ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಬೆಟ್ಟಿಂಗ್ ಹಗರಣ ಬಗೆದಷ್ಟು ಬಂಡವಾಳ ಬಯಲಾಗುತ್ತಿದೆ. ಇದೀಗ ಇಬ್ಬರು ಕೆಪಿಎಲ್ ಕ್ರಿಕೆಟಿಗರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾದ ಸವಿಸ್ತಾರವಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಅ.26]: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ನಡೆದಿವೆ ಎನ್ನಲಾದ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಗಳು ಮತ್ತಷ್ಟು ಆಘಾತಕಾರಿ ಅಂಶಗಳನ್ನು ಹೊರಗೆಡಹಿವೆ. ಬೆಟ್ಟಿಂಗ್, ಫಿಕ್ಸಿಂಗ್ ಆರೋಪದಲ್ಲಿ ತೊಡಗಿಕೊಂಡಿದ್ದ ಆರೋಪದ ಮೇರೆಗೆ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಿಕ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಬಂಧನದ ಬಳಿಕ ಇದೀಗ ಇಬ್ಬರು ಕ್ರಿಕೆಟಿಗರೇ ಫಿಕ್ಸಿಂಗ್ ಬಲೆಗೆ ಬಿದ್ದಿದ್ದಾರೆ. ಇದರೊಂದಿಗೆ ಕೆಪಿಎಲ್ ಬೆಟ್ಟಿಂಗ್, ಫಿಕ್ಸಿಂಗ್‌ಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಬಂಧಿತರ ಸಂಖ್ಯೆ 4ಕ್ಕೇರಿದೆ.
undefined
KPL ಬೆಟ್ಟಿಂಗ್; ಬೆಳಗಾವಿ ಬಳಿಕ ಬಳ್ಳಾರಿ ಟೀಂ ಮಾಲಿಕನ ವಿಚಾರಣೆ!
2018ರಲ್ಲಿ ನಡೆದ ಕೆಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ಫಿಕ್ಸಿಂಗ್ ನಡೆಸಿದ ಆರೋಪದ ಮೇರೆಗೆ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ (35) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ವಿಶ್ವನಾಥನ್ (34) ಅವರುಗಳನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಕೆಪಿಎಲ್ ಬೆಟ್ಟಿಂಗ್, ಫಿಕ್ಸಿಂಗ್ ಹಗರಣದಲ್ಲಿ ಇಬ್ಬರು ಕ್ರಿಕೆಟಿಗರು ಬಂಧನಕ್ಕೆ ಒಳಗಾಗುತ್ತಿರುವುದು ಇದೇ ಮೊದಲು. ಅಲ್ಲದೆ, ನಿರ್ದಿಷ್ಟ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತು ರಾಜ್ಯದ ಕ್ರಿಕೆಟಿಗರು ಬಂಧನಕ್ಕೆ ಒಳಗಾಗುತ್ತಿರುವುದೂ ಇದೇ ಮೊದಲು.
KPL ಸ್ಪಾಟ್ ಫಿಕ್ಸಿಂಗ್ ಯತ್ನಿಸಿದ್ದ ಬುಕ್ಕಿ ಬಂಧನ..!
ಈ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಮೂಲದ ಮನೋಜ್ ಕುಮಾರ್, ವೆಂಕಿ, ಖಾನ್ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಕಡಿಮೆ ರನ್ ಫಿಕ್ಸ್:
2018ರ ಆ.31ರಂದು ಮೈಸೂರಿನಲ್ಲಿ ನಡೆದ ಕೆಪಿಎಲ್ 7ನೇ ಆವೃತ್ತಿಯ 18ನೇ ಪಂದ್ಯದಲ್ಲಿ ನಡೆದ ಘಟನೆ ಇದು. ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ಮಧ್ಯೆ ನಡೆದ ಈ ಪಂದ್ಯಕ್ಕೂ ಮುನ್ನ ಬೆಂಗಳೂರು ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್‌ಗೆ ಶಿವಮೊಗ್ಗ ತಂಡದ ನಿಶಾಂತ್ ಸಿಂಗ್ ಶೆಖಾವತ್ ಅಲಿಯಾಸ್ ಚೋಟು ಎಂಬಾತನಿಂದ ಚಂಡೀಗಢ ಮೂಲದ ಮನೋಜ್ ಅಲಿಯಾಸ್ ಮೌಂಟಿ ಎಂಬ ಬುಕ್ಕಿ ಪರಿಚಯವಾಗಿದ್ದ.
ಕೋಚ್ ವಿನು ಪ್ರಸಾದ್ ಮತ್ತು ಬುಕ್ಕಿ ಮನೋಜ್ ಸೇಂಟ್ ಜಾನ್ಸ್ ರಸ್ತೆಯಲ್ಲಿರುವ ‘ಲೆಮನ್ ಟ್ರೀ’ ಹೋಟೆಲ್‌ನಲ್ಲಿ ಕುಳಿತು ಆಟಗಾರರನ್ನು ಫಿಕ್ಸ್ ಮಾಡುವ ಬಗ್ಗೆ ಮಾತನಾಡಿದ್ದರು. ಅದರಂತೆ ಆರಂಭಿಕ ಬ್ಯಾಟ್ಸ್‌ಮನ್ ಎಂ.ವಿಶ್ವನಾಥನ್ ಜತೆ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಮಾತುಕತೆ ನಡೆದಿತ್ತು. ಹುಬ್ಬಳ್ಳಿ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಆಟವಾಡಿ 20 ಎಸೆತಗಳಲ್ಲಿ 10ಕ್ಕಿಂತ ಕಡಿಮೆ ರನ್ ಗಳಿಸಬೇಕು ಎಂದು ವಿಶ್ವನಾಥನ್‌ಗೆ ವಿನು ಪ್ರಸಾದ್ ಸೂಚಿಸಿದ್ದ. ಅದರಂತೆ ಆ.31ರ ಪಂದ್ಯದಲ್ಲಿ ವಿಶ್ವನಾಥನ್ 17 ಎಸೆತಗಳಲ್ಲಿ 9 ರನ್ ಗಳಿಸಿ ಔಟಾಗಿದ್ದ.
ಡ್ರಮ್ಮರ್ ಬಂಧನದಿಂದ ಸುಳಿವು:
ಬಳ್ಳಾರಿ ಟಸ್ಕರ್ಸ್ ತಂಡದಲ್ಲಿ ಡ್ರಮ್ಮರ್ ಆಗಿದ್ದ ಭವೇಶ್ ಬಾಫ್ನಾ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ತನ್ನ ಸ್ನೇಹಿತನಾಗಿರುವ ಬೌಲರ್ ಒಬ್ಬನಿಗೆ ಹೆಚ್ಚು ರನ್ ಕೊಡಲು ಆಮಿಷವೊಡ್ಡಿದ ಆರೋಪದಲ್ಲಿ ಭವೇಶ್‌ನನ್ನು ಬಂಧಿಸಲಾಗಿತ್ತು. ಈತನ ವಿಚಾರಣೆ ನಡೆಸಿದ ವೇಳೆ ಕೆಪಿಎಲ್‌ನಲ್ಲಿ ತೊಡಗಿಕೊಂಡಿದ್ದ ಇನ್ನಷ್ಟು ಮಂದಿ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಅಚ್ಚರಿಯ ವಿಷಯಗಳು ಸುಳಿವು ಪೊಲೀಸರಿಗೆ ದೊರೆತಿತ್ತು. ಅದನ್ನು ಬೆನ್ನತ್ತಿದಾಗ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಸ್ಪಾಟ್ ಫಿಕ್ಸಿಂಗ್ ಹಗರಣವೂ ಬೆಳಕಿಗೆ ಬಂದು, ಆರೋಪಿಗಳನ್ನು ಬಂಧಿಸಲಾಯಿತು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಧಾನವಾಗಿ ಆಡಲು 5 ಲಕ್ಷ ರು. ‘ಫಿಕ್ಸ್’!
ನಿಧಾನಗತಿ ಆಟ ಆಡಲು ಬುಕ್ಕಿಗಳು ಹಾಗೂ ವಿಶ್ವನಾಥನ್ ನಡುವೆ ಐದು ಲಕ್ಷ ರು.ಗಳಿಗೆ ಒಪ್ಪಂದ ಆಗಿತ್ತು. ವಿಶ್ವನಾಥನ್‌ಗೆ ಬೌಲಿಂಗ್ ಕೋಚ್ ವಿನುಪ್ರಸಾದ್ ಮೂಲಕ ಬುಕ್ಕಿ ಪರಿಚಯವಾಗಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ವಿನು ಪ್ರಸಾದ್ ಮೂಲತಃ ಕೇರಳದವನಾಗಿದ್ದು, 16 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಪರ ಆಡಿದ್ದಾನೆ. ಅಲ್ಲದೆ, ಒಂದು ರಣಜಿ ಪಂದ್ಯದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, 2015 ಮತ್ತು 2016ನೇ ಸಾಲಿನಲ್ಲಿ ಹುಬ್ಬಳ್ಳಿ ಟೈಗರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ಪರ ಆಡಿದ್ದಾನೆ.
ಟೀ ಶರ್ಟ್‌ನ ತೋಳು ಎಳೆದು ಬುಕಿಗಳಿಗೆ ಸನ್ನೆ
ನಿಧಾನಗತಿಯ ಆಟ ಆರಂಭಿಸುವ ಮುನ್ನ ಟೀ ಶರ್ಟ್‌ನ ತುಂಬು ತೋಳನ್ನು ಹಿಂದಕ್ಕೆ ಎಳೆದುಕೊಳ್ಳುವ ಮೂಲಕ ಸೂಚನೆ ನೀಡಬೇಕು ಎಂದು ಬ್ಯಾಟ್ಸ್‌ಮನ್ ವಿಶ್ವನಾಥನ್‌ಗೆ ಸೂಚಿಸಲಾಗಿತ್ತು. ಅದರಂತೆ ವಿಶ್ವನಾಥನ್ ಬುಕ್ಕಿಗಳಿಗೆ ಸೂಚನೆ ನೀಡಿದ್ದ. ಬುಕ್ಕಿಗಳು ಈತನ ಮೇಲೆ ಬೆಟ್ಟಿಂಗ್ ಕಟ್ಟಿ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ. ವಿನುಪ್ರಸಾದ್‌ಗೆ ಸ್ನೇಹಿತ ವೆಂಕಿ ಮೂಲಕ ದೆಹಲಿ ಮೂಲದ ಖಾನ್ ಎಂಬಾತ ಪರಿಚಯವಾಗಿದ್ದು, ಈತ ಕೂಡ ಸ್ಪಾಟ್ ಫಿಕ್ಸಿಂಗ್ ಮಾಡಿಸುತ್ತಿದ್ದ. ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ವಿವರಿಸಿದ್ದಾರೆ.
ಬಂಧಿತರ ಸಂಖ್ಯೆ 4ಕ್ಕೆ:
ಕೆಪಿಎಲ್‌ನ 8ನೇ ಆವೃತ್ತಿಯಲ್ಲಿ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪ ಸಂಬಂಧ ಬೆಳಗಾವಿ ತಂಡದ ಮಾಲೀಕ ಅಶ್ಫಾಕ್ ಅಲಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅಶ್ಫಾಕ್ ದುಬೈ ಮೂಲದ ಬುಕ್ಕಿ ಜತೆ ಬೆಟ್ಟಿಂಗ್ ನಡೆಸಿರುವುದು ಸಿಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಅ.2ರಂದು ಬಳ್ಳಾರಿ ಟಸ್ಕರ್ಸ್ ತಂಡದ ವೇಗದ ಬೌಲರ್‌ವೊಬ್ಬರಿಗೆ ಆಮಿಷವೊಡ್ಡಿದ್ದ ಡ್ರಮ್ಮರ್ ಆಗಿದ್ದ ಭವೇಶ್ ಬಾಫ್ನಾನನ್ನು ಅ.2ರಂದು ಬಂಧಿಸಲಾಗಿತ್ತು. ಇದೀಗ ಒಬ್ಬ ಕೋಚ್ ಹಾಗೂ ಇನ್ನೊಬ್ಬ ಆಟಗಾರನ ಬಂಧನದೊಂದಿಗೆ ಪೊಲೀಸ್ ಬಲೆಗೆ ಬಿದ್ದವರ ಸಂಖ್ಯೆ ನಾಲ್ಕಕ್ಕೇರಿದೆ.
’ಕೆಪಿಎಲ್‌ನ ಹಲವು ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆದಿರುವ ಶಂಕೆ ಇದೆ. ಪ್ರತಿಯೊಬ್ಬರನ್ನೂ ಕರೆದು ತನಿಖೆ ನಡೆಸಲಾಗುತ್ತಿದೆ. ಭವೇಶ್ ಬಫ್ನ ಹಾಗೂ ಕೋಚ್ ವಿನುಪ್ರಸಾದ್ ಸ್ನೇಹಿತರು. ಆದರೆ ಇವರ ಬುಕ್ಕಿ ಗ್ಯಾಂಗ್‌ಗಳು ಬೇರೆಯದ್ದಾಗಿವೆ. ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ’.
- ಸಂದೀಪ್ ಪಾಟೀಲ್, ಜಂಟಿ ಪೊಲೀಸ್ ಆಯುಕ್ತ (ಅಪರಾಧ)