ಸಹಾಯಕ್ಕೆ ಕರೆದರೂ ಕೊರೋನಾ ಭಯದಿಂದ ಹತ್ತಿರ ಸುಳಿಯದ ಜನ: ಹೆತ್ತಮ್ಮನ ಕಣ್ಣೆದುರೇ ಮಗ ಸಾವು

Kannadaprabha News   | Asianet News
Published : Apr 01, 2020, 10:08 AM ISTUpdated : Apr 01, 2020, 10:11 AM IST
ಸಹಾಯಕ್ಕೆ ಕರೆದರೂ ಕೊರೋನಾ ಭಯದಿಂದ ಹತ್ತಿರ ಸುಳಿಯದ ಜನ: ಹೆತ್ತಮ್ಮನ ಕಣ್ಣೆದುರೇ ಮಗ ಸಾವು

ಸಾರಾಂಶ

ಮಂಗಳೂರಿನಿಂದ ಮನೆಗೆ ಬಂದು ಹತ್ತು ದಿನಗಳ ನಂತರ ಮನೆಯಲ್ಲಿಯೇ ಸಂಶಯಾಸ್ಪದವಾಗಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಸೋಮವಾರ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಜಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.  

ಮಡಿಕೇರಿ(ಎ.01): ಮಂಗಳೂರಿನಿಂದ ಮನೆಗೆ ಬಂದು ಹತ್ತು ದಿನಗಳ ನಂತರ ಮನೆಯಲ್ಲಿಯೇ ಸಂಶಯಾಸ್ಪದವಾಗಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಸೋಮವಾರ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಜಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಿ.ಸೋಮಯ್ಯ ಎಂಬವರ ಪುತ್ರ ರೋಷನ್‌ ಸತ್ಯಸಾಯಿ(41) ಮೃತರು. ಮಂಗಳೂರಿನಲ್ಲಿ ನೌಕರಿಯಲ್ಲಿದ್ದ ರೋಷನ್‌ ಮಾ.20ರಂದು ಮನೆಗೆ ಬಂದಿದ್ದರು. ನಂತರ ಅನಾರೋಗ್ಯದಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಸೋಮವಾರ ಸಂಜೆ ಬಾತ್‌ರೂಂನಲ್ಲಿ ಬಿದ್ದು ಮೃತಪಟ್ಟಿದ್ದರು.

ಯಾವುದೇ ಕಾರ​ಣಕ್ಕೂ ಕೇರಳ ಗಡಿ ತೆರ​ವಿ​ಲ್ಲ: ಪ್ರತಾ​ಪ್‌​ಸಿಂಹ

ಕೊರೋನಾ ಸೋಂಕಿನ ಶಂಕೆ ವ್ಯಕ್ತಪಡಿಸಿ, ಆರೋಗ್ಯ ಇಲಾಖೆಗೆ ಮಾಹಿತಿ ತಲುಪಿದ ನಂತರ, ಎಲ್ಲಾ ತರಹದ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು, ಶವವನ್ನು ಆಸ್ಪತ್ರೆಯ ಶವಗಾರ ತರಲಾಗಿತ್ತು. ಮಂಗಳವಾರ ಮಡಿಕೇರಿ ಮೆಡಿಕಲ್‌ ಕಾಲೇಜಿನ ತಜ್ಞವೈದ್ಯ ಯೋಗೇಶ್‌ ಅವರಿಂದ ಶವಪರೀಕ್ಷೆ ನಡೆಸಲಾಗಿದೆ. ಆಸ್ಪತ್ರೆಯ ಸಿಬ್ಬಂದಿ ಶವವನ್ನು ಆ್ಯಂಬುಲೆನ್ಸ್‌ನಲ್ಲಿ ಗ್ರಾಮಕ್ಕೆ ಸಾಗಿಸಿ ಸಿಬ್ಬಂದಿಯೇ ಸುಟ್ಟಿದ್ದಾರೆ.

ಡಿಎಚ್‌ಒ ಅವರ ನಿರ್ದೇಶನದಂತೆ ಕೋವಿಡ್‌-19 ಪರೀಕ್ಷೆಗೆ ಅವಶ್ಯವಿರುವ ದೇಹದೊಳಗಿನ ಎಲ್ಲಾ ಅಂಗಾಂಶಗಳನ್ನು ತೆಗೆದು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಸಂಪೂರ್ಣ ವರದಿ ಬಂದ ನಂತರ, ಸಾವಿಗೆ ಕಾರಣ ತಿಳಿಯಲಿದೆ ಎಂದು ಡಾ.ಯೋಗೇಶ್‌ ಸುದ್ದಿಗಾರರಿಗೆ ತಿಳಿಸಿದರು.

ಶವಗಾರದಲ್ಲಿ ಅನಾಥವಾಗಿದ್ದ ಶವ!

ಕೋವಿಡ್‌-19 ಸೋಂಕು ಸಂಶಯದಲ್ಲಿ ಸೋಮವಾರ ರಾತ್ರಿ ರೋಷನ್‌ ಶವವನ್ನು ತಂದು ಶವಗಾರದಲ್ಲಿ ಇರಿಸಲಾಗಿತ್ತು. 11ಗಂಟೆಯ ಸುಮಾರಿಗೆ ಮಡಿಕೇರಿ ಮೆಡಿಕಲ್‌ ಕಾಲೇಜಿನ ವೈದ್ಯರು ಶವಪರೀಕ್ಷೆ ನಡೆಸಿ ತೆರಳಿದರು. ನಂತರ ಪಟ್ಟಣದ ಅಸ್ಪತ್ರೆಯ ಡಿ.ಗ್ರೂಪ್‌ ನೌಕರನೊಬ್ಬ, ನನ್ನೊಬ್ಬನಿಂದ ಶವವನ್ನು ಕಟ್ಟಲು ಸಾಧ್ಯವಿಲ್ಲ ಎಂದು ತಕರಾರು ತೆಗೆದು, ಹೊರನಡೆದ. ನಂತರ ಒಂದು ಗಂಟೆ ಕಾಲ ಶವಾಗಾರದಲ್ಲಿ ಶವ ಅನಾಥವಾಗಿ ಬಿದ್ದಿತ್ತು.

ರಸ್ತೆಗೆ ಮಣ್ಣು ಹಾಕಿ ಬಾರ್ಡರ್ ಬಂದ್: ಮೋದಿಗೆ ಕೇರಳ ಸಿಎಂ ಪತ್ರ

ನಂತರ ಅಲ್ಲಿದ್ದ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ, ಶವವನ್ನು ಇಲ್ಲಿಯೇ ಬಿಟ್ಟು ತೆರಳುತ್ತೇವೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕು ಅರೋಗ್ಯಾಧಿಕಾರಿ ಶ್ರೀನಿವಾಸ್‌ ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಪ್ರಸಾದ್‌ ಅವರಿಗೆ ಕರೆ ಮಾಡಿದ ಸಂಬಂಧಿಕರು ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕೂಗಿ ಕರೆದರೂ ಸಹಾಯಕ್ಕೆ ಬರಲಿಲ್ಲ

ಕಳೆದ ಹತ್ತು ದಿನಗಳ ಹಿಂದೆ ಮಂಗಳೂರಿನಿಂದ ಬಂದವನು ಮನೆಯಲ್ಲಿಯೇ ಇದ್ದ. ಇದ್ದಕ್ಕಿದ್ದಂತೆ ಬಾತ್‌ರೂಂನಲ್ಲಿ ಬಿದ್ದಾಗ, ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದರೂ ಬರಲಿಲ್ಲ. ಕೊರೋನ ಸೋಂಕಿನ ಭಯದಿಂದ ಯಾರೂ ಸಹಾಯ ಮಾಡಲಿಲ್ಲ. ನನ್ನ ಮುಂದೆಯೇ ಮಗನ ಪ್ರಾಣಪಕ್ಷಿ ಹಾರಿಹೋಯಿತು ಎಂದು ಮೃತ ರೋಷನ್‌ ತಾಯಿ ಬೇಸರ ವ್ಯಕ್ತಪಡಿಸಿದರು.

ಸೋಂಕಿನ ಭಯ ಹುಟ್ಟಿಸದಿದ್ದರೆ, ಶವವನ್ನು ನಾವೇ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುತ್ತಿದ್ದೆವು. ಆದರೆ ವೈದ್ಯರೇ ಶವವನ್ನು ಯಾರು ಮುಟ್ಟಬಾರದು, ಆಸ್ಪತ್ರೆಯ ಸಿಬ್ಬಂದಿ ಆ್ಯಂಬುಲೆನ್ಸ್‌ನಲ್ಲಿ ತಂದು ಸುಡಲಿದ್ದಾರೆ ಎಂದು ಹೇಳಿ ಹೋಗಿದ್ದಾರೆ. ಆದರೆ ನಮಗೂ ಕಾಯ್ದು ಸುಸ್ತಾಗಿದೆ. ಜಿಲ್ಲಾಧಿಕಾರಿಗೆ ದೂರು ನೀಡಿ, ಶವವನ್ನು ಇಲ್ಲೇ ಬಿಟ್ಟು ಹೋಗುತ್ತೇವೆ ಎಂದು ಮೃತರ ಸಂಬಂಧಿಕರಾದ ಕಿಬ್ಬೆಟ್ಟಗಣೇಶ್‌, ಪರಮೇಶ್‌ ಹೇಳಿದರು. ನಂತರ ಅಪ​ರಾಹ್ನ 2 ಗಂಟೆಯ ಸಮಯಕ್ಕೆ ಆಸ್ಪತ್ರೆಯಿಂದ ಬಂದ ಆ್ಯಂಬುಲೆನ್ಸ್‌ನಲ್ಲಿ ಮೃತದೇಹವನ್ನು ಸಾಗಿಸಲಾಯಿತು.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?