೆ ಸಾಕ್ಷಿಯಾಗಿವೆ. ಟಿ20 ವಿಶ್ವಕಪ್ ಟೂರ್ನಿಯ ಮೊದಲ ದಿನದಿಂದ ಹಿಡಿದು ಸೂಪರ್ 12 ಹಂತದ ಕೊನೆಯ ದಿನದವರೆಗೂ ಹಲವು ಅಚ್ಚರಿಯ ಫಲಿತಾಂಶಗಳಿಗೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಇದೀಗ ಭಾರತದ ಬ್ಯುಸಿನೆಸ್ ದಿಗ್ಗಜ ಆನಂದ್ ಮಹೀಂದ್ರಾ, ಟಿ20 ವಿಶ್ವಕಪ್ ಟೂರ್ನಿಯ ಕುರಿತಂತೆ ಫನ್ನಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
"ನಾನು ಈ ನಾಯಿಯನ್ನು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವವರು ಯಾರು ಎಂದು ನೋಡಿ ಹೇಳು ಎಂದು ಕೇಳಿದೆ. ಆಗ ಈ ನಾಯಿಯು ತನ್ನೆಲ್ಲಾ ಕೌಶಲ್ಯಗಳನ್ನು ಬಳಸಿಕೊಂಡು ಗೋಡೆಯನ್ನು ಹತ್ತಿ ನೋಡಿದೆ. ನಿಮ್ಮ ಪ್ರಕಾರ ಅದು ಏನು ನೋಡಿರಬಹುದು ಹೇಳಿ ? ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋದಲ್ಲಿ ನಾಯಿಯೊಂದು ಗೋಡೆ ಹಾಗೂ ತೆಂಗಿನ ಮರದ ನಡುವೆ ಬ್ಯಾಲೆನ್ಸ್ ಮಾಡಿಕೊಂಡು ಗೋಡೆಯ ಮೇಲೆ ಹತ್ತುವ ವಿಡಿಯೋ ಇದಾಗಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಟಿ20 ವಿಶ್ವಕಪ್ ಜ್ವರ ಜೋರಾಗಿದ್ದು, ಚುಟುಕು ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆನಂದ್ ಮಹೀಂದ್ರಾ ಹಂಚಿಕೊಂಡ ವಿಡಿಯೋವನ್ನು 29 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 5 ಲಕ್ಷಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಿಸಲ್ಪಟ್ಟಿದೆ.
T20 World Cup ಬಲಿಷ್ಠ ತಂಡಗಳಿಗೆ ಕ್ರಿಕೆಟ್ ಶಿಶುಗಳ ಶಾಕ್ ಟ್ರೀಟ್‌ಮೆಂಟ್, ಬಲಿಬಿದ್ದ ಬಲಾಢ್ಯರು..!
ಸದ್ಯ ನವೆಂಬರ್ 09ರಂದು ನಡೆಯಲಿರುವ ಮೊದಲ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನೊಂದಡೆ ನವೆಂಬರ್ 10ರಂದು ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ದ ಕಾದಾಡಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಡಿಲೇಡ್ ಓವಲ್ ಮೈದಾನ ಸಾಕ್ಷಿಯಾಗಲಿದೆ. ಸೆಮಿಫೈನಲ್‌ನಲ್ಲಿ ವಿಜೇತವಾಗುವ ತಂಡಗಳು ನವೆಂಬರ್ 13ರಂದು ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಭಾರತ ಸೆಮೀಸ್ ಪಂದ್ಯದ ಟಿಕೆಟ್ ಸೋಲ್ಡ್‌ಔಟ್
ಐಸಿಸಿ ಟಿ20 ವಿಶ್ವಕಪ್ ಗುರುವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿದೆ ಎಂದು ತಿಳಿದುಬಂದಿದೆ. ಅಡಿಲೇಡ್ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯಗಳು ನಡೆಯಲಿದ್ದು, ಮಾರಾಟಕ್ಕಿಟ್ಟ ಹೆಚ್ಚುವರಿ ಟಿಕೆಟ್‌ಗಳು ಕೂಡಾ ಕೆಲ ಗಂಟೆಗಳಲ್ಲೇ ಮಾರಾಟವಾಗಿದೆ ಎಂದು ವರದಿಯಾಗಿದೆ. ಕ್ರೀಡಾಂಗಣ 53,000 ಆಸನ ಸಾಮರ್ಥ್ಯ ಹೊಂದಿದ್ದು, ಬಹುತೇಕ ಆಸನಗಳು ಪೂರ್ತಿಯಾಗುವ ಸಾಧ್ಯತೆ ಇದೆ. ಇದೇ ವೇಳೆ ಸಿಡ್ನಿಯಿಂದ ಅಡಿಲೇಡ್ ಪ್ರಯಾಣಿಸುವ ವಿಮಾನದ ಟಿಕೆಟ್ ಬೆಲೆಗಳೂ ಮೂರರಿಂದ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಕೆಲ ವರದಿಗಳು ತಿಳಿಸಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.