ಮುಂದಿನ 2 ವಾರ ಅಮೆರಿಕಕ್ಕೆ ನರಕಸದೃಶ ಸಾಧ್ಯತೆ!

By Kannadaprabha NewsFirst Published Apr 2, 2020, 7:16 AM IST
Highlights

ಅಮೆರಿಕದಲ್ಲಿ 2.4 ಲಕ್ಷ ಸಾವಿನ ಭೀತಿ: ಟ್ರಂಪ್‌| ಮುಂದಿನ 2 ವಾರ ಅಮೆರಿಕಕ್ಕೆ ನರಕಸದೃಶ ಸಾಧ್ಯತೆ| ಸಾಮಾಜಿಕ ಅಂತರ ಕಾದರಷ್ಟೇ ಪರಿಸ್ಥಿತಿ ಸುಧಾರಣೆ| 4113 ಮಂದಿ: ಅಮೆರಿಕದಲ್ಲಿ ಸಾವಿನ ಸಂಖ್ಯೆ 9/11 ಉಗ್ರ ದಾಳಿಗಿಂತಲೂ ಹೆಚ್ಚು| 2 ಲಕ್ಷ ಜನ: ಅಮೆರಿಕದಲ್ಲಿ ಕೊರೋನಾಗೆ ತುತ್ತಾದವರ ಸಂಖ್ಯೆ ವಿಶ್ವದಲ್ಲೇ ಗರಿಷ್ಠ

ವಾಷಿಂಗ್ಟನ್‌(ಏ.02): ಕೊರೋನಾ ವೈರಸ್‌ಗೆ ಸುಮಾರು 1 ಲಕ್ಷ ಜನರು ಅಮೆರಿಕದಲ್ಲಿ ಸಾವನ್ನಪ್ಪಬಹುದು ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ ವೈರಾಣು ಇನ್ನಷ್ಟುವಿನಾಶವನ್ನು ದೇಶದಲ್ಲಿ ಸೃಷ್ಟಿಸಬಹುದು ಎಂಬ ಮುನ್ಸೂಚನೆ ನೀಡಿದ್ದಾರೆ. ‘ಕೊರೋನಾ ವೈರಸ್‌ಗೆ ದೇಶದಲ್ಲಿ 1 ಲಕ್ಷದಿಂದ 2.40 ಲಕ್ಷ ಜನ ಸಾವನ್ನಪ್ಪಬಹುದು ಎಂಬ ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಇದೀಗ ಸ್ವತಃ ಶ್ವೇತಭವನ ಕೂಡಾ ಪುನರುಚ್ಚರಿಸಿದೆ.

ಕೊರೋನಾ ಕಾರ‍್ಯಪಡೆ ಮುಖ್ಯಸ್ಥರ ಜತೆ ಶ್ವೇತಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌, ‘ಮುಂದಿನ 2 ವಾರಗಳು ಅಮೆರಿಕನ್ನರ ಪಾಲಿಗೆ ನರಕಸದೃಶವಾಗಬಹುದು. ಸಾವಿರಾರು ಸಾವುಗಳನ್ನು ಅಮೆರಿಕ ಕಾಣಬಹುದು. ಕೊರೋನಾ ವಿಚಾರವು ಅಮೆರಿಕನ್ನರ ಪಾಲಿಗೆ ಜೀವನ್ಮರಣ ಹೋರಾಟ’ ಎಂದು ಎಚ್ಚರಿಸಿದರು.

ಅಮೆರಿಕದಲ್ಲಿ ಪ್ರತಿ ಎರಡೂವರೆ ನಿಮಿಷಕ್ಕೊಂದು ಸಾವು: ವುಹಾನ್ ಹಿಂದಿಕ್ಕಿದ ನ್ಯೂಯಾರ್ಕ್!

‘ಆದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಮಾಡಿರುವ ಮನವಿಯನ್ನು ದೇಶವಾಸಿಗಳು ಚಾಚೂತಪ್ಪದೇ ಪಾಲಿಸಬೇಕು. ಯಾವುದೇ ಕಾರಣಕ್ಕೂ 10ಕ್ಕಿಂತ ಹೆಚ್ಚು ಜನ ಒಂದು ಕಡೆ ಸೇರಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹೋಟೆಲ್‌ ಮತ್ತು ಬಾರ್‌ಗಳಿಂದ ಸಂಪೂರ್ಣ ದೂರ ಇರಬೇಕು. ಆಗ ಕಾರ್ಮೋಡದಲ್ಲಿ ಬೆಳ್ಳಿಗೆರೆ ಕಾಣಬಹುದು’ ಎಂದು ಆಶಾವಾದ ವ್ಯಕ್ತಪಡಿಸಿದರು.

"

ಇದಕ್ಕೆ ಪೂರಕವಾಗಿ ಮಾತನಾಡಿದ ಅಮೆರಿಕ ಕೊರೋನಾ ಟಾಸ್ಕ್‌ಫೋರ್ಸ್‌ ಸಂಯೋಜಕಿ ಡಾ| ದೇಬೋರಾ ಬ್ರಿಕ್ಸ್‌ ಹಾಗೂ ತಜ್ಞೆ ಡಾ| ಆಂಟನಿ ಫೌಸಿ, ‘ಮೊದಲ ವಿಶ್ವಯುದ್ಧದಲ್ಲಿ 53 ಸಾವಿರ ಅಮೆರಿಕನ್ನರು ಮಡಿದಿದ್ದರು. ಸಾವಿನ ಸಂಖ್ಯೆ ಇದನ್ನು ಮೀರಿ 2ನೇ ವಿಶ್ವಯುದ್ಧದಲ್ಲಿ ಮಡಿದ ಸಂಖ್ಯೆಯಾದ 2.91 ಲಕ್ಷವನÜು್ನ ಸಮೀಪಿಸಬಹುದು. ಸಾಮಾಜಿಕ ಅಂತರ ಕಾಯ್ದುಕೊಂಡರೆ ಸಾವಿನ ಸಂಖ್ಯೆ ತಗ್ಗಬಹುದು’ ಎಂದರು.

ಅಮೆರಿಕದಲ್ಲಿ ಈವರೆಗೆ 1.90 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದ್ದು, 4113 ಜನರನ್ನು ಬಲಿ ಪಡೆದಿದೆ. 7220 ಜನರು ಮಾತ್ರ ಪೂರ್ಣ ಚೇತರಿಸಿಕೊಂಡಿದ್ದಾರೆ.

click me!