ಭಾರಿ ಪ್ರಮಾಣದಲ್ಲಿ ಪ್ರತಿಕಾಯ ವೃದ್ಧಿ, ಹೊಸ ತಳಿ ದೃಢಪಡದಿದ್ದರೆ ಸೋಂಕಿನ ಅಬ್ಬರ ಸಾಧ್ಯತೆ ಕ್ಷೀಣ
ರಾಕೇಶ್ ಎನ್.ಎಸ್.
ಬೆಂಗಳೂರು(ಅ.10): ರಾಜ್ಯದಲ್ಲಿ ಕೋವಿಡ್-19ರ ಬಾಧೆ ಕನಿಷ್ಠ ಪ್ರಮಾಣಕ್ಕಿಳಿದಿದ್ದು, ಸೋಂಕಿನ ಅನಾಹುತ ಕೊನೆಯಾಗುವ ದಿನಗಳು ಸನ್ನಿಹಿತವಾಗುತ್ತಿವೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೋನಾದ ಹೊಸ ತಳಿಗಳು ಹುಟ್ಟಿಕೊಳ್ಳದಿದ್ದರೆ ಕೋವಿಡ್‌ನಿಂದ ಇನ್ನು ಮುಂದೆ ಸಂಕಷ್ಟಕ್ಕೊಳಗಾಗುವ ಸಾಧ್ಯತೆಗಳಿಲ್ಲ ಎಂಬುದು ತಜ್ಞರ ಖಚಿತ ನಿಲುವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಕೆಲ ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರ ಸಾವು ಘಟಿಸಿಲ್ಲ. ಹಾಗೆಯೇ ಏಳು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಸಾವು ದಾಖಲಾಗಿದೆ.
undefined
ರಾಜ್ಯದಲ್ಲಿನ ಜನಜೀವನ ಕೋವಿಡ್ ಪೂರ್ವದ ಸ್ಥಿತಿ ತಲುಪಿದೆ. ಜನರು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿಲ್ಲ. ಗಣೇಶ ಚತುರ್ಥಿ, ದಸರಾ, ಪಾದಯಾತ್ರೆ, ರಾಜಕೀಯ ಸಮಾವೇಶ ಎಂದು ಲಕ್ಷಾಂತರ ಮಂದಿ ಒಂದೆಡೆ ಸೇರುತ್ತಿದ್ದಾರೆ. ಅದಾಗ್ಯೂ ಕೊರೋನಾ ಪಾಸಿಟಿವಿಟಿ ದರವಾಗಲಿ, ಮರಣದರವಾಗಲಿ ಎಲ್ಲೂ ಹೆಚ್ಚಾಗಿಲ್ಲ ಎಂಬುದು ಗಮನಾರ್ಹ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ. ಎಂ.ಕೆ.ಸುದರ್ಶನ್ ಹೇಳುತ್ತಾರೆ.
CORONA CRISIS: ಸೋಮವಾರ ಬೆಂಗಳೂರಲ್ಲಿ ಕೇವಲ 1 ಕೋವಿಡ್ ಕೇಸು!
75% ಮಕ್ಕಳಲ್ಲಿ ಪ್ರತಿಕಾಯ:
ಕೋವಿಡ್ ಅಪಾಯ ತಗ್ಗಿಸುವ ಲಸಿಕೆ ಪಡೆಯದ ಹನ್ನೆರಡು ವರ್ಷದ ಮಕ್ಕಳ ಪೈಕಿ ಶೇ. 75 ಮಂದಿಯಲ್ಲಿ ಕೋವಿಡ್ ಪ್ರತಿಕಾಯಗಳಿರುವುದು ಜೂನ್ ತಿಂಗಳಲ್ಲಿ ನಡೆಸಿದ ಪ್ರತಿಕಾಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮಕ್ಕಳಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವಾಗ, ವಯಸ್ಕರಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಪ್ರತಿಕಾಯ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಒಮ್ಮೆ ಸೃಷ್ಟಿಯಾದ ಪ್ರತಿಕಾಯ ಆರು ತಿಂಗಳ ಕಾಲ ಇರುತ್ತದೆ. ಇದರರ್ಥ ಈ ವರ್ಷದ ಡಿಸೆಂಬರ್ ತನಕ ಹೆಚ್ಚಿನ ಅಪಾಯಗಳಾಗುವ ಸಂಭವವಿಲ್ಲ.
ಕಳೆದ ಮೂರು ತಿಂಗಳಲ್ಲಿ (ಜುಲೈ 1ರಿಂದ ಅಕ್ಟೋಬರ್ 5) ರಾಜ್ಯದಲ್ಲಿ 94,815 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. 168 ಮಂದಿ ಸೋಂಕಿತರು ಮರಣವನ್ನಪ್ಪಿದ್ದಾರೆ. ಕೋವಿಡ್ ಅತಿ ಹೆಚ್ಚು ಕಾಣಿಸಿಕೊಂಡು, ಹೆಚ್ಚು ಜನರು ಸಾವಿಗೀಡಾದ ಬೆಂಗಳೂರು ನಗರದಲ್ಲಿಯೇ ಸೋಂಕು ನಿಯಂತ್ರಣದಲ್ಲಿದೆ. ಈ ಅವಧಿಯಲ್ಲಿ ಪತ್ತೆಯಾದ ಸೋಂಕಿತರಲ್ಲಿ ಬೆಂಗಳೂರು ನಗರದ ಪಾಲು ಶೇ. 70 (67,105 ಮಂದಿ) ಇದೆ. ಆದರೆ 18 ಮಂದಿ ಮಾತ್ರ ಮರಣವನ್ನಪ್ಪಿದ್ದು, ಈ ಅವಧಿಯಲ್ಲಿ ಘಟಿಸಿದ್ದ ಕೋವಿಡ್ ಸಾವಿನ ಶೇ. 10.71 ಮಾತ್ರ ಬೆಂಗಳೂರಿನಲ್ಲಿ ಸಂಭವಿಸಿದೆ. ಒಟ್ಟಾರೆ ಮರಣದರ ಶೇ. 0.02ಕ್ಕೆ ಕುಸಿದಿದೆ.
ಅತಿ ಹೆಚ್ಚು ಸಾವುಗಳು 2,021 ಮಂದಿಗೆ ಸೋಂಕು ದೃಢಪಟ್ಟಿರುವ ಧಾರವಾಡದಲ್ಲಿ 24 ಉಂಟಾಗಿವೆ. 1,663 ಪ್ರಕರಣ ವರದಿಯಾಗಿರುವ ಬಳ್ಳಾರಿಯಲ್ಲಿ 22 ಮರಣ ಘಟಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಸುದರ್ಶನ್, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಿರುವುದರ ಬಗ್ಗೆ ನಾವು ಈಗಾಗಲೇ ಪರಿಶೀಲನೆ ನಡೆಸಿದ್ದೇವೆ. ಇತ್ತೀಚೆಗೆ ಸಂಭವಿಸಿರುವ ಬಹುತೇಕ ಸಾವುಗಳಿಗೆ ಸಹ ಅಸ್ವಸ್ಥತೆಯೇ ಪ್ರಮುಖ ಕಾರಣವಾಗಿದೆಯೇ ಹೊರತು ಕೋವಿಡ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉಳಿದಂತೆ 1,212 ಪ್ರಕರಣ ವರದಿಯಾಗಿರುವ ಶಿವಮೊಗ್ಗದಲ್ಲಿ 15, ಕ್ರಮವಾಗಿ 888 ಮತ್ತು 3,862 ಪ್ರಕರಣ ದಾಖಲಾಗಿರುವ ಮಂಡ್ಯ ಮತ್ತು ಮೈಸೂರಿನಲ್ಲಿ ತಲಾ 11 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗ್ಳೂರಲ್ಲಿ 28 ತಿಂಗಳ ಬಳಿಕ ಕನಿಷ್ಠ ಮಟ್ಟಕ್ಕಿಳಿದ ಕೊರೋನಾ..!
ರಾಜ್ಯ ಕೋವಿಡ್ ಮುಕ್ತವಾಗಿದೆ ಎಂದು ಘೋಷಿಸುವುದು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಡಬ್ಲ್ಯುಎಚ್‌ಒಯು ಕೋವಿಡ್‌ನ ಕೊನೆ ಕಾಣುತ್ತಿದೆ ಎಂದು ಒಂದೆರಡು ವಾರದ ಹಿಂದೆ ಹೇಳಿತ್ತು. ಡಬ್ಲ್ಯುಎಚ್‌ಒ ಈ ಬಗ್ಗೆ ಸ್ಪಷ್ಟನಿಲುವು ತಾಳಿದ ಬಳಿಕ ಕೇಂದ್ರ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬಹುದು. ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್‌ನಿಂದ ಹಿರಿಯ ನಾಗರಿಕರು ಮರಣವನ್ನಪ್ಪುತ್ತಿರುವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅಲ್ಲೂ ಹೊಸ ತಳಿ ಕಾಣಿಸಿಕೊಂಡಿಲ್ಲ. ಹಾಗೆಯೇ ಅಲ್ಲಿನ ಪರಿಸ್ಥಿತಿಗೂ ನಮ್ಮಲ್ಲಿನ ಸ್ಥಿತಿಗತಿಗೂ ಸಾಕಷ್ಟುವ್ಯತ್ಯಾಸವಿದೆ. ನಮ್ಮಲ್ಲಿ ತಾಂತ್ರಿಕ ಸಮಿತಿ ಸದ್ಯಕ್ಕಂತೂ ಯಾವುದೇ ಹೊಸ ಶಿಫಾರಸ್ಸುಗಳನ್ನು ಮಾಡುವುದಿಲ್ಲ ಅಂತ ಡಾ. ಸುದರ್ಶನ್ ತಿಳಿಸಿದ್ದಾರೆ.
ಬೀದರ್‌ನಲ್ಲಿ 212, ಚಿಕ್ಕಮಗಳೂರಿನಲ್ಲಿ 792 ಪ್ರಕರಣ ದಾಖಲಾಗಿದ್ದು ಒಂದೇ ಒಂದು ಸಾವು ಸಂಭವಿಸಿಲ್ಲ. ಉಳಿದಂತೆ ಯಾದಗಿರಿ 55, ವಿಜಯಪುರ 183, ರಾಮನಗರ 1,385, ಕೊಡಗು 1,530, ಹಾಸನ 1,802 ಮತ್ತು ಬಾಗಲಕೋಟೆಯಲ್ಲಿ 494 ಪ್ರಕರಣ ವರದಿಯಾಗಿದ್ದು ತಲಾ ಒಂದು ಸಾವು ಮಾತ್ರ ಘಟಿಸಿದೆ. ಬೆಳಗಾವಿ 1,559 ಪ್ರಕರಣ, ಚಾಮರಾಜನಗರ 730, ಚಿಕ್ಕಬಳ್ಳಾಪುರ 498, ಚಿತ್ರದುರ್ಗ 171 ಪ್ರಕರಣ ವರದಿಯಾಗಿದ್ದು ತಲಾ ಇಬ್ಬರು ಮರಣವನ್ನಪ್ಪಿದ್ದಾರೆ.