
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವುದರೊಂದಿಗೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ವಿಯಾಗಿ ಮುಕ್ತಾಯವಾಗಿದೆ. ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಟೂರ್ನಿಯುದ್ದಕ್ಕೂ ಅಸಾಧಾರಣ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿತ್ತು. ಮೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ಎದುರಿನ ಫೈನಲ್‌ನಲ್ಲಿ ಅನಾಯಾಸವಾಗಿ ಗೆಲುವು ದಾಖಲಿಸುವ ಮೂಲಕ ಮತ್ತೊಮ್ಮೆ ಟ್ರೋಫಿ ಜಯಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.
19ನೇ ಸೀಸನ್ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಪೈಕಿ ಹೆಚ್ಚು ಗಮನ ಸೆಳೆದಿದ್ದು ಅನುಭವಿ ವೇಗಿ, ಸ್ವಿಂಗ್ ಕಿಂಗ್ ಖ್ಯಾತಿಯ ಭುವನೇಶ್ವರ್ ಕುಮಾರ್. ಭುವಿ 2026ರ ಐಪಿಎಲ್ ಟೂರ್ನಿಯಲ್ಲಿ ಕೇವಲ 16 ಪಂದ್ಯಗಳನ್ನಾಡಿ 28 ವಿಕೆಟ್ ಕಬಳಿಸುವ ಮೂಲಕ ಕೇವಲ ಒಂದು ವಿಕೆಟ್ ಅಂತರದಲ್ಲಿ ಪರ್ಪಲ್ ಕ್ಯಾಪ್ ಗೆಲ್ಲುವ ಅವಕಾಶದಿಂದ ವಂಚಿತರಾದರು. ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ಕಗಿಸೋ ರಬಾಡ 17 ಮ್ಯಾಚ್ ಆಡಿ 29 ವಿಕೆಟ್ ಕಬಳಿಸಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು.
ಭುವನೇಶ್ವರ್ ಕುಮಾರ್ 19ನೇ ಸೀಸನ್ ಐಪಿಎಲ್ ಟೂರ್ನಿಯುದ್ದಕ್ಕೂ ಅತ್ಯಂತ ಶಿಸ್ತುಬದ್ದ ಬೌಲಿಂಗ್ ನಡೆಸಿದ ರೀತಿಯನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೊಂಡಾಡಿದ್ದಾರೆ. 'ಆಟಗಾರರ ಪ್ರದರ್ಶನವೇ ಆಯ್ಕೆಯ ಮಾನದಂಡ ಎನ್ನುವುದಾದರೇ, ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕು ಎಂದನಿಸುವುದಿಲ್ಲವೇ? ಇದಕ್ಕಿಂತ ಅವರು ಇನ್ನೇನು ಮಾಡಲು ಸಾಧ್ಯ? 2028ರ ಟಿ20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಭುವನೇಶ್ವರ್ ಕುಮಾರ್‌ಗೆ ಭಾರತ ತಂಡದಲ್ಲಿ ಮಣೆಹಾಕಬೇಕು ಎಂದು ಆಕಾಶ್ ಚೋಪ್ರಾ ಒತ್ತಾಯಿಸಿದ್ದಾರೆ.
ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ಬೆನ್ನೆಲುಬಾಗಿ ಗುರುತಿಸಿಕೊಂಡಿರುವ ಭುವನೇಶ್ವರ್ ಕುಮಾರ್, 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಶಿಸ್ತುಬದ್ದ ದಾಳಿ ನಡೆಸಿ ಗಮನ ಸೆಳೆದಿದ್ದಾರೆ. 16 ಪಂದ್ಯಗಳಿಂದ ಭುವಿ 63 ಓವರ್ ಬೌಲಿಂಗ್ ಮಾಡಿ ಕೇವಲ 7.95ರ ಎಕನಮಿಯಲ್ಲಿ ರನ್ ನೀಡಿ 28 ವಿಕೆಟ್ ಕಬಳಿಸಿ ಮಿಂಚಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.