'ಜನರನ್ನು ಮನೆಯಲ್ಲೇ ಇರಿಸಲು ರಾಜ್ಯಾದ್ಯಂತ ಕರ್ಫ್ಯೂ ಜಾರಿ'!

By Kannadaprabha NewsFirst Published Mar 24, 2020, 8:06 AM IST
Highlights

ಜನರನ್ನು ಮನೆಯಲ್ಲೇ ಇರಿಸಲು ರಾಜ್ಯಾದ್ಯಂತ ಕರ್ಫ್ಯೂ ಜಾರಿ| ರಸ್ತೆಗಿಳಿಯುವ ಜನರಿಂದಾಗಿ ಆತಂಕ ಹೆಚ್ಚಳ: ಸುಧಾಕರ್‌| ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿಧಾನಸಭೆಗೆ ಮಾಹಿತಿ

ವಿಧಾನಸಭೆ(ಮಾ.24): ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಜನರು ದೊಡ್ಡ ಸಂಖ್ಯೆಯಲ್ಲಿ ರಸ್ತೆಗೆ ಇಳಿಯುವ ಮೂಲಕ ಕೊರೋನಾ ಹರಡುವ ಸಾಧ್ಯತೆ ಹೆಚ್ಚಿಸುತ್ತಿದ್ದಾರೆ. ಹೀಗಾಗಿ, ರಾಜ್ಯಾದ್ಯಂತ ಮಾ.31ರ ವರೆಗೂ ‘ಕಫä್ರ್ಯ’ ವಿಧಿಸಲು ತೀರ್ಮಾನಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ತಿಳಿಸಿದ್ದಾರೆ.

ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತಂತೆ ಸದನಕ್ಕೆ ವಿವರಣೆ ನೀಡಿದ ಅವರು, ಕೊರೋನಾ ಸೋಂಕು ಹರಡದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪರಿಣಾಮ ಜನರನ್ನು ಮನೆಗಳಲ್ಲಿ ಇರುವಂತೆ ಮಾಡುವುದಕ್ಕಾಗಿ ಕಫä್ರ್ಯ ವಿಧಿಸಲು ತೀರ್ಮಾನಿಸಲಾಗಿದೆ ಎಂದರು. ಕೊರೋನಾ ಸೋಂಕು ಹರಡದಂತೆ ನಿಗಾ ವಹಿಸಲು ವಿಕ್ಟೋರಿಯಾ ಆಸ್ಪತ್ರೆ ಸಮುಚ್ಚಯದಲ್ಲಿನ ಆಯ್ದ ಆಸ್ಪತ್ರೆಗಳನ್ನು ‘ಕೊರೋನಾ ವಿಶೇಷ ಆಸ್ಪತ್ರೆ’ಗಳನ್ನಾಗಿ ಪರಿವರ್ತಿಸಲಾಗುವುದು. ಜೊತೆಗೆ, ನಗರದ ಹೊರ ಭಾಗಗಳಲ್ಲಿ ವಿಶೇಷ ಆಸ್ಪತ್ರೆಗಳನ್ನು ಕೊರೋನಾಗೆ ಚಿಕಿತ್ಸೆ ನೀಡಲು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

33 ಕೋಟಿ ರು. ಬಿಡುಗಡೆ:

ರಾಜ್ಯದಲ್ಲಿ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ 33ಕ್ಕೇರಿದ್ದು, ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ 33 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಕೊರೋನ ಸೋಂಕಿತನರನ್ನು ಪತ್ತೆ ಹಚ್ಚುವುದಕ್ಕಾಗಿ ಏಳು ಲ್ಯಾಬ್‌ಗಳಲ್ಲಿ ಕೆಲಸ ಮಾಡಲಾಗುತ್ತಿದ್ದು, ಈವರೆಗೂ 2 ಸಾವಿರ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ ಕರ್ನಾಟಕ ಪಾರದರ್ಶಕ ಕಾಯಿದೆಯಲ್ಲಿ ವಿನಾಯ್ತಿ ಪಡೆದು 33 ಕೋಟಿ ರು.ಗಳನ್ನು ಸೋಮವಾರ ಬಿಡುಗಡೆ ಮಾಡಲಾಗಿದ್ದು, ಮುಂದಿನ ಎರಡು ದಿನಗಳಲ್ಲಿ ರಾಜ್ಯದಲ್ಲಿ ಅಗತ್ಯವಿರುವ ಮಾಸ್ಕ್‌ ಸೇರಿದಂತೆ ಎಲ್ಲ ರೀತಿಯ ಪರಿಕರಗಳನ್ನು ಒದಗಿಸಲಾಗುವುದು ಎಂದರು.

ವಿದೇಶಗಳಿಂದ ಬಂದಿರುವ ‘ಸಿ’ ಕೆಟಗಿರಿಯ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಅವರವರ ಮನೆಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಮನೆಗಳಲ್ಲಿಯೇ ನಿರ್ಬಂಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇವರ ಮನೆಗಳಿಗೆ ನೋಟಿಸ್‌ ಅಂಟಿಸುವುದು, ಮತ್ತು ಇವರ ಮೇಲೆ ಸತತ ನಿಗಾ ವಹಿಸಲು ಪೊಲೀಸ್‌ ಇಲಾಖೆಗೆ ಕಡ್ಡಾಯ ಸೂಚನೆ ನೀಡಲಾಗಿದೆ ಎಂದರು.

ಕೊರೋನಾ ವೈರಸ್‌ ಪತ್ತೆ ಮಾಡುವ ಲ್ಯಾಬ್‌ ಟೆಸ್ಟ್‌ ಪ್ರಮಾಣವನ್ನು ಹೆಚ್ಚಿಸಲಾಗುವುದು. ಕೊರೋನಾ ವೈರಸ್‌ ದೃಢಪಟ್ಟರೋಗಿಗಳ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗುವುದು. ಪ್ರತಿ ಹತ್ತು ಲಕ್ಷ ಜನರಲ್ಲಿ ಕನಿಷ್ಠ 200 ಜನರಿಗೆ ಪರೀಕ್ಷೆ ಮಾಡುವಂತಹ ಸೌಕರ್ಯಗಳನ್ನು ತಕ್ಷಣ ಸಿದ್ಧಪಡಿಸಲಾಗುವುದು ಎಂದರು.

ಚುನಾವಣೆ ಮುಂದೂಡಿಕೆ:

ಮುಂದಿನ ಆದೇಶದವರೆಗೆ ರಾಜ್ಯದ ಎಲ್ಲ ಚುನಾವಣೆಗಳನ್ನು ಮುಂದೂಡಲಾಗುವುದು. ಅಲ್ಲದೆ, ರಾಜ್ಯದ 9 ಜಿಲ್ಲೆಗಳಲ್ಲಿ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿರುವ ಕೈಗಾರಿಕೆಗಳಲ್ಲಿ ಕಾರ್ಮಿಕರನ್ನು ಎರಡು ತಂಡಗಳನ್ನಾಗಿ ವಿಂಗಡಿಸಿ ದಿನ ಬಿಟ್ಟು ದಿನ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಫೀವರ್‌ ಕೇಂದ್ರಗಳ ಸ್ಥಾಪನೆ

ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣೆ ಮಾಡಿ ಚಿಕಿತ್ಸೆ ನೀಡಲು ಫೀವರ್‌ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗುವುದು. ಸರ್ಕಾರ ಮತ್ತು ಸರ್ಕಾರೇತರ ಕಚೇರಿಗಳಲ್ಲಿ ಅಗತ್ಯ ಸೇವೆಗಳು ಮತ್ತು ಅಗತ್ಯವಲ್ಲದ ಸೇವೆಗಳು ಎಂದು ಗುರುತಿಸಲಿದ್ದು, ತುರ್ತುಸೇವೆಗಳ ಕಚೇರಿಗಳನ್ನು ಮಾತ್ರ ಕಾರ್ಯನಿರ್ವಹಿಸಲು ಸೂಚನೆ ನೀಡಿ ಇನ್ನುಳಿದ ಕಚೇರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಿದರು.

ಬೆಂಗಳೂರು ನಗರ, ಗ್ರಾಮಾಂತರ, ಮಂಗಳೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬೆಳಗಾವಿ ಸೇರಿದಂತೆ ಕೊರೋನಾ ಸೋಂಕು ಕಂಡುಬಂದಿರುವ ಜಿಲ್ಲೆಗಳಲ್ಲಿ ವೈದ್ಯಕೀಯ, ಔಷಧಿ, ದಿನಸಿ, ಕೃಷಿ, ಮೊದಲಾದ ಅಗತ್ಯಸೇವೆ ಹೊರತಪಡಿಸಿ ಉಳಿದ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸುವುದಾಗಿ ಸಚಿವರು ವಿವರಿಸಿದರು.

click me!