
ನವದೆಹಲಿ (ಏ.29) ಐಪಿಎಲ್ 2026ರ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ವೇಗಿ ಲುಂಗಿ ಎನ್ಗಿಡಿ ಗಂಭೀರವಾಗಿ ಗಾಯಗೊಂಡು ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಕ್ಯಾಚ್ ಹಿಡಿಯಲು ಹಿಮ್ಮುಖವಾಗಿ ಓಡಿದ ಎನ್ಗಿಡಿ ಬ್ಯಾಲೆನ್ಸ್ ಕಳೆದುಕೊಂಡು ಬಿದ್ದಿದ್ದರು. ಈ ವೇಳೆ ಕುತ್ತಿಗೆ ಹಾಗೂ ತಲೆಗೆ ಗಂಭೀರ ಗಾಯವಾಗಿತ್ತು. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೈದಾನಕ್ಕೆ ಆ್ಯಂಬುಲೆನ್ಸ್ ಆಗಮಿಸಿ ಎನ್ಗಿಡಿಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಎನ್ಗಿಡಿ ಗಾಯವನ್ನು ತಕ್ಷಣ ಅರಿತುಕೊಂಡ ದೆಹಲಿ ಪೊಲೀಸ್ ಎಸಿಪಿ ಸಂಜಯ್ ಸಿಂಗ್ ಕಾರ್ಯಪ್ರವೃತ್ತರಾಗಿದ್ದರು. ಎನ್ಗಿಡಿ ಪ್ರಾಣ ಉಳಿಸಲು ರಿಯಲ್ ಹೀರೋ ರೀತಿ ಕಾರ್ಯನಿರ್ವಹಿಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಎನ್ಗಿಡಿಯನ್ನು ತಕ್ಷಣ ಆಸ್ಪತ್ರೆ ದಾಖಲಿಸಿ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡಿದ ಯಶಸ್ಸು ಎಸಿಪಿ ಸಂಜಯ್ ಸಿಂಗ್‌ಗೆ ಸಲ್ಲಲಿದೆ. ವಿಶೇಷ ಅಂದರೆ ಈ ಎಸಿಪಿ ಸಂಜಯ್ ಸಿಂಗ್, ವಿರಾಟ್ ಕೊಹ್ಲಿ, ಸೆಹ್ವಾಗ್ ಸೇರಿದಂತೆ ಪ್ರಮುಖ ಕ್ರಿಕೆಟಿಗರ ವಿರುದ್ದ ಆಡಿದ್ದಾರೆ.
ಎಸಿಪಿ ಸಂಜಯ್ ಸಿಂಗ್ ಸದ್ಯ ಪೊಲೀಸ್ ದಕ್ಷ ಅಧಿಕಾರಿ. ಸಂಜಯ್ ಸಿಂಗ್ ಓರ್ವ ಕ್ರಿಕೆಟರ್. ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಅಧೀನದ ಲೀಗ್ ಟೂರ್ನಿಗಳಲ್ಲಿ ಸಕ್ರಿಯವಾಗಿದ್ದರು. ಸಂಜಯ್ ಸಿಂಗ್ ಡೆಲ್ಲಿ ಪೊಲೀಸ್ ಪರವಾಗಿ ಕ್ರಿಕೆಟ್ ಆಡುತ್ತಿದ್ದರು. DDCA ಲೀಗ್ ಟೂರ್ನಿಗಳಲ್ಲಿ ಸಂಜಯ್ ಸಿಂಗ್ ಪಾಲ್ಗೊಳ್ಳುತ್ತಿದ್ದರು. ಒನ್‌ಜಿಸಿ ಹಾಗೂ ಇಂಡಿಯನ್ ಏರ್‌ಲೈನ್ಸ್ ತಂಡದ ವಿರುದ್ಧ ಸಂಜಯ್ ಸಿಂಗ್ ಕ್ರಿಕೆಟ್ ಆಡಿದ್ದಾರೆ. ವಿಶೇಷ ಅಂದರೆ ಈ ಒನ್‌ಜಿಸಿ ಹಾಗೂ ಇಂಡಿಯನ್ ಏರ್‌ಲೈನ್ಸ್ ತಂಡದ ಪರ ಹಲವು ಕ್ರಿಕೆಟಿಗರು ಆಡಿದ್ದಾರೆ. ಈ ಪೈಕಿ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವರ ವಿರುದ್ದ ಕ್ರಿಕೆಟ್ ಆಡಿದ್ದಾರೆ. 2012ರ ವೇಳೆ ಸಂಜಯ್ ಸಿಂಗ್ ಟೀಂ ಇಂಡಿಯಾದಲ್ಲಿ ಪ್ರಮುಖ ಡೆಲ್ಲಿ ಆಟಗಾರರ ಜೊತೆ ಕ್ರಿಕೆಟ್ ಆಡಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಯುವ ಕ್ರಿಕೆಟಿಗನಾಗಿ ಗಮನಸೆಳೆದಿದ್ದರು. ಕೊಹ್ಲಿ ವಿರುದ್ಧವೂ ಸಂಜಯ್ ಸಿಂಗ್ ಆಡಿದ್ದಾರೆ.
ಕ್ರಿಕೆಟರ್ ಆಗಿದ್ದ ಸಂಜಯ್ ಸಿಂಗ್‌ಗೆ ಎನ್ಗಿಡಿ ಪರಿಸ್ಥಿತಿ ಎಲ್ಲರಿಗಿಂತ ಬೇಗ ಅರ್ಥವಾಗಿದೆ. ಎನ್ಗಿಡಿ ಚಲನೆ ಇಲ್ಲದೆ ಮೈದಾನದಲ್ಲಿ ಬಿದ್ದಿದ್ದರು. ಗಂಭೀರತೆ ಅರಿತ ಬೆನ್ನಲ್ಲೆ ಆ್ಯಂಬುಲೆನ್ಸ್‌ಗೆ ಸೂಚನೆ ನೀಡಲಾಗಿತ್ತು. ಸಂಜೇ 6.15ರ ಸಮಯ. ಭಾರಿ ಟ್ರಾಫಿಕ್ ಸಮಯದಲ್ಲೇ ಎನ್ಗಿಡಿಯನ್ನು ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲು ಚಾಲಕ ಜೇಟ್ಲಿ ಕ್ರೀಡಾಂಗಣದ ಗೇಟ್ ನಂಬರ್ 2ರ ಬಳಿ ಬಂದಿದ್ದ. ಗೂಗಲ್ ಮ್ಯಪ್ ಮೂಲಕ ಬಿಎಲ್‌ಕೆ ಮ್ಯಾಕ್ಸ್ ಆಸ್ಪತ್ರೆ ತೆರಳು ದಾರಿ ನೋಡುತ್ತಿದ್ದ. ಮ್ಯಾಪ್ ಮೂಲಕ ತೆರಳಿದರೆ ಟ್ರಾಫಿಕ್ ತುಂಬಿದ ರಸ್ತೆಯಲ್ಲಿ ಆ್ಯುಂಬುಲೆನ್ಸ್ ಆಸ್ಪತ್ರೆ ತಲುಪಲು ಗಂಟಗಳೇ ಬೇಕಾಗಿತ್ತು. ಆದರೆ ಎಸಿಪಿ ಸಂಜಯ್ ಸಿಂಗ್ ತಕ್ಷಣವೇ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದಾರೆ.
ಜೇಟ್ಲಿ ಕ್ರೀಡಾಂಗಣ ಗೇಟ್ ಬಳಿ ನಿಯೋಜನೆಗೊಂಡಿದ್ದ ಎಸಿಪಿ ಸಂಜಯ್ ಸಿಂಗ್, ತಕ್ಷಣವೇ ಕಂಟ್ರೋಲ್ ರೂಂಗೆ ಕರೆ ಮಾಡಿ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಆ್ಯಂಬುಲೆನ್ಸ್ ಯಾವುದೇ ಅಡೆ ತಡೆ ಇಲ್ಲದೆ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆ ತಲುಪಿತ್ತು. ಎನ್ಗಿಡಿಗೆ ಸೂಕ್ತ ಚಿಕಿತ್ಸೆ ತಕ್ಕ ಸಮಯದಲ್ಲಿ ಸಿಕ್ಕ ಕಾರಣ ಬೇಗನೆ ಚೇತರಿಸಿಕೊಂಡಿದ್ದಾರೆ. ಎಸಿಪಿ ಸಂಜಯ್ ಸಿಂಗ್ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.