360 ಡಿಗ್ರಿ ಬ್ಯಾಟಿಂಗ್ ಸೀಕ್ರೇಟ್‌: ರಬ್ಬರ್‌ ಬಾಲಲ್ಲಿ ಕ್ರಿಕೆಟ್‌ ಆಡ್ತಿದ್ದೆ ಎಂದ ಸೂರ್ಯಕುಮಾರ್‌

By Naveen KodaseFirst Published Nov 8, 2022, 12:05 PM IST
Highlights

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ಸೂರ್ಯಕುಮಾರ್ ಯಾದವ್
ತಮ್ಮ ವಿಶಿಷ್ಠ ಶೈಲಿ ಬ್ಯಾಟಿಂಗ್ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ಸೂರ್ಯ
ಜಿಂಬಾಬ್ವೆ ಎದುರು ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ ಸೂರ್ಯಕುಮಾರ್ ಯಾದವ್

ಅಡಿಲೇಡ್‌(ನ.08): ತಮ್ಮ ಆಕರ್ಷಕ ಹೊಡೆತಗಳ ಮೂಲಕ ಕ್ರೀಡಾಭಿಮಾನಿಗಳನ್ನು ಮನರಂಜಿಸುತ್ತಿರುವ ಭಾರತದ ತಾರಾ ಬ್ಯಾಟರ್‌ ಸೂರ‍್ಯಕುಮಾರ್‌ ಯಾದವ್‌, ಅದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಮಿಂಚಿದ್ದ ಸೂರ್ಯಕುಮಾರ್ ಯಾದವ್, ಅಶ್ವಿನ್‌ ಜತೆಗಿನ ಸಂದರ್ಶನದ ವೇಳೆಯಲ್ಲಿ ಅಪರೂಪದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಬಿಸಿಸಿಐ ಬಿಡುಗಡೆ ಮಾಡಿದ ಸಂದರ್ಶನದಲ್ಲಿ ರವಿಚಂದ್ರನ್ ಅಶ್ವಿನ್, ತಾವು ನೆಟ್ಸ್‌ನಲ್ಲಿ ಎಲ್ಲಿಯೂ ಈ ರೀತಿ ಚೆಂಡನ್ನು ನಾನಾ ದಿಕ್ಕುಗಳಿಗೆ ಅಟ್ಟುವುದನ್ನು ಗಮನಿಸಿಲ್ಲ. ಆದರೆ ಮೈದಾನದಲ್ಲಿ ಮಾತ್ರ ನೀವು ಈ ರೀತಿ ಆಡುವುದರ ರಹಸ್ಯವೇನು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ರಬ್ಬರ್‌ ಬಾಲ್‌ನಲ್ಲಿ ಕ್ರಿಕೆಟ್‌ ಆಡುತ್ತಿದ್ದಾಗ ಆ ರೀತಿಯ ಶಾಟ್‌ಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುತ್ತಿದ್ದೆ. ಬೌಲರ್‌ ಯಾವ ರೀತಿ ಬೌಲ್‌ ಮಾಡುತ್ತಾನೆ ಎಂದು ಮೊದಲೇ ಅರ್ಥೈಸಿದರೆ ಈ ರೀತಿಯ ಶಾಟ್‌ಗಳಿಗೆ ಸುಲಭವಾಗುತ್ತದೆ. ಅಲ್ಲದೇ ನಮ್ಮ ಹಿಂದಿನ ಬೌಂಡರಿ ಎಷ್ಟು ದೂರ ಎಂಬುದೂ ಗೊತ್ತಿರಬೇಕು. ಚೆಂಡಿನ ವೇಗಕ್ಕೆ ಸರಿಯಾಗಿ ಟೈಮಿಂಗ್‌ ಮಾಡಿದರೆ ಸ್ವೀಪ್‌ ಶಾಟ್‌, ಸ್ಕೂಪ್‌ ಮೂಲಕ ಬಾಲನ್ನು ಬೌಂಡರಿ ಗೆರೆ ದಾಟಿಸಬಹುದು. ಕೆಲವೊಮ್ಮೆ ಬ್ಯಾಟಿಂಗ್‌ ವೇಳೆ ಬೌಂಡರಿ ಬಾರಿಸಲು ಆಗದಿದ್ದರೂ ನಾನು ಅದಕ್ಕೆ ಪ್ರಯತ್ನಿಸುತ್ತೇನೆ ಎಂದಿದ್ದಾರೆ.

From playing exquisite shots all around the park to excelling with the bat in the ⚡️⚡️ interviews our very own 'Mr. 360' - 🙌 🙌 - By

Full interview 🎥 🔽 | https://t.co/zQ6U4Fk7JR pic.twitter.com/S5a5Q6Uxed

— BCCI (@BCCI)

ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಕೇವಲ 25 ಎಸೆತಗಳಲ್ಲಿ ಅಜೇಯ 61 ರನ್ ಬಾರಿಸುವ ಮೂಲಕ ಭಾರತ ತಂಡವು ಸವಾಲಿನ ಮೊತ್ತ ಕಲೆಹಾಕಲು ನೆರವಾಗಿದ್ದರು. ಇನ್ನು ಇದೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕ್ಯಾಲೆಂಡರ್‌ ವರ್ಷವೊಂದರಲ್ಲಿ ಸಾವಿರ ರನ್ ಬಾರಿಸಿದ ಜಗತ್ತಿನ ಎರಡನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು 2021ರಲ್ಲಿ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್, ಕ್ಯಾಲೆಂಡರ್ ವರ್ಷವೊಂದರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸಾವಿರ ರನ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.  

T20 World Cup ಬಲಿಷ್ಠ ತಂಡಗಳಿಗೆ ಕ್ರಿಕೆಟ್ ಶಿಶುಗಳ ಶಾಕ್ ಟ್ರೀಟ್‌ಮೆಂಟ್, ಬಲಿಬಿದ್ದ ಬಲಾಢ್ಯರು..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್, 5 ಪಂದ್ಯಗಳನ್ನಾಡಿ 75ರ ಬ್ಯಾಟಿಂಗ್ ಸರಾಸರಿಯಲ್ಲಿ 225 ರನ್ ಬಾರಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಸೇರಿವೆ. ಇದೀಗ ಸೂರ್ಯಕುಮಾರ್ ಯಾದವ್, ನವೆಂಬರ್ 10ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ದದ ಸೆಮಿಫೈನಲ್‌ನಲ್ಲಿ ಮತ್ತೊಂದು ಸ್ಪೋಟಕ ಇನಿಂಗ್ಸ್ ಆಡುವ ವಿಶ್ವಾಸದಲ್ಲಿದ್ದಾರೆ. ಸದ್ಯ ಸೂರ್ಯಕುಮಾರ್ ಯಾದವ್ ಪ್ರಸಕ್ತ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 225 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದವರೇ ಆದ ಮಾಜಿ ನಾಯಕ ವಿರಾಟ್ ಕೊಹ್ಲಿ 5 ಪಂದ್ಯಗಳನ್ನಾಡಿ 123ರ ಬ್ಯಾಟಿಂಗ್ ಸರಾಸರಿ 246 ರನ್ ಬಾರಿಸುವ ಮೂಲಕ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. 

ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿಯೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಭರ್ಜರಿಯಾಗಿ ಸೆಮೀಸ್‌ಗೆ ಲಗ್ಗೆಯಿಟ್ಟಿದ್ದು, ಎರಡನೇ ಸೆಮೀಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ, ಫೈನಲ್ ಪ್ರವೇಶಿಸಿಲು ಎದುರು ನೋಡುತ್ತಿದೆ.

click me!