ಲಾಕ್‌ಡೌನ್‌ 'ಅಗತ್ಯ ವಸ್ತುಗಳನ್ನ ಹೆಚ್ಚಿನ ದರಕ್ಕೆ ಮಾರಿದ್ರೆ ಕ್ರಿಮಿನಲ್‌ ಮೊಕದ್ದಮೆ'

By Kannadaprabha NewsFirst Published Mar 30, 2020, 9:03 AM IST
Highlights

ಹೆಚ್ಚಿನ ದರಕ್ಕೆ ಮಾರಿದರೆ ಕ್ರಿಮಿನಲ್‌ ಮೊಕದ್ದಮೆ| ಸಗಟು, ಚಿಲ್ಲರೆ ವ್ಯಾಪಾರಸ್ಥರು ಮತ್ತು ತರಕಾರಿ, ಹಣ್ಣು ಮಾರಾಟಗಾರರಿಗೆ ಜಿಪಂ ಸಿಇಒ ಗೋವಿಂದ ರೆಡ್ಡಿ ಎಚ್ಚರಿಕೆ| ವೈದ್ಯಕೀಯ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ನೆರವಾಗಬೇಕು|

ವಿಜಯಪುರ(ಮಾ.30):ಕೋವಿಡ್‌-19 ಪರಿಸ್ಥಿತಿಯ ದುರುಪಯೋಗ ಪಡಿಸಿಕೊಂಡು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಅಗತ್ಯ ವಸ್ತುಗಳ ಮಾರಾಟದಲ್ಲಿ ತೊಡಗಿರುವ ಸಗಟು, ಚಿಲ್ಲರೆ ವ್ಯಾಪಾರಸ್ಥರು ಮತ್ತು ತರಕಾರಿ, ಹಣ್ಣು ಮಾರಾಟಗಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿಯವರು ತಿಳಿಸಿದ್ದಾರೆ. 

ನಗರದ ನೂತನ ಪ್ರವಾಸ ಮಂದಿರದಲ್ಲಿ ಭಾನುವಾರ ಕೋವಿಡ್‌-19 ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಕೊರೋನಾ ವೈರಸ್‌ ವಿಸ್ತರಣೆ ಆತಂಕದಲ್ಲಿರುವ ಜನರಿಗೆ ಯಾವುದೇ ರೀತಿಯಲ್ಲಿ ಅನಾನೂಕೂಲತೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಆದಾಗಿಯೂ ಕೆಲವು ಸಗಟು, ಚಿಲ್ಲರೆ ವ್ಯಾಪಾರಸ್ಥರು ಅಗತ್ಯ ವಸ್ತುಗಳು, ಹಣ್ಣು, ತರಕಾರಿ ಹಾಗೂ ಹಾಲುಗಳಂತಹ ಜೀವನಾವಶ್ಯಕ ವಸ್ತುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ದಿನನಿತ್ಯ ದೂರುಗಳು ಬರುತ್ತಿದ್ದು, ಅಂತಹವರ ಲೈಸನ್ಸ್‌ ರದ್ದುಗೊಳಿಸುವುದರ ಜೊತೆಗೆ ಕ್ರಿಮಿನಲ್‌ ಪ್ರಕರಣ ಸಹ ದಾಖಲಿಸಲಾಗುವುದು. ಸೂಪರ್‌ ಮಾರ್ಕೆಟ್‌ಗಳಲ್ಲಿ ಖರೀದಿಗೆ ಒಳಗೆ ಅವಕಾಶ ನೀಡದೆ, ಹೊರಾಂಗಣದಲೆಯ್ಲೇ ಇದ್ದು ಕೆಲಸಗಾರರಿಗೆ ಅಗತ್ಯ ವಸ್ತುಗಳ ಪಟ್ಟಿಯನ್ನು ಕೊಟ್ಟು, ಖರೀದಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

Latest Videos

ಭಾರತ್‌ ಲಾಕ್‌ಡೌನ್: ಜನರ ಹಸಿವು ನೀಗಿಸಿದ ಪೊಲೀಸರು!

ಕೊರೋನಾ ವೈರಸ್‌ ಹಿರಿಯ ನಾಗರಿಕರಿಗೆ, ಮಕ್ಕಳಿಗೆ, ಸಕ್ಕರೆ ಖಾಯಿಲೆ, ಹೃದಯ ಸಂಬಂಧಿಸಿದ ಖಾಯಿಲೆ ಹೊಂದಿದವರಿಗೆ ಸೋಂಕು ವೇಗವಾಗಿ ತಗಲುವ ಸಾಧ್ಯತೆ ಇರುವುದರಿಂದ ಅಗತ್ಯ ವಸ್ತುಗಳ ಖರೀದಿಗಾಗಿ ಅಂಥವರು ಹೊರಗೆ ಬರಬಾರದು. ಮಾರಾಟಗಾರರು ಕೂಡಾ ಇಂತಹವರ ಕುಟುಂಬಸ್ಥರಿಗೆ ಪಾರ್ಸಲ್‌ ಮೂಲಕ ತಲುಪಿಸಬೇಕು. ಅಗತ್ಯವಿದ್ದಲ್ಲಿ ಹಿರಿಯ ನಾಗರಿಕರಿಗೆ ನೆರೆಹೊರೆಯವರ ಸಹಕಾರ ಪಡೆದು ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳುವಂತೆ ಸೂಚಿಸಿದರು.

ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈಗಾಗಲೇ ನಗರಾದ್ಯಂತ 35 ವಾರ್ಡ್‌ಗಳಲ್ಲಿ ಮತ್ತು ಜಿಲ್ಲೆಯ ನಗರ ಸ್ಥಳೀಯ ವ್ಯಾಪ್ತಿಯಲ್ಲಿಯೂ ಸಿಬ್ಬಂದಿಯನ್ನು ನಿಯೋಜಿಸಿದ್ದು, ಅವರ ನೆರವನ್ನು ಪಡೆದುಕೊಳ್ಳಬೇಕು ಎಂದರು.
ಜಿಲ್ಲಾದ್ಯಂತ ಕೋವಿಡ್‌-19 ತಡೆಗಟ್ಟಲು ಈಗಾಗಲೇ ನಿಯೋಜಿಸಲಾದ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಕರ್ತವ್ಯ ನಿರ್ಲಕ್ಷ್ಯ ತೋರಬಾರದು. ವಿಶೇಷವಾಗಿ ವೈದ್ಯಕೀಯ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಸಾರ್ವಜನಿಕರಿಗೆ ನೆರವಾಗಬೇಕು. ಹೋಂ ಕ್ವಾರಂಟೈನ್‌ ಸೇರಿದಂತೆ ವಿವಿಧ ತಪಾಸಣಾ ಕಾರ್ಯದಲ್ಲಿರುವ ಸಿಬ್ಬಂದಿಗಳ ವಿರುದ್ದ ಯಾವುದೇ ರೀತಿಯ ದೂರುಗಳು ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ವಿಜಯಪುರ ಜಿಲ್ಲಾ ಆಸ್ಪತ್ರೆಗೆ ತುರ್ತು ವೈದ್ಯಕೀಯ ಸೇವೆ ಬೇಕಾದಾಗ ಮಾತ್ರ ಭæೕಟಿ ನೀಡಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮನೆಯಲ್ಲಿರಿ, ಈ ಕಷ್ಟ ಖಂಡಿತಾ ಕಳೆಯಲಿದೆ: ವೀರೇಂದ್ರ ಹೆಗ್ಗಡೆ

ಜಿಲ್ಲೆಯಲ್ಲಿಯಲ್ಲಿ ಕೋವಿಡ್‌-19 ನಿಯಂತ್ರಣಕ್ಕೆ ಕರ್ತವ್ಯದಲ್ಲಿರುವ ವೈದ್ಯಕೀಯ ಮತ್ತು ಪೊಲೀಸ್‌ ಸಿಬ್ಬಂದಿಗೆ ಮಾಸ್ಕ್‌, ಸೈನೆಟೈಸರ್‌ ಮತ್ತು ಇತರೇ ಪರಿಕರಗಳನ್ನು ಆದ್ಯತೆ ಮೇಲೆ ಪೂರೈಕೆಯಾಗುವಂತೆ ಮತ್ತು ಕೊರತೆಯಾಗದಂತೆ ನೋಡಿಕೊಳ್ಳಲು ತಿಳಿಸಿದರು.

ಹೋಂ ಕ್ವಾರಂಟೈನ್‌ದಲ್ಲಿರುವವರ ಮನೆಗಳಿಗೆ ಪೋಸ್ಟರ್‌ ಅಂಟಿಸುವುದು, ಪರಿಣಾಮಕಾರಿಯಾದ ಸೀಲ್‌ ಹಾಕುವ ವ್ಯವಸ್ಥೆ, ಗ್ರಾಮೀಣ ಮಟ್ಟದಲ್ಲಿ ಗ್ರಾಮ ಸಮಿತಿಗಳ ಚುರುಕು ಕಾರ್ಯಾಚರಣೆ, ಮೈಕ್‌ಗಳ ಮೂಲಕ ಜಾಗೃತಿ ಹೆಚ್ಚಿಸಬೇಕು. ಸಾಮಾಜಿಕ ಅಂತರಗಳ ಬಗ್ಗೆ ತೀವ್ರ ನಿಗಾದೊಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ಗ್ರಾಮ ಪಂಚಾಯತಿ ಕಟ್ಟೆಗಳ ಮೇಲೆ ಗ್ರಾಮಸ್ಥರು ಗುಂಪು-ಗುಂಪಾಗಿ ಕುಳಿತುಕೊಳ್ಳದಿರಲು ಪಂಚಾಯತಿ ಕಟ್ಟೆಗಳ ಮೇಲೆ ಸುಟ್ಟಎಣ್ಣೆ, ಸುಟ್ಟಡಾಂಬರ್‌ ಅನ್ನೂ ತಪ್ಪದೇ ಹಾಕಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

11 ಪ್ರಕರಣಗಳು ನೆಗೆಟಿವ್‌

ಇಂದು 330 ಜನರು ವಿದೇಶದಿಂದ ಬಂದಿರುವ ಬಗ್ಗೆ ವರದಿಯಾಗಿದೆ. 46 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 196 ಜನ 15 ರಿಂದ 28 ದಿನಗಳ ರಿಪೋರ್ಟಿಂಗ್‌ ಅವಧಿಯಲ್ಲಿದ್ದಾರೆ. 88 ಜನ ಹೋಮ್‌ಕ್ವಾರಂಟೈನ್‌ದಲ್ಲಿದ್ದಾರೆ. ಈವರೆಗೆ ಕಳುಹಿಸಿದ 11 ಪ್ರಕರಣಗಳಲ್ಲಿ 11 ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್‌, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆÜಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಡಾ. ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್‌ ಡಾ. ಶರಣಪ್ಪ ಕಟ್ಟಿ, ತಂಬಾಕು ನಿಯಂತ್ರಣಾ ಕೋಶದ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ, ಕುಷ್ಟರೋಗ ನಿಯಂತ್ರಾಧಿಕಾರಿ ಡಾ. ಸಂಪತಕುಮಾರ ಗುಣಾರಿ, ಡಾ. ಧಾರವಾಡಕರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
 

click me!