ಮೈಸೂರಿನಲ್ಲಿ ಭೂಮಿ ಗುಡುಗಿದ ಅನುಭವ: ಮಂಚದಿಂದ ಕೆಳಗೆ ಬಿದ್ದ ಮಗು

By Kannadaprabha NewsFirst Published Apr 4, 2020, 10:27 AM IST
Highlights

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ, ಹಲಗನಹಳ್ಳಿ ಸೇರಿದಂತೆ ಹಲವು ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿ ಕೆಲವು ಮನೆಗಳಲ್ಲಿ ಮಂಚದಿಂದ ಮಗುವೊಂದು ಜಾರಿದೆ. ಮತ್ತೊಬ್ಬರ ಮನೆಯಲ್ಲಿ ಪಾತ್ರೆ ಅಲುಗಾಡಿ ಶಬ್ದ ಕೇಳಿದೆ. ಇದರಿಂದ ಭಯಭೀತರಾದ ಜನತೆ ಬೆಟ್ಟದಪುರ ಪೊಲೀಸ್‌ ಠಾಣೆಗೆ ಕರೆ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಮೈಸೂರು(ಏ.04): ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ, ಹಲಗನಹಳ್ಳಿ ಸೇರಿದಂತೆ ಹಲವು ಭಾಗದಲ್ಲಿ ಭೂಮಿ ಗುಡುಗಿದ ಅನುಭವವಾಗಿದ್ದು, ಗ್ರಾಮಸ್ಥರು ಭಯಭೀತರಾಗಿ ಮನೆಯಿಂದ ಹೊರಗಡೆ ಓಡಿ ಬಂದ ಪ್ರಸಂಗ ಶುಕ್ರವಾರ ನಡೆಯಿತು.

ಸಂಜೆ 5.30ಕ್ಕೆ ಭೂಮಿ ಕಂಪಿಸಿದ ಅನುಭವವಾಗಿ ಕೆಲವು ಮನೆಗಳಲ್ಲಿ ಮಂಚದಿಂದ ಮಗುವೊಂದು ಜಾರಿದೆ. ಮತ್ತೊಬ್ಬರ ಮನೆಯಲ್ಲಿ ಪಾತ್ರೆ ಅಲುಗಾಡಿ ಶಬ್ದ ಕೇಳಿದೆ. ಇದರಿಂದ ಭಯಭೀತರಾದ ಜನತೆ ಬೆಟ್ಟದಪುರ ಪೊಲೀಸ್‌ ಠಾಣೆಗೆ ಕರೆ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

'ದೀಪ ಬೆಳಗಿಸೋಣ' ಎಂದ ಪ್ರಧಾನಿಗೆ ಅಪಹಾಸ್ಯ; ನೆಟ್ಟಿಗರಿಂದ ಉಗಿಸಿಕೊಂಡ 'ತಪ್ಪಡ್' ನಟಿ!

ಸುಮಾರು 30 ವರ್ಷಗಳ ಹಿಂದೆ ಬೆಟ್ಟದಪುರದಲ್ಲಿ ಭೂಮಿ ನಡುಗಿದ ಅನುಭವವಾಗಿದೆ ಎಂದು ಕೆಲ ಹಿರಿಯರು ತಿಳಿಸಿದ್ದಾರೆ. ಈ ಕುರಿತು ಗಣಿ ಮತ್ತು ಭೂ ವಿಜ್ಞಾನಧಿಕಾರಿಗಳು ಶನಿವಾರ ಬೆಟ್ಟದಪುರ ವ್ಯಾಪ್ತಿಗೆ ಬಂದು ಶೋಧ ನಡೆಸಲಿದ್ದಾರೆ. ನಮ್ಮ ಇಲಾಖೆಯ ತಂಡವು ಸಹ ಪರಿಶೀಲನೆ ನಡೆಸಲಿದೆ ಎಂದು ತಹಸೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ತಿಳಿಸಿದ್ದಾರೆ.

ಕೆ.ಆರ್‌. ನಗರ ತಾಲೂಕಲ್ಲೂ ಕಂಪಿಸಿತು

ತಾಲೂಕಿನ ಸಾಲಿಗ್ರಾಮ, ಮಿರ್ಲೆ ಮತ್ತು ಚುಂಚನಕಟ್ಟೆಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಶುಕ್ರವಾರ ಸಂಜೆ ಎರಡು ಸೆಕೆಂಡುಗಳ ಕಾಲ ಭೂಮಿ ಲಘುವಾಗಿ ಕಂಪಿಸಿದ್ದು, ಜನರು ಭಯಬೀತರಾಗಿ ಮನೆಯಿಂದ ಹೊರ ಬಂದಿದ್ದಾರೆ.

ಇದ್ದಕ್ಕಿಂದ್ದಂತೆ ಎರಡು ಸೆಕೆಂಡುಗಳ ಸಮಯ ಭೂಮಿ ಕಂಪಿಸಿದ್ದರಿಂದ ಕೆಲವರ ಮನೆಯ ಪಾತ್ರೆಗಳು ಕೆಳಗೆ ಬಿದ್ದಿದ್ದು, ಮೊದಲೆ ಕೊರೋನಾ ವೈರಸ್‌ ಭಯದಿಂದ ದಿನ ದೂಡುತ್ತಿದ್ದವರಿಗೆ ಇದು ಮತ್ತಷ್ಟುಹೆದರುವಂತೆ ಮಾಡಿದೆ.

ಮದ್ಯದಂಗಡಿ ಬಿಟ್ಟು ಮಾನಸಿಕ ಆಸ್ಪತ್ರೆಗೆ ವ್ಯಸನಿಗಳ ದೌಡು!

ಭೂಮಿ ಕಂಪನದಿಂದ ಹೆದರಿದ ಜನತೆ ಗ್ರಾಮಗಳಲ್ಲಿ ಗುಂಪು ಗುಂಪಾಗಿ ನಿಂತು ಮಾತನಾಡಿಕೊಳ್ಳುತ್ತಿದ್ದರಲ್ಲದೆ, ತಮಗಾದ ಅನುಭವವನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಂದು ಕ್ಷಣ ಭೂಮಿಯ ಒಳಗೆ ಅದುರಿದ ಅನುಭವವಾಗಿದ್ದು, ನಮಗೆ ದಿಕ್ಕೆ ತೋಚದಂತಾಯಿತು ಎಂದು ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದ ಗುತ್ತಿಗೆದಾರ ಸಿ.ಬಿ. ಲೋಕೇಶ್‌ ತಮ್ಮ ಅನುಭವ ಹಂಚಿಕೊಂಡರು.

ತಾಲೂಕಿನ ಹೊಸೂರು, ಚುಂಚನಕಟ್ಟೆ, ಸಾಲಿಗ್ರಾಮ, ಮಿರ್ಲೆ, ಹನಸೋಗೆ, ಮಾಯಗೌಡನಹಳ್ಳಿ, ಹನಸೋಗೆ, ಮೂಡಲಬೀಡು, ಕುಪ್ಪೆ, ಹೊಸಕೋಟೆ ಸೇರಿದಂತೆ ನೂರಾರು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ.

click me!