
ಬೆಂಗಳೂರು: ಆಫ್ಘಾನಿಸ್ತಾನ ತಂಡವು ಐರ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ 92 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ದೊಡ್ಡ ಗೆಲುವಿನೊಂದಿಗೆ ಆಫ್ಘಾನಿಸ್ತಾನ ತಂಡವು ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಆಫ್ಘಾನಿಸ್ತಾನ ತಂಡವು ಮುಂಬರುವ ಏಕದಿನ ವಿಶ್ವಕಪ್‌ಗೆ ಒಂಬತ್ತನೇ ತಂಡವಾಗಿ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ಇದರೊಂದಿಗೆ 2027ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವ ಕನಸು ಕಾಣುತ್ತಿದ್ದ ಐರ್ಲೆಂಡ್ ಹಾಗೂ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ಕನಸು ನುಚ್ಚುನೂರಾಗಿದೆ.
ಐರ್ಲೆಂಡ್ ಎದುರು ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡವು ಮಳೆ ಬಾಧಿತ ಪಂದ್ಯದಲ್ಲಿ 47 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 299 ರನ್ ಕಲೆಹಾಕಿತು. ಇಬ್ರಾಹಿಂ ಜದ್ರಾನ್ 84 ರನ್ ಸಿಡಿಸಿ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಇನ್ನು ಕಠಿಣ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು ರಶೀದ್ ಖಾನ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಐರ್ಲೆಂಡ್ ತಂಡವು 33.4 ಓವರ್‌ಗಳಲ್ಲಿ ಕೇವಲ 207 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಹೀನಾಯ ಸೋಲು ಅನುಭವಿಸಿತು. ರಶೀದ್ ಖಾನ್ 34 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಆಫ್ಘಾನಿಸ್ತಾನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ ಆಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಜಿಂಬಾಬ್ವೆಯಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮೊದಲು ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ತಂಡಗಳು ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿವೆ. ಇನ್ನು ಟೂರ್ನಿಗೆ ಆತಿಥ್ಯ ವಹಿಸಿರುವ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು ಸಹ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿವೆ.
ಎರಡು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಇದೀಗ ಪಾತಾಳಕ್ಕೆ ಕುಸಿದಿದೆ. ಇದೀಗ ವೆಸ್ಟ್ ಇಂಡೀಸ್ ತಂಡವು ನೇರವಾಗಿ ಏಕದಿನ ವಿಶ್ವಕಪ್ ಟೂರ್ನಿಗೆ ಪ್ರವೇಶಿಸುವ ಹಾದಿ ಬಹುತೇಕ ಕೊನೆಯಾದಂತೆ ಆಗಿದೆ. ಇದೀಗ ಒಂದು ಸ್ಥಾನ ಬಾಕಿಯಿದ್ದು, ಈ ಸ್ಥಾನಕ್ಕಾಗಿ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಸದ್ಯ ವೆಸ್ಟ್ ಇಂಡೀಸ್ ತಂಡವು ಐಸಿಸಿ ಶ್ರೇಯಾಂಕದಲ್ಲಿ ಸದ್ಯ 10ನೇ ಸ್ಥಾನದಲ್ಲಿದೆ. ಸೆಪ್ಟೆಂಬರ್ 30 ಕಟ್ ಆಫ್ ದಿನಾಂಕವಾಗಿದ್ದು, ಅಲ್ಲಿಯವರೆಗೆ ಟಾಪ್ 10 ಸ್ಥಾನ ಕಾಪಾಡಿಕೊಳ್ಳಬೇಕಾದ ಒತ್ತಡ ವೆಸ್ಟ್ ಇಂಡೀಸ್ ಮುಂದಿದೆ. ಆದರೆ ಆ ದಿನಾಂಕಕ್ಕೂ ಮೊದಲು ವಿಂಡೀಸ್ ತಂಡವು ಕೇವಲ ಎರಡು ಏಕದಿನ ಪಂದ್ಯಗಳನ್ನು ಆಡಲಿದ್ದು, ಆ ಎರಡೂ ಪಂದ್ಯಗಳು ಭಾರತ ತಂಡದ ವಿರುದ್ದ ಆಡಬೇಕಿದೆ. ಭಾರತ ಎದುರು ಎರಡು ಪಂದ್ಯಗಳನ್ನು ಸೋತರೇ ವೆಸ್ಟ್ ಇಂಡೀಸ್ ನೇರ ಅರ್ಹತೆ ಪಡೆಯುವ ಅವಕಾಶವನ್ನು ಕೈಚೆಲ್ಲಲಿದ್ದು, ಬಾಂಗ್ಲಾದೇಶ 10ನೇ ತಂಡವಾಗಿ 2027ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.