'ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವವರ ವಿರುದ್ಧ ದೂರು ದಾಖಲಿಸಿ'

By Kannadaprabha NewsFirst Published Apr 8, 2020, 12:58 PM IST
Highlights

ಜನಪ್ರತಿನಿಧಿಗಳ, ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಚಿವ ಶೆಟ್ಟರ ಸೂಚನೆ| ಕುಡಚಿ ಪಟ್ಟಣ ಸೇರಿದಂತೆ ಸೋಂಕು ದೃಢಪಟ್ಟಿರುವ ಪ್ರದೇಶವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಣೆ| ಮನೆ ಮನೆಗೆ ತೆರಳಿ ಜನರ ಆರೋಗ್ಯ ಮಾಹಿತಿ ಸಂಗ್ರಹಿಸುವ ಆಶಾ ಕಾರ್ಯಕರ್ತರು|

ಬೆಳಗಾವಿ(ಏ.08): ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣ ಸೇರಿದಂತೆ ಸೋಂಕು ದೃಢಪಟ್ಟಿರುವ ಪ್ರದೇಶನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಸಚಿವ ಜಗದೀಶ ಶೆಟ್ಟರ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಜಿಲ್ಲೆಯ ಚಿಕ್ಕೋಡಿ ಲೋಕೋಪಯೋಗಿ ಇಲಾಖೆಯ ನೌಕರರ ಭವನದಲ್ಲಿ ಮಂಗಳವಾರ ನಡೆದ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಡಚಿ ಪಟ್ಟಣವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಿರುವುದರಿಂದ ಆರೋಗ್ಯದ ದೃಷ್ಟಿಯಿಂದ ಎಲ್ಲರ ಮೇಲೆ ನಿಗಾ ಇಡುವ ಅಗತ್ಯತೆ ಕುರಿತು ಮೊದಲು ಸೂಕ್ತ ತಿಳಿವಳಿಕೆ ನೀಡಬೇಕು. ಆದಾಗ್ಯೂ ಒಪ್ಪದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕೊರೋನಾ ಭೀತಿ: ಬಫರ್‌ ಝೋನ್‌ ಇದ್ದರೂ ಕುಡಚಿ ಮಹಿಳೆ ಅಥಣಿಯಲ್ಲಿ ಪ್ರತ್ಯಕ್ಷ!

ಕುಡಚಿಯಲ್ಲಿ ಕೊರೋನಾ ವೈರಸ್‌ನ ನಾಲ್ಕು ಪಾಸಿಟಿವ್‌ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟುಎಚ್ಚರಿಕೆಯಿಂದ ಕೆಲಸ ಮಾಡಬೇಕು. ಎಲ್ಲ ಜಾತಿ ಧರ್ಮದವರಲ್ಲಿ ಸೋಂಕು ಕಂಡುಬಂದಿದೆ. ಆದ್ದರಿಂದ ತಬ್ಲಿಘಿ ಜಮಾತ್‌ಗೆ ಹೋಗಿಬಂದವರು ಸ್ವಯಂ ಪ್ರೇರಣೆಯಿಂದ ಮಾಹಿತಿ ನೀಡುವ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಲು ಮನವಿ ಮಾಡಿದರು. ಸ್ವಯಂ ಪ್ರೇರಣೆಯಿಂದ ಆರೋಗ್ಯ ಪರೀಕ್ಷೆಗೆ ಮುಂದಾಗುವ ಮೂಲಕ ತಮ್ಮ ಕುಟುಂಬ ಮತ್ತು ಸಾಮಾಜಿಕ ಆರೋಗ್ಯ ರಕ್ಷಣೆಗೆ ಸಹಕರಿಸಬೇಕು. ಮಾಹಿತಿಯನ್ನು ಮುಚ್ಚಿಟ್ಟರೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವರು ಎಚ್ಚರಿಸಿದರು.

ಶಾಸಕ ಪಿ.ರಾಜೀವ ಮಾತನಾಡಿ, ಧಾರ್ಮಿಕ ಮುಖಂಡರನ್ನು ಬಳಸಿಕೊಂಡು ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಸೂಕ್ತ ಜಾಗೃತಿ ಮಾಡಿಸಬೇಕು. ಅಂದಾಗ ಮಾತ್ರ ಅವರು ಸಹಕಾರ ನೀಡುತ್ತಾರೆ. ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕ್ಲಿನಿಕ್‌, ವೈದ್ಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ:

ಹೃದಯಾಘಾತ, ಹೆರಿಗೆ ಸೇರಿದಂತೆ ವಿವಿಧ ಬಗೆಯ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಮುಂದಾಗುವ ಖಾಸಗಿ ಕ್ಲಿನಿಕ್‌ ಹಾಗೂ ವೈದ್ಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಜನರಿಗೆ ಅನಾನುಕೂಲ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಶೆಟ್ಟರ ಅಧಿಕಾರಿಗಳಿಗೆ ಸೂಚಿಸಿದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಖಾಸಗಿ ಕ್ಲಿನಿಕ್‌ ಆರಂಭಿಸಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಮತ್ತಿತರ ನಿಯಮಾವಳಿ ಪಾಲಿಸಬೇಕು ಎಂದರು. ವಿಧಾನಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕುಡಚಿಯಲ್ಲಿ ಬರೀ ಆಶಾ ಕಾರ್ಯಕರ್ತೆಯರಿಂದ ಮಾಹಿತಿಯನ್ನು ಸಂಗ್ರಹಿಸುವುದು ಕಷ್ಟಕರ. ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸೌಹಾರ್ದ ಸಭೆಯನ್ನು ಕರೆದು ಜನರ ಮನವೊಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕ ಮಹೇಶ ಕುಮಟಳ್ಳಿ , ಶಾಸಕ ಗಣೇಶ ಹುಕ್ಕೇರಿ, ಶಾಸಕ ದುರ್ಯೋಧನ ಐಹೊಳೆ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಅನೇಕ ಕಡೆ ಇನ್ನೂ ಖಾಸಗಿ ಕ್ಲಿನಿಕ್‌ ತರೆಯುತ್ತಿಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಈ ಕುರಿತು ಚಿಕ್ಕೋಡಿಯಲ್ಲೂ ಖಾಸಗಿ ಕ್ಲಿನಿಕ್‌ ಮತ್ತು ವೈದ್ಯರ ಸಭೆ ಕರೆಯುವಂತೆ ಸಭೆಯಲ್ಲಿ ನಿರ್ದೇಶನ ನೀಡಲಾಯಿತು.

25 ಜನರು ಕ್ವಾರಂಟೈನ್‌ನಲ್ಲಿ:

ಡಾ. ಶೈಲಜಾ ತಮ್ಮಣ್ಣವರ ಮಾತನಾಡಿ, ಕುಡಚಿ ಪಟ್ಟಣ 25 ಸಾವಿರ ಜನಸಂಖ್ಯೆ ಹೊಂದಿದ್ದು, ಆರು ತಂಡಗಳನ್ನು ರಚಿಸಿ ಮನೆ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ಎಸಿ ರವೀಂದ್ರ ಕರಲಿಂಗಣ್ಣವರ ಮಾತನಾಡಿ, ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದ ಕುಡಚಿಯ 23 ಜನರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಚಿಕ್ಕೋಡಿ ವಿಭಾಗದ ಐದು ತಾಲೂಕುಗಳಲ್ಲಿ 195 ಜನರು ಬಂದಿದ್ದು, ಅವರಿಗೆ ಗೃಹ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕಂಟೈನ್ಮೆಂಟ್‌ ಝೋನ್‌ ಆಗಿರುವ ಕುಡಚಿಯ ಪ್ರತಿಯೊಬ್ಬ ನಾಗರಿಕರ ಆರೋಗ್ಯದ ಮೇಲೆ ನಿಗಾ ವಹಿಸುವ ಕೆಲ ನಡೆದಿದ್ದು, ಜನಸಂಚಾರ ತಡೆಗೆ ಬ್ಯಾರಿಕೇಡ್‌ ಮತ್ತಿತರ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ತಪಾಸಣೆ ಕೆಲಸ ನಡೆದಿದೆ ಎಂದರು.

ಜಿಪಂ ಸಿಇಒ ಡಾ.ರಾಜೇದ್ರ ಕೆ.ವಿ. ಮಾತನಾಡಿ, ಪ್ರೈಮರಿ ಕಾಂಟ್ಯಾಕ್ಟ್ ಇರುವ ಎಲ್ಲರನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರಿಂದ ಮಾಹಿತಿಯನ್ನು ಸಂಗ್ರಹಿಸಿ ಸೆಕೆಂಡರಿ ಕಾಂಟ್ಯಾಕ್ಟ್ ಇರುವವರನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ ಎಂದರು.

ಸಭೆಯಲ್ಲಿ ಜವಳಿ ಸಚಿವ ಶ್ರೀಮಂತ ಪಾಟೀಲ, ಸಂಸದ ಅಣ್ಣಾಸಾಹೇಬ್‌ ಜೊಲ್ಲೆ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಏಳು ಪ್ರಕರಣ ಹೊರತುಪಡಿಸಿ ಹೊಸ ಪಾಸಿಟಿವ್‌ ಪ್ರಕರಣ ವರದಿಯಾಗಿಲ್ಲ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಪೂರೈಸಲು ಹಣಕಾಸಿನ ತೊಂದರೆಯಿಲ್ಲ. ಸಮಸ್ಯೆ ಇದ್ದರೆ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ.ಬೊಮ್ಮನಹಳ್ಳಿ ಅವರು ಹೇಳಿದ್ದಾರೆ. 

ಜಿಲ್ಲೆಯಲ್ಲಿ ಒಟ್ಟಾರೆ 1018 ಜನರ ಮೇಲೆ ನಿಗಾ ವಹಿಸಲಾಗಿದ್ದು, ಅದರಲ್ಲಿ 203 ಜನರು ಈಗಾಗಲೇ 28 ದಿನ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಏಳು ಪ್ರಕರಣಗಳು ದೃಢಪಟ್ಟಿರುತ್ತವೆ. 69 ನೆಗೆಟಿವ್‌ ಬಂದಿದ್ದು, ಏಳು ಮಾದರಿಗಳ ವರದಿ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ವಿ.ಮುನ್ಯಾಳ ಅವರು ತಿಳಿಸಿದ್ದಾರೆ. 
 

click me!