
ವೆಲ್ಲಿಂಗ್ಟನ್(ಅ.27): ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತೀಯ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಭರ್ಜರಿ ಆಟವಾಡುವ ಮೂಲಕ ಕಿವೀಸ್ ಬೌಲಿಂಗ್ ಪಡೆಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ್ದಾರೆ. 199 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ವಿಸ್ಫೋಟಕ ಆರಂಭ ನೀಡಿದ ಅಭಿಷೇಕ್, ಕೇವಲ 14 ಎಸೆತಗಳಲ್ಲಿ ಅರ್ಧಶತಕ ಹಾಗೂ 35 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಂತಿಮವಾಗಿ 38 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 11 ಬೌಂಡರಿಗಳ ನೆರವಿನಿಂದ 113 ರನ್ ಸಿಡಿಸಿ ಪಂದ್ಯವನ್ನು ಟೀಂ ಇಂಡಿಯಾ ಪರ ವಾಲುವಂತೆ ಮಾಡಿದರು.
ಈ ಪಂದ್ಯದ ಗೆಲುವಿನ ಬಳಿಕ, ಕಾಮೆಂಟೇಟರ್ ಹಾಗೂ ನ್ಯೂಜಿಲೆಂಡ್‌ನ ಮಾಜಿ ಆಟಗಾರ ಸೈಮನ್ ಡೌಲ್ ಜೊತೆಗಿನ ಮಾತುಕತೆಯ ವೇಳೆ, ತಮ್ಮ ಮೆಂಟರ್ ಮತ್ತು ಗುರು ಯುವರಾಜ್ ಸಿಂಗ್ ಅವರ 12 ಎಸೆತಗಳ ಅರ್ಧಶತಕದ ಜಾಗತಿಕ ದಾಖಲೆಯನ್ನು ಮುರಿಯುವ ಕುರಿತು ಅಭಿಷೇಕ್ ಶರ್ಮಾ ಮುಕ್ತವಾಗಿ ಮಾತನಾಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸೈಮನ್ ಡೌಲ್, ಟೀಂ ಇಂಡಿಯಾ ಓಪನ್ನರ್ ಅಭಿಷೇಕ್ ಶರ್ಮಾ ಬಳಿ, ನಿಮ್ಮ ಕೋಚ್ ಮತ್ತು ಮೆಂಟರ್ ಆಗಿರುವ ಯುವರಾಜ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ನಿಮಗೆ ಮೆಸೇಜ್ ಕಳುಹಿಸಿ, 12 ಎಸೆತಗಳಲ್ಲಿ ಅರ್ಧಶತಕ ಬಾರಿಸಲು ಅಥವಾ ತಮ್ಮ ಆ ಐತಿಹಾಸಿಕ ದಾಖಲೆಯನ್ನು ಮುರಿಯಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಸವಾಲೆಸೆದಿದ್ದರು. ಇದರ ಬಗ್ಗೆ ನೀವೇನು ಹೇಳುತ್ತೀರಾ? ಎಂದು ಕೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದರ ಅಭಿಷೇಕ್ ಶರ್ಮಾ, "ನಾನು ಇದನ್ನು ಹಿಂದೆ ಕೂಡ ಹೇಳಿದ್ದೇನೆ, ಆದರೆ ಆ ಕಾಲದಲ್ಲೇ ಯುವರಾಜ್ ಸಿಂಗ್ ಅವರು ಅಷ್ಟೊಂದು ಅದ್ಭುತವಾಗಿ ಹೇಗೆ ಬ್ಯಾಟ್ ಮಾಡುತ್ತಿದ್ದರು ಎನ್ನುವುದು ನನಗೆ ಇಂದಿಗೂ ಅರ್ಥವಾಗುತ್ತಿಲ್ಲ. ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸುವುದು ನಿಜಕ್ಕೂ ನಂಬಲಾಗದ ಪವಾಡ. ಇಂದಿನ ಆಧುನಿಕ ಕ್ರಿಕೆಟ್ ಗೇಮ್‌ನಲ್ಲೂ ಅವರ ಆ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯ ಎನಿಸುತ್ತದೆ. ಅವರ ಆ ದಾಖಲೆಯು ಕಾಲಕ್ಕಿಂತ ತೀರಾ ಮುಂಚಿತವಾಗಿ (Way ahead of its time) ಬಂದಂತಹದ್ದು. ಆದರೂ, ಒಂದಲ್ಲ ಒಂದು ದಿನ ನನ್ನ ಗುರು ಯುವರಾಜ್ ಸಿಂಗ್ ಅವರ ಆ ದಾಖಲೆಯನ್ನು ನಾನು ಮುರಿಯುತ್ತೇನೆ ಎನ್ನುವ ಭರವಸೆ ನನಗಿದೆ! ಎಂದು ಶಪಥ ಮಾಡಿದ್ದಾರೆ
ವೆಲ್ಲಿಂಗ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು 15 ಹರೆಯದ ವೈಭವ್ ಸೂರ್ಯವಂಶಿ (19 ಎಸೆತಗಳಲ್ಲಿ 45 ರನ್) ಜೋಡಿ ಮೊದಲ 6 ಓವರ್‌ಗಳ ಪವರ್‌ಪ್ಲೇನಲ್ಲೇ ಬರೋಬ್ಬರಿ 118 ರನ್ ಚಚ್ಚಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಪವರ್‌ಪ್ಲೇ ಸ್ಕೋರ್ ದಾಖಲಿಸಿತು.
1. ನ್ಯೂಜಿಲೆಂಡ್ ವಿರುದ್ಧ ವೇಗದ ಟಿ20 ಶತಕ: ಕಿವೀಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2. ರೋಹಿತ್ ಶರ್ಮಾ ದಾಖಲೆ ಸಮ: ಭಾರತದ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಂಟಿ ಎರಡನೇ ವೇಗದ ಶತಕ (35 ಎಸೆತಗಳು - ರೋಹಿತ್ ಶರ್ಮಾ ಅವರೊಂದಿಗೆ ಸಮಾನ ಸಾಧನೆ) ಸಿಡಿಸಿದರು.
3. ವಿರಾಟ್ ಕೊಹ್ಲಿ ದಾಖಲೆ ಉಡೀಸ್: ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ (ಟಿ20ಐ + ಐಪಿಎಲ್ + ಡೊಮೆಸ್ಟಿಕ್) ತಮ್ಮ 11ನೇ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ (10 ಶತಕ) ಅವರ ದಾಖಲೆಯನ್ನು ಹಿಂದಿಕ್ಕಿ, ಅತಿ ಹೆಚ್ಚು ಟಿ20 ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. (ವಿಶ್ವ ಮಟ್ಟದಲ್ಲಿ ಕ್ರಿಸ್ ಗೇಲ್ - 22, ಬಾಬರ್ ಅಜಮ್ - 13 ನಂತರದ ಸ್ಥಾನದಲ್ಲಿ ಅಭಿಷೇಕ್ ಇದ್ದಾರೆ).
4. ತಂಡದ ವೇಗದ 100 ರನ್ ವಿಶ್ವದಾಖಲೆ: ಭಾರತ ತಂಡ ಕೇವಲ 5.0 ಓವರ್‌ಗಳಲ್ಲೇ 100 ರನ್ ಗಡಿ ದಾಟಿ ವಿಶ್ವದಾಖಲೆ ದಾಖಲೆ ನಿರ್ಮಿಸಿತು.
ಈ ಅಬ್ಬರದ ಶತಕದ ನೆರವಿನಿಂದ ಭಾರತ ತಂಡವು 199 ರನ್‌ಗಳ ಬೃಹತ್ ಗುರಿಯನ್ನು ಕೇವಲ 13.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ತಲುಪಿ, 5 ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಂತರದ ಭರ್ಜರಿ ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.