
ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಭಾರತ ಕ್ರಿಕೆಟ್ ತಂಡದ ಚೀಫ್ ಸೆಲೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರು ಇದೀಗ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅಜಿತ್ ಅಗರ್ಕರ್ ಕಳೆದ ಮೂರು ವರ್ಷಗಳಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅಜಿತ್ ಅಗರ್ಕರ್ ಅವಧಿಯಲ್ಲಿಯೇ ಭಾರತ ಕ್ರಿಕೆಟ್ ತಂಡವು ಸತತ ಮೂರು ವರ್ಷಗಳಲ್ಲಿ ಮೂರು ಐಸಿಸಿ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ಅಗರ್ಕರ್ ತಮ್ಮ ಅಧಿಕಾರವಧಿಯಲ್ಲಿ ಕೆಲವು ಮಹಾ ಎಡವಟ್ಟುಗಳನ್ನು ಮಾಡಿದ್ದಾರೆ. ಅಷ್ಟಕ್ಕೂ ಮೂರು ವರ್ಷಗಳಲ್ಲಿ ಅಜಿತ್ ಅಗರ್ಕರ್ ಮಾಡಿದ ಆರು ಎಡವಟ್ಟುಗಳೇನು ಎನ್ನುವುದನ್ನು ನೋಡೋಣ ಬನ್ನಿ.
ಇದು ಚೀಫ್ ಸೆಲೆಕ್ಟರ್ ಆಗಿ ಅಜಿತ್ ಅಗರ್ಕರ್ ಮಾಡಿದ ಮಹಾ ಎಡವಟ್ಟು ಎಂದರೆ ಅತಿಶಯೋಕ್ತಿಯಾಗಿರಲಾರದು. ಯಾಕೆಂದರೆ ರೋಹಿತ್ ಶರ್ಮಾ ನಾಯಕತ್ವದಲ್ಲೇ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. ಇದಾದ ಬಳಿಕ 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದು ಐಸಿಸಿ ಟ್ರೋಫಿ ಬರ ನೀಗಿಸಿತ್ತು. ಇದಾದ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲೇ ಭಾರತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತ್ತು. ಹೀಗಿದ್ದೂ, ಚಾಂಪಿಯನ್ಸ್ ಟ್ರೋಫಿ ಗೆಲ್ಲುತ್ತಿದ್ದಂತೆಯೇ ಯಾವುದೇ ಕಾರಣ ನೀಡದೇ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ್ದು, ಅಗರ್ಕರ್ ಮಾಡಿದ ಮೊದಲ ಮಹಾ ಎಡವಟ್ಟು.
ಇನ್ನು ರೋಹಿತ್ ಶರ್ಮಾ ರೀತಿಯಲ್ಲಿಯೇ ಸೂರ್ಯಕುಮಾರ್ ಯಾದವ್ ಕೂಡಾ ನಾಯಕನಾಗಿ 2026ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಜಯಿಸಿದ್ದರು. ಆದರೆ ಫಾರ್ಮ್ ನೆಪವೊಡ್ಡಿ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ನಾಯಕತ್ವದಿಂದ ಕೆಳಗಿಳಿಸಲಾಯಿತು. ಇದಷ್ಟೇ ಅಲ್ಲದೇ ಟಿ20 ತಂಡದಿಂದಲೇ ಸೂರ್ಯ ಅವರನ್ನು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಹೊರಗಿಟ್ಟಿದ್ದು ದೊಡ್ಡ ತಪ್ಪುಗಳಲ್ಲಿ ಒಂದು. ಯಾಕೆಂದರೆ ಸೂರ್ಯ ಈಗಲೂ ವಿಸ್ಪೋಟಕ ಬ್ಯಾಟಿಂಗ್ ಮಾಡುವ ಕ್ಷಮತೆ ಹೊಂದಿದ್ದಾರೆ.
ಭಾರತ ಟೆಸ್ಟ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದ ರವಿಚಂದ್ರನ್ ಅಶ್ವಿನ್, ಇನ್ನೂ ಎರಡು ಮೂರು ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದರು. ತವರಿನಲ್ಲಿ ಕಿವೀಸ್ ಎದುರಿನ ಟೆಸ್ಟ್ ಸರಣಿ ಸೋಲು, ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ಬೆನ್ನಲ್ಲೇ ಅಶ್ವಿನ್, ಕೊಹ್ಲಿ ಹಾಗೂ ರೋಹಿತ್ ಶರ್ಮಾ ಒಬ್ಬರಾದ ಮೇಲೆ ಒಬ್ಬರಂತೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಅಜಿತ್ ಅಗರ್ಕರ್ ಒತ್ತಡ ಹೇರಿದ್ದರು ಎಂದು ವರದಿಯಾಗಿದೆ.
ಇನ್ನು ಮೊಹಮ್ಮದ್ ಶಮಿ, ಭಾರತದ ಅತ್ಯಂತ ನಂಬಿಗಸ್ಥ ಅನುಭವಿ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. 2023 ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್‌ಗೇರಲು ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಇದಾದ ಬಳಿಕ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಶಮಿ ಮಿಂಚಿದ್ದರು. ಹೀಗಿದ್ದೂ, ಇದಾದ ಬಳಿಕ ಶಮಿ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದರೂ ಅವರನ್ನು ಕಡೆಗಣಿಸುತ್ತಲೇ ಬಂದರು. ಇದು ಅಗರ್ಕರ್ ಮಾಡಿದ ದೊಡ್ಡ ತಪ್ಪು.
ಅಂದಹಾಗೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್ ಆಡಲು ಸಂಪೂರ್ಣ ಬದ್ದವಾಗಿಲ್ಲ. ಅವರು ಅದರೊಳಗೆ ನಿವೃತ್ತಿ ತೆಗೆದುಕೊಳ್ಳಲಿದ್ದಾರೆ ಎಂಬಂತಹ ನೆಗೆಟಿವ್ ಪಿಆರ್ ಅನ್ನು ಅಜಿತ್ ಅಗರ್ಕರ್ ಬಳಗ ಸೃಷ್ಟಿಸಿತ್ತು ಎನ್ನುವ ಬಗ್ಗೆಯೂ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗಿವೆ. ಈ ನಡೆ ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿತ್ತು ಎನ್ನಲಾಗಿದೆ.
ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆರ್‌ಸಿಬಿ ಕಪ್ ಗೆಲ್ಲುವಲ್ಲಿ ಭುವನೇಶ್ವರ್ ಕುಮಾರ್, ರಜತ್ ಪಾಟೀದಾರ್, ಕೃನಾಲ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಸತತವಾಗಿ ಈ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಾ ಬಂದರೂ ಅಜಿತ್ ಅಗರ್ಕರ್ ಇವರ್ಯಾರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವ ಪ್ರಯತ್ನವನ್ನೇ ಮಾಡಲಿಲ್ಲ. ಇದೀಗ ಅಗರ್ಕರ್ ಕೆಳಗಿಳಿದ ಬಳಿಕ ಹೊಸ ಆಯ್ಕೆ ಸಮಿತಿ ಕಿವೀಸ್ ಎದುರಿನ ಟಿ20 ಸರಣಿಗೆ ಭುವಿಯನ್ನು ಆಯ್ಕೆ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.