
ಜಮಖಂಡಿ(ಏ.08): ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಮನೆಯ ತೊಲೆಗೆ ನೇಣು ಬಿಗಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ತಾಲೂಕಿನ ಆಲಬಾಳ ಗ್ರಾಮದ ಗೀತಾ ಉರ್ಫ ಪದ್ಮಾ ಪೂಜಾರಿ (25) ಕೊಲೆಗೀಡಾದ ಗೃಹಿಣಿ. ಆಲಬಾಳ ಗ್ರಾಮದ ನೇಮಿನಾಥ ಪೂಜಾರಿ, ಪತ್ನಿ ಗೀತಾ ಅವರು ಕಂಕಣವಾಡಿ ಗ್ರಾಮದ ರವೀಂದ್ರ ಯಡಹಳ್ಳಿ ಎಂಬಾತರ ತೋಟದಲ್ಲಿ ಕೂಲಿ ಕೆಲಸಕ್ಕಿದ್ದರು. ತೋಟದ ಮನೆಯಲ್ಲೇ ವಾಸವಿದ್ದರು. ಜತೆಗೆ ಅತ್ತೆ, ಮಾವ, ಮೈದುನ ಇದ್ದರು. ಗೀತಾಳಿಗೆ ತವರು ಮನೆಯಿಂದ 4 ತೊಲೆ ಬಂಗಾರ ತರುವಂತೆ ಪೀಡಿಸಲಾಗುತ್ತಿತ್ತು. ಮಾನಸಿಕ, ದೈಹಿಕವಾಗಿ ಚಿತ್ರಹಿಂಸೆ ನೀಡಿ ಈಕೆಯ ಪತಿ, ಅತ್ತೆ, ಮಾವ, ಮೈದುನ ನಾಲ್ವರೂ ಸೇರಿ ಸೋಮವಾರ ರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿ ಮನೆಯ ತೊಲೆಗೆ ಹಗ್ಗದಿಂದ ನೇಣು ಬಿಗಿದಿದ್ದಾರೆ. ಮೃತ ಗೀತಾಳಿಗೆ 7 ತಿಂಗಳ ಗಂಡು ಮಗುವಿದೆ.
ಕಳ್ಳತನ ಪ್ರಕರಣ: ಮೂವರು ಅಂತಾರಾಜ್ಯ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು
ಆರೋಪಿಗಳಾದ ಮೃತಳ ಪತಿ ನೇಮಿನಾಥ ಪೂಜಾರಿ, ಮಾವ ಶಂಕರ ಪೂಜಾರಿ, ಅತ್ತೆ ಶಾಂತವ್ವ ಪೂಜಾರಿ, ಮೈದುನ ವಿನಯ ಪೂಜಾರಿ ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ. ಮೃತಳ ತಾಯಿ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಗುಣದಾಳ ಗ್ರಾಮದ ಸುನಂದಾ ಸದಾಶಿವ ಕಣಬೂರ ಅವರು ನೀಡದ ದೂರಿನನ್ವಯ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಎಸೈ ಬಸವರಾಜ ಅವಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಪಿಐ ಧರೇಗೌಡ ಪಾಟೀಲ ತನಿಖೆ ನಡೆಸಿದ್ದಾರೆ. ಡಿವೈಎಸ್ಪಿ ಆರ್.ಕೆ.ಪಾಟೀಲ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.