ಮಹಾಮಾರಿ ಕೊರೋನಾ ಆತಂಕ: 180 ರೋಗಿಗಳ ಸ್ಥಳಾಂತರಕ್ಕೆ ನಿರ್ಧಾರ

By Kannadaprabha NewsFirst Published Apr 1, 2020, 10:17 AM IST
Highlights

ಗದಗ ಜಿಲ್ಲಾ​ಡ​ಳಿ​ತ​ದಿಂದ ಮುನ್ನೆ​ಚ್ಚ​ರಿಕೆ ಕ್ರಮ| ವಸತಿ ಶಾಲೆ ಕೋವಿ​ಡ್‌ -19ಗೆ ಮೀಸ​ಲು| ಲಾಕ್‌ಡೌನ್‌ ನಿಯಮವನ್ನು ಎಲ್ಲರೂ ಪಾಲಿಸಬೇಕು| ಯಾರು ಎಲ್ಲಿ ಇದ್ದಾರೆ ಅಲ್ಲಿಯೇ ಇರಬೇಕು. ನಮ್ಮ ಜಿಲ್ಲೆಯ ಜನರು ಬೇರೆ ರಾಜ್ಯದಲ್ಲಿ ಬೇರೆ ಜಿಲ್ಲೆಯಲ್ಲಿ ಇದ್ದರೆ ಅಲ್ಲಿಯೇ ಇರಬೇಕು| 

ಗದಗ(ಏ.01): ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ಗದಗ ಜಿಮ್ಸ್‌ ಆಸ್ಪತ್ರೆಯನ್ನು ಕೋವಿಡ್‌ 19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿ ಅಲ್ಲಿನ 180 ರೋಗಿಗಳನ್ನು ಸ್ಥಳಾಂತರ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. 

ಜಿಮ್ಸ್‌ ಆಸ್ಪತ್ರೆಯಲ್ಲಿರುವ ಒಳ ರೋಗಿಗಳನ್ನು ಗದಗ ನಗರದಲ್ಲಿರುವ ಹೆರಿಗೆ ಆಸ್ಪತ್ರೆ ಹಾಗೂ ಹಳೇ ಜಿಲ್ಲಾ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗೆ ಶಿಫ್ಟ್‌ ಮಾಡುವುದು ಹಾಗೂ ಜಿಲ್ಲಾ ಆಯುಷ್ಯ ಆಸ್ಪತ್ರೆಯನ್ನೂ ಕೊರೋನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಎರಡು ಆಸ್ಪತ್ರೆಯಲ್ಲಿ ಒಟ್ಟು 260 ಬೆಡ್‌ಗಳನ್ನು ಕಾಯ್ದಿರಿಸಲು ಕ್ರಮ ಕೈಗೊಳ್ಳುವ ಮೂಲಕ ಜಿಲ್ಲಾಡಳಿತ ಒಂದೊಮ್ಮೆ ಕೊರೋನಾ ಮಂದಿನ ಹಂತಕ್ಕೆ ಹೋದರೆ ಎದುರಿಸಲು ಸಿದ್ಧತೆಗಳನ್ನು ಪೂರ್ಣಗೊಳಿಸುತ್ತಿದೆ.

ಭಾರತ್‌ ಲಾಕ್‌ಡೌನ್‌: APMCಯಲ್ಲಿ ವ್ಯಾಪಾ​ರಕ್ಕೆ ವಿನಾ​ಯಿ​ತಿ

ವಸತಿ ಶಾಲೆಯೂ ಕೊವಿಡ್‌-19ಗೆ ಮೀಸಲು

ಗದಗ ನಗರದ ಮೊರಾರ್ಜಿ ವಸತಿ ಶಾಲೆಯನ್ನು ಕೋವಿಡ್‌- 19ಗೆ ಕಾಯ್ದಿರಿಸಲಾಗಿದೆ. ಒಂದು ವೇಳೆ ಮನೆಯಲ್ಲಿಯೇ ಅಥವಾ ಗ್ರಾಮದಲ್ಲಿ ನಿಗಾದಲ್ಲಿ ಇರುವವರಿಗೆ ತೊಂದರೆ ಆಗುತ್ತಿದ್ದರೆ ಅಥವಾ ಗ್ರಾಮದಲ್ಲಿ ಅಂತಹವರಿಗೆ ವಿರೋಧ ವ್ಯಕ್ತವಾದರೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಆಯಾ ತಾಲೂಕಿನ ಸರ್ಕಾರಿ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಡೋಣಿ ಗ್ರಾಮದ 20 ಜನರಿಗೆ ವಸತಿ ನಿಲಯದಲ್ಲಿ ಊಟದ ಹಾಗೂ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಯಾರಿಗೆ ಮನೆಯಲ್ಲಿ ಇರಲು ಆಗುವು​ದಿ​ಲ್ಲವೋ ಅಂತಹವರು ವಸತಿ ನಿಲಯಕ್ಕೆ ಬರಬಹುದಾಗಿದೆ.

ಬೇರೆಡೆ ಸಿಲು​ಕಿ​ದ​ವ​ರ​ನ್ನು ಕರೆ​ಸಿ​ಕೊ​ಳ್ಳಿ:

ಬೇರೆ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಗದಗ ಜಿಲ್ಲೆಯ ಜನರನ್ನು ವಾಪಾಸ್‌ ಕರೆಸಿಕೊಳ್ಳಬೇಕು ಎಂದು ಮಾಜಿ ಸಚಿವ ಶಾಸಕ ಎಚ್‌.ಕೆ. ಪಾಟೀಲ ಸಿಎಂಗೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು, ಸುಮಾರು 8 ರಿಂದ 10 ಸಾವಿರ ಜನರು ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಗೆ ದುಡಿಯಲು ಹೋಗಿದ್ದು, ಒಮ್ಮೆಲೆ ಕೊರೋನಾ ಭೀತಿಯಿಂದ ಲಾಕ್‌ಡೌನ್‌ ಜಾರಿ ತಂದ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಕೆಲಸ ಇಲ್ಲದೆ ಅಗತ್ಯ ಆಹಾರ ಸಿಗದೇ ಕೂಲಿ ಕಾರ್ಮಿಕರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಹೊರ ರಾಜ್ಯ ಕಾರ್ಮಿಕರಿಗೆ ವ್ಯವಸ್ಥೆ

ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ಕಾರ್ಮಿಕರಿಗೆ ರಾಜ್ಯ ಕಾರ್ಮಿಕ ಇಲಾಖೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ. ಗದಗ-ಬೆಟಗೇರಿಯ ನರಸಾಪುರ ಕೈಗಾರಿಕಾ ಇಲಾಖೆಯಲ್ಲಿ ಗದಗ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಸುಧಾ ಗರಗ ನೇತೃತ್ವದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಆಹಾರ ಸಾಮಗ್ರಿ, ಸಾಬೂನು, ಸ್ಯಾನಿಟೈಸರ್‌ ಸೇರಿದಂತೆ ಅಗತ್ಯ ವಸ್ತುಗಳ ವಿತರಣೆ ಮಾಡಲಾಗಿದೆ. ಕೊರೋನಾ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಕಾರ್ಮಿಕರಿಗೆ ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ ನಿಯಮವನ್ನು ಎಲ್ಲರೂ ಪಾಲಿಸಬೇಕು. ಯಾರು ಎಲ್ಲಿ ಇದ್ದಾರೆ ಅಲ್ಲಿಯೇ ಇರಬೇಕು. ನಮ್ಮ ಜಿಲ್ಲೆಯ ಜನರು ಬೇರೆ ರಾಜ್ಯದಲ್ಲಿ ಬೇರೆ ಜಿಲ್ಲೆಯಲ್ಲಿ ಇದ್ದರೆ ಅಲ್ಲಿಯೇ ಇರಬೇಕು. ಅವರನ್ನು ಕರೆದುಕೊಂಡು ಬರುವ ಕಾರ್ಯ​ವ​ನ್ನು ಜಿಲ್ಲಾಡಳಿತದಿಂದ ಮಾಡುವುದಿಲ್ಲ. ನಮ್ಮ ಜಿಲ್ಲೆಯ ಜನರು ಬೇರೆ ಜಿಲ್ಲೆಯಲ್ಲಿ ಸಂಕಷ್ಟದಲ್ಲಿದ್ದರೆ ಆಯಾ ರಾಜ್ಯಗಳ ಜಿಲ್ಲೆಗಳಿಗೆ ಸಂಪರ್ಕ ಮಾಡಿ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ. 
 

click me!