
ಧರ್ಮಶಾಲಾ(ಮೇ.20): ಪಂಜಾಬ್ ಕಿಂಗ್ಸ್ ವಿರುದ್ಧ ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಖಾತೆ ತೆರೆಯದೆ ಔಟಾದ ರಾಜಸ್ಥಾನ ರಾಯಲ್ಸ್‌ನ ಜೋಸ್ ಬಟ್ಲರ್ ಅನಗತ್ಯ ದಾಖಲೆಗೆ ಗುರಿಯಾಗಿದ್ದಾರೆ. ಈ ಬಾರಿ ಅವರು 5 ಪಂದ್ಯಗಳಲ್ಲಿ ಡಕೌಟ್ ಆಗಿದ್ದು, ಐಪಿಎಲ್ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಬಾರಿ ಡಕೌಟ್ ಆದ ಆಟಗಾರ ಎನಿಸಿದ್ದಾರೆ.
2009ರಲ್ಲಿ ಹರ್ಷಲ್ ಗಿಬ್ಸ್, 2011ರಲ್ಲಿ ಮಿಥುನ್ ಮನ್ಹಾಸ್, 2012ರಲ್ಲಿ ಮನೀಶ್ ಪಾಂಡೆ, 2020ರಲ್ಲಿ ಶಿಖರ್ ಧವನ್, 2021ರಲ್ಲಿ ಇಯಾನ್ ಮೊರ್ಗನ್ ಹಾಗೂ ನಿಕೋಲಸ್ ಪೂರನ್ ತಲಾ 4 ಪಂದ್ಯಗಳಲ್ಲಿ ಡಕೌಟ್ ಆಗಿದ್ದರು. ಇದೀಗ ಆ ದಾಖಲೆಯನ್ನು ಜೋಸ್ ಬಟ್ಲರ್ ಅಳಿಸಿ ಹಾಕಿ ಬೇಡದ ದಾಖಲೆಗೆ ಪಾತ್ರರಾಗಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಜೋಸ್ ಬಟ್ಲರ್, ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬಟ್ಲರ್, ರಾಜಸ್ಥಾನ ರಾಯಲ್ಸ್ ಪರ 14 ಪಂದ್ಯಗಳನ್ನಾಡಿ 4 ಅರ್ಧಶತಕ ಸಹಿತ 392 ರನ್ ಬಾರಿಸುವ ಮೂಲಕ, ರಾಯಲ್ಸ್ ಪರ ಎರಡನೇ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.
ಆರ್‌ಸಿಬಿ, ಮುಂಬೈ ಕೈಯಲ್ಲಿ ರಾಯಲ್ಸ್ ಭವಿಷ್ಯ!
ರಾಜಸ್ಥಾನ ರಾಯಲ್ಸ್ ‘ನಾಕೌಟ್’ ಪಂದ್ಯದಲ್ಲಿ ಪಂಜಾಬ್ ಕಿಂಗ್‌್ಸ ವಿರುದ್ಧ 4 ವಿಕೆಟ್ ರೋಚಕ ಗೆಲುವು ಸಾಧಿಸಿ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ರಾಯಲ್ಸ್‌ನ ಪ್ಲೇ-ಆಫ್ ಭವಿಷ್ಯ ಮುಂಬೈ ಹಾಗೂ ಆರ್‌ಸಿಬಿ ಕೈಯಲ್ಲಿದ್ದು ಈ ಎರಡೂ ತಂಡಗಳನ್ನು ತಮ್ಮ ಕೊನೆಯ ಪಂದ್ಯವನ್ನು ಸೋತರೆ ರಾಯಲ್ಸ್‌ಗೆ ಪ್ಲೇ-ಆಫ್ ಪ್ರವೇಶ ಸಿಗಬಹುದು.
ಬ್ಯಾಟರ್ ಸ್ನೇಹಿ ಪಿಚ್‌ನಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್ ಬೌಲಿಂಗ್‌ನಲ್ಲಿ ಉತ್ತಮ ಆರಂಭ ಪಡೆದರೂ, ಪಂಜಾಬ್ ಕೊನೆಯ 6 ಓವರಲ್ಲಿ ಪುಟಿದೇಳುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಕೊನೆ 2 ಓವರಲ್ಲಿ 46 ರನ್ ಸಿಡಿಸಿ 5 ವಿಕೆಟ್‌ಗೆ 187 ರನ್ ಕಲೆಹಾಕಿತು.
2ನೇ ಇನ್ನಿಂಗ್‌್ಸನಲ್ಲೂ ಬ್ಯಾಟಿಂಗ್‌ಗೆ ಅನುಕೂಲಕರವೆನಿಸಿದ ಪಿಚ್‌ನಲ್ಲಿ ಪಂಜಾಬ್, ನಿರೀಕ್ಷಿಸಿದ್ದಕ್ಕಿಂತ ಕನಿಷ್ಠ 10 ರನ್ ಕಡಿಮೆ ದಾಖಲಿಸಿತು. ಗುರಿ ಬೆನ್ನತ್ತಲು ಇಳಿದ ರಾಯಲ್ಸ್ ಆರಂಭದಲ್ಲೇ ಬಟ್ಲರ್(0) ವಿಕೆಟ್ ಕಳೆದುಕೊಂಡರೂ, 2ನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ ಪಡಿಕ್ಕಲ್ 73 ರನ್ ಜೊತೆಯಾಟವಾಡಿದರು.
IPL 2023 ಲಖನೌಗೆ ಸತತ 2ನೇ ಪ್ಲೇ-ಆಫ್ ಗುರಿ; ಅಡ್ಡಗಾಲು ಹಾಕಲು ಕೆಕೆಆರ್ ರೆಡಿ
30 ಎಸೆತದಲ್ಲಿ 51 ರನ್ ಸಿಡಿಸಿ ಪಡಿಕ್ಕಲ್ ಔಟಾದ ಬೆನ್ನಲ್ಲೇ ನಾಯಕ ಸ್ಯಾಮ್ಸನ್ ಕೂಡ ಪೆವಿಲಿಯನ್‌ಗೆ ಮರಳಿದರು. ಈ ಆವೃತ್ತಿಯಲ್ಲಿ 5ನೇ ಅರ್ಧಶತಕ ದಾಖಲಿಸಿ ಜೈಸ್ವಾಲ್(50) ಔಟಾದಾಗ ತಂಡಕ್ಕೆ 5.3 ಓವರಲ್ಲಿ ಗೆಲ್ಲಲು ಇನ್ನೂ 51 ರನ್ ಬೇಕಿತ್ತು. ಹೆಟ್ಮೇಯರ್ 28 ಎಸೆತದಲ್ಲಿ 46, ರಿಯಾನ್ ಪರಾಗ್ 12 ಎಸೆತದಲ್ಲಿ 20 ರನ್ ಸಿಡಿಸಿ ತಂಡವನ್ನು ಗೆಲುವಿನ ಹೊಸ್ತಿಲು ತಲುಪಿಸಿದರು. ಕೊನೆಯ ಓವರಲ್ಲಿ ಗೆಲ್ಲಲು 9 ರನ್ ಬೇಕಿದ್ದಾಗ ಇಂಪ್ಯಾಕ್ಟ್ ಆಟಗಾರ ಧೃವ್ ಜುರೆಲ್ ನಿರಾಯಾಸವಾಗಿ ಇನ್ನೂ 2 ಎಸೆತ ಬಾಕಿ ಇರುವಂತೆ ತಂಡವನ್ನು ಜಯದ ದಡ ಸೇರಿಸಿದರು.
ರಾಯಲ್ಸ್ ತಂಡದ ಪ್ಲೇ-ಆಫ್ ಹಾದಿ ಹೇಗೆ?
ರಾಜಸ್ಥಾನ ತನ್ನ ಗುಂಪು ಹಂತದ ಪಂದ್ಯಗಳನ್ನು ಪೂರೈಸಿದೆ. ಪಂಜಾಬ್ ವಿರುದ್ಧ ರಾಯಲ್ಸ್ 18.3 ಓವರ್‌ನೊಳಗೆ ಗೆದ್ದಿದ್ದರೆ ತಂಡದ ನೆಟ್ ರನ್‌ರೇಟ್ ಆರ್‌ಸಿಬಿಯ ನೆಟ್ ರನ್‌ರೇಟ್‌ಗಿಂತ ಉತ್ತಮಗೊಳ್ಳುತಿತ್ತು. ಸದ್ಯ ಆರ್‌ಸಿಬಿ 13 ಪಂದ್ಯಗಳಲ್ಲಿ 14 ಅಂಕ, +0.18 ನೆಟ್ ರನ್‌ರೇಟ್‌ನೊಂದಿಗೆ 4ನೇ ಸ್ಥಾನದಲ್ಲಿದೆ.
ರಾಯಲ್ಸ್ 14 ಪಂದ್ಯಗಳಲ್ಲಿ 14 ಅಂಕ, +0.15 ನೆಟ್ ರನ್‌ರೇಟ್‌ನೊಂದಿಗೆ 5ನೇ ಸ್ಥಾನ ಪಡೆದಿದೆ. ಒಂದು ವೇಳೆ ಭಾನುವಾರ ಮುಂಬೈ ಇಂಡಿಯನ್ಸ್ ತನ್ನ ಕೊನೆಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು, ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ 6 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಸೋತರೆ ಆಗ ರಾಜಸ್ಥಾನ ರಾಯಲ್ಸ್ ನೆಟ್ ರನ್‌ರೇಟ್‌ನಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿ ಪ್ಲೇ-ಆಫ್‌ಗೇರಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.