ಮಂಗಳೂರಿನಲ್ಲಿ ಪತ್ತೆಯಾದ ಜಿಲ್ಲೆಯ ಮೊದಲ ಕೊರೋನಾ ಸೋಂಕುಳ್ಳ ಯುವಕನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಆಸ್ಪತ್ರೆಯಲ್ಲಿ ಆತನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಇಬ್ಬರು ಯುವಕರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದ್ದು ಆತಂಕಕ್ಕೆ ಕಾರಣವಾಗಿದೆ.
ಮಂಗಳೂರು(ಮಾ.24): ಮಂಗಳೂರಿನಲ್ಲಿ ಪತ್ತೆಯಾದ ಜಿಲ್ಲೆಯ ಮೊದಲ ಕೊರೋನಾ ಸೋಂಕುಳ್ಳ ಯುವಕನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಆಸ್ಪತ್ರೆಯಲ್ಲಿ ಆತನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಇಬ್ಬರು ಯುವಕರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದ್ದು ಆತಂಕಕ್ಕೆ ಕಾರಣವಾಗಿದೆ.
ಸೋಂಕಿತ ಯುವಕ ಭಟ್ಕಳ ಮೂಲದವನಾಗಿದ್ದು, ಮಾ.19ರಂದು ಸಂಜೆ 5.40ರ ವಿಮಾನದಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿ ಸ್ಕ್ರೀನಿಂಗ್ ತಪಾಸಣೆ ನಡೆಸಿದಾಗ ಕೊರೋನಾ ಸೋಂಕಿನ ಲಕ್ಷಣ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿಂದಲೇ ಆಂಬ್ಯುಲೆನ್ಸ್‌ನಲ್ಲಿ ಕರೆತಂದು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಅವರ ಯೋಗಕ್ಷೇಮ ವಿಚಾರಿಸಲು ಇನ್ನಿಬ್ಬರು ಆತನ ಜತೆಗೆ ಆಸ್ಪತ್ರೆಯಲ್ಲಿದ್ದರು ಎನ್ನಲಾಗಿದೆ.
ಕೊರೋನಾ ವದಂತಿ: ಸಾವಿನ 2 ದಿನ ಬಳಿಕ ಅಂತ್ಯಸಂಸ್ಕಾರ!
ಭಾನುವಾರ ಮಧ್ಯಾಹ್ನ ವೇಳೆಗೆ ಆಸ್ಪತ್ರೆಗೆ ದಾಖಲಾದ ಯುವಕನ ಗಂಟಲುದ್ರವದ ಮಾದರಿಯ ವರದಿ ಬಂದಿದ್ದು ಪಾಸಿಟಿವ್ ಎನ್ನುವುದು ದೃಢವಾಗಿತ್ತು. ಇದರ ಬೆನ್ನಲ್ಲೇ ಅವರೊಂದಿಗೆ ಇದ್ದ ಯುವಕರಿಬ್ಬರೂ ನಾಪತ್ತೆಯಾಗಿದ್ದಾರೆ. ರೋಗಿಯಲ್ಲಿ ಸೋಂಕು ದೃಢಪಟ್ಟಆತಂಕದಿಂದ ನಾಪತ್ತೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅವರು ಎಲ್ಲಿಯವರು ಎನ್ನುವ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ತೀವ್ರ ಆತಂಕ:
ಆಸ್ಪತ್ರೆಯಿಂದ ನಾಪತ್ತೆಯಾದ ಬಳಿಕ ಇಬ್ಬರು ಎಲ್ಲಿಗೆ ಹೋಗಿದ್ದಾರೆ ಎನ್ನುವುದು ನಿಗೂಢವಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ವಾಹನಗಳಲ್ಲಿ ತೆರಳಿರಬಹುದೇ? ಅಥವಾ ಮಂಗಳೂರಿನಲ್ಲಿಯೇ ಇನ್ನೂ ಉಳಿದುಕೊಂಡಿರಬಹುದೇ ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ: ಮತ್ತೆ ನಾಲ್ವರಿಗೆ ಕೊರೋನಾ ಶಂಕೆ?
ಮಂಗಳೂರಿನಲ್ಲಿ ಭಾನುವಾರ ಒಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಮತ್ತೆ ನಾಲ್ಕು ಮಂದಿಗೆ ಕೊರೋನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಪ್ರಯೋಗಾಲಯಕ್ಕೆ ಕಳುಹಿಸಲಾದ 11 ಸ್ಯಾಂಪಲ್‌ಗಳಲ್ಲಿ 7 ನೆಗೆಟಿವ್ ವರದಿ ಬಂದಿದ್ದರೆ, ಉಳಿದ ನಾಲ್ಕು ಪ್ರಕರಣಗಳಲ್ಲಿ ‘ಅವೈಟೆಡ್ ಫಾರ್ ರಿಕನ್ಫರ್ಮೇಶನ್’ ಎಂದು ಜಿಲ್ಲಾಡಳಿತದ ನಿತ್ಯದ ಕೊರೋನಾ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಸಿಂಧು ರೂಪೇಶ್, ಕೆಲವು ಸ್ಯಾಂಪಲ್‌ಗಳಲ್ಲಿ ಪರೀಕ್ಷೆ ಸಂದರ್ಭ ನಿಖರವಾದ ಫಲಿತಾಂಶ ಬಾರದಿದ್ದರೆ ಮತ್ತೊಮ್ಮೆ ಪರೀಕ್ಷೆ ಮಾಡಲಾಗುತ್ತದೆ. ಈ ನಾಲ್ಕು ಪ್ರಕರಣಗಳಲ್ಲಿ ಇದೇ ರೀತಿಯಾಗಿದ್ದು, ಮಂಗಳವಾರವೇ ಅಂತಿಮ ವರದಿ ಬರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ನೋಡಿ! ಕಡಲನಗರಿ ಭವಿಷ್ಯದ ಮೇಲೆ ಕೊರೋನಾ ಕರಿನೆರಳು..
104 ಮಂದಿ ಸ್ಕ್ರೀನಿಂಗ್: ಸೋಮವಾರ ಜಿಲ್ಲೆಯಲ್ಲಿ ಒಟ್ಟು 104 ಮಂದಿಯನ್ನು ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದ್ದು, ಹೋಮ್ ಕ್ವಾರಂಟೈನ್‌ನಲ್ಲಿ 2,448 ಮಂದಿ ಇದ್ದಾರೆ. ಇಎಸ್‌ಐ ಆಸ್ಪತ್ರೆಯಲ್ಲಿ 27 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 12 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ನಿಗಾದಲ್ಲಿದ್ದಾರೆ.