ಇವ್ರಂತೂ ಗೆಲ್ಲಲ್ಲ...! ಚೆನ್ನೈ ಎದುರಿನ ಮ್ಯಾಚ್ ಮುಗಿಯುವ ಮೊದಲೇ ಮೈದಾನ ತೊರೆದ ಮುಂಬೈ ಮಾಲೀಕ ಆಕಾಶ್ ಅಂಬಾನಿ! ವಿಡಿಯೋ ವೈರಲ್

Published : Apr 24, 2026, 03:57 PM IST
Akash Ambani

ಸಾರಾಂಶ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ 'ಎಲ್ ಕ್ಲಾಸಿಕೋ' ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಸೋಲನುಭವಿಸಿದೆ. ಈ ಸೋಲಿನಿಂದ ತೀವ್ರ ಬೇಸರಗೊಂಡ ತಂಡದ ಮಾಲೀಕ ಆಕಾಶ್ ಅಂಬಾನಿ, ಪಂದ್ಯ ಪೂರ್ತಿಯಾಗುವ ಮೊದಲೇ ವಾಂಖೆಡೆ ಸ್ಟೇಡಿಯಂನಿಂದ ಹೊರನಡೆದರು. ಸತತ ಸೋಲುಗಳಿಂದ ಮುಂಬೈ ತಂಡವು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಕುಸಿದಿದ್ದು, ಪ್ಲೇಆಫ್ ಪ್ರವೇಶದ ಹಾದಿ ಕಠಿಣವಾಗಿದೆ.

ಮುಂಬೈ: ಐಪಿಎಲ್‌ನ 'ಎಲ್ ಕ್ಲಾಸಿಕೋ' ಎಂದೇ ಕರೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಹೀನಾಯವಾಗಿ ಸೋತಿದೆ. ಈ ಸೋಲಿನಿಂದ ತೀವ್ರ ಬೇಸರಗೊಂಡ ತಂಡದ ಮಾಲೀಕ ಆಕಾಶ್ ಅಂಬಾನಿ, ಪಂದ್ಯ ಪೂರ್ತಿಯಾಗುವ ಮೊದಲೇ ಇವ್ರಂತೂ ಮ್ಯಾಚ್ ಗೆಲ್ಲಲ್ಲ ಎಂದು ವಾಂಖೆಡೆ ಸ್ಟೇಡಿಯಂನಿಂದ ಹೊರನಡೆದಿದ್ದಾರೆ. 

ಐಪಿಎಲ್ ಇತಿಹಾಸದಲ್ಲಿ ರನ್‌ಗಳ ಆಧಾರದ ಮೇಲೆ ಮುಂಬೈ ತಂಡವು ಚೆನ್ನೈ ವಿರುದ್ಧ ಕಂಡ ಅತಿದೊಡ್ಡ ಸೋಲು ಇದಾಗಿದೆ. ವಾಂಖೆಡೆಯಲ್ಲಿ ಮುಂಬೈ 103 ರನ್‌ಗಳ ಹೀನಾಯ ಸೋಲನುಭವಿಸಿತು. ಮುಂಬೈ ಸೋಲು ಖಚಿತವಾಗುತ್ತಿದ್ದಂತೆ, ಸಾಮಾನ್ಯವಾಗಿ ತಂಡದ ಎಲ್ಲಾ ಪಂದ್ಯಗಳಿಗೆ ಹಾಜರಿರುತ್ತಿದ್ದ ಆಕಾಶ್ ಅಂಬಾನಿ, ಈ ಬಾರಿ ಪಂದ್ಯ ಮುಗಿಯುವವರೆಗೂ ಕಾಯದೆ ಸ್ಟೇಡಿಯಂನಿಂದ ಹೊರಟು ಹೋದರು.

 

ಸಿಟ್ಟಿಗೆದ್ದ ಮುಂಬೈ ಮಾಲೀಕ ಆಕಾಶ್ ಅಂಬಾನಿ

ಚೆನ್ನೈ ನೀಡಿದ 208 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ಬ್ಯಾಟಿಂಗ್ ಪಡೆ, ಹೋರಾಟವನ್ನೇ ನೀಡದೆ ಕುಸಿಯಿತು. ಇದನ್ನು ಕಂಡು ಆಕಾಶ್ ಅಂಬಾನಿ ಮುಖದಲ್ಲಿ ನಿರಾಸೆ ಸ್ಪಷ್ಟವಾಗಿತ್ತು. ಪಂದ್ಯದ ಮಧ್ಯದಲ್ಲೇ ಅವರು ಡಗ್‌ಔಟ್‌ನಿಂದ ಎದ್ದುಹೋದರು. ಸ್ಟೇಡಿಯಂನಿಂದ ಹೊರಗೆ ಹೋಗುವಾಗ ಗ್ಯಾಲರಿಯಲ್ಲಿದ್ದ ಅಭಿಮಾನಿಗಳತ್ತ ಅವರು ಕೋಪದಿಂದ ಸನ್ನೆ ಮಾಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆಕಾಶ್ ಅಂಬಾನಿಯ ರಿಯಾಕ್ಷನ್ ಹೇಗಿತ್ತು ಅಂದ್ರೆ ಇವ್ರಂತೂ ಗೆಲ್ಲಲ್ಲ, ಇವರು ಸೋಲೋದು ನೀವ್ಯಾಕೆ ನೋಡ್ತೀರಾ? ಸುಮ್ಮನೆ ಮನೆಗೆ ಹೋಗಿ ಎನ್ನುವಂತೆ ಕಾಣುತ್ತಿತ್ತು.

 

ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮುಂಬೈ ಮ್ಯಾನೇಜ್‌ಮೆಂಟ್ ಮತ್ತು ಆಟಗಾರರ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಚರ್ಚೆಗಳು ಜೋರಾಗಿವೆ. ಚೆನ್ನೈ ನೀಡಿದ್ದ 208 ರನ್‌ಗಳ ಗುರಿ ಬೆನ್ನಟ್ಟಿದ ಐದು ಬಾರಿಯ ಚಾಂಪಿಯನ್ ಮುಂಬೈ, ಕೇವಲ 104 ರನ್‌ಗಳಿಗೆ ಆಲೌಟ್ ಆಯಿತು. ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋತಿರುವ ಮುಂಬೈ, ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಪ್ಲೇಆಫ್ ಕನಸು ಜೀವಂತವಾಗಿರಿಸಿಕೊಳ್ಳಲು, ತಂಡವು ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ರೋಹಿತ್ ಶರ್ಮಾ ಅವರಿಂದ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡಕ್ಕೆ ಇನ್ನೂ ಲಯ ಸಿಕ್ಕಿಲ್ಲ. ಈ ಸೀಸನ್‌ನಲ್ಲಿ ಹಾರ್ದಿಕ್ (97 ರನ್), ಸೂರ್ಯಕುಮಾರ್ ಯಾದವ್ (156 ರನ್) ಮತ್ತು ಜಸ್‌ಪ್ರೀತ್ ಬುಮ್ರಾ (2 ವಿಕೆಟ್) ಅವರಂತಹ ಸ್ಟಾರ್ ಆಟಗಾರರ ಕಳಪೆ ಫಾರ್ಮ್ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಯುವ ಆಟಗಾರ ತಿಲಕ್ ವರ್ಮಾ (181 ರನ್) ಮಾತ್ರ ತಂಡದಲ್ಲಿ ಸದ್ಯಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಆಟಗಾರರು ಫಾರ್ಮ್ ಕಳೆದುಕೊಂಡಿಲ್ಲ, ಸ್ಥಿರತೆಯ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಹೇಳಿದ್ದಾರೆ. "ನಾವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದೇವೆ. ವಿಶ್ವಕಪ್ ನಂತರ ಸಿಕ್ಕಿದ ವಿಶ್ರಾಂತಿಯನ್ನು ಸೋಲಿಗೆ ಕಾರಣವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ಪಂದ್ಯಗಳಲ್ಲಿ ಶಿಸ್ತಿನಿಂದ ಆಡಿದರೆ ಮಾತ್ರ ನಾವು ಕಮ್‌ಬ್ಯಾಕ್ ಮಾಡಲು ಸಾಧ್ಯ," ಎಂದು ಜಯವರ್ಧನೆ ಸ್ಪಷ್ಟಪಡಿಸಿದ್ದಾರೆ.

ಎಂಟನೇ ಸ್ಥಾನಕ್ಕೆ ಜಾರಿದ ಮುಂಬೈ ಇಂಡಿಯನ್ಸ್‌:

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು ಇದುವರೆಗೂ ಏಳು ಪಂದ್ಯಗಳನ್ನಾಡಿ ಕೇವಲ ಎರಡು ಗೆಲುವು ಹಾಗೂ ಐದು ಸೋಲುಗಳೊಂದಿಗೆ ಕೇವಲ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಮುಂಬೈ ತಂಡವು ಪ್ಲೇ ಆಫ್ ಪ್ರವೇಶಿಸಬೇಕಿದ್ದರೇ, ಇನ್ನುಳಿದ ಲೀಗ್ ಹಂತದ ಏಳು ಪಂದ್ಯಗಳ ಪೈಕಿ ಕನಿಷ್ಠ ಆರು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇನ್ನೊಂದು ಸೋಲು ಮುಂಬೈ ತಂಡದ ಪ್ಲೇ ಆಫ್ ಕನಸನ್ನು ಬಹುತೇಕ ನುಚ್ಚುನೂರು ಮಾಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಮ್ಮ ಸ್ಪೋಟಕ ಬ್ಯಾಟಿಂಗ್ ಸೀಕ್ರೆಟ್ ಬಿಚ್ಚಿಟ್ಟ ವೈಭವ್ ಸೂರ್ಯವಂಶಿ! ಮ್ಯಾಚ್‌ಗೂ ಮುನ್ನ ಈತ ಮಾಡೋದೇನು ಗೊತ್ತಾ?
ಅಮ್ಮನ ಚಿತೆಗೆ ಬೆಂಕಿ ಇಟ್ಟು, ಮರುದಿನವೇ ಚೆನ್ನೈ ಸೂಪರ್ ಕಿಂಗ್ಸ್‌ ಪರ ಬೌಲಿಂಗ್ ಮಾಡಿದ ಮುಕೇಶ್ ಚೌಧರಿ! ವಿಡಿಯೋ ವೈರಲ್