15 ಕೆಜಿಗೆ 10 ರು, ಟೊಮೆಟೋ ರಸ್ತೆಗೆ ಸುರಿದ ರೈತರು

By Kannadaprabha News  |  First Published Apr 1, 2020, 2:23 PM IST

ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಮಾಡಿರುವುದರಿಂದ ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಟೊಮೆಟೋ ಬೆಲೆ ತೀವ್ರವಾಗಿ ಕುಸಿದಿದ್ದು ರಸ್ತೆಗೆ ಸುರಿಯುವಂತಾಗಿದೆ.


ಕೋಲಾರ(ಎ.01): ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಮಾಡಿರುವುದರಿಂದ ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಟೊಮೆಟೋ ಬೆಲೆ ತೀವ್ರವಾಗಿ ಕುಸಿದಿದ್ದು ರಸ್ತೆಗೆ ಸುರಿಯುವಂತಾಗಿದೆ.

ಕೋಲಾರದ ಎಪಿಎಂಸಿಯಿಂದ ಟೊಮೆಟೋವನ್ನು ಹೊರಗೆ ಸಾಗಿಸಲು ವಾಹನಗಳು ಇಲ್ಲದೆ ಇರುವುದರಿಂದ ಅಂತರ್‌ ಜಿಲ್ಲೆ ಹಾಗೂ ಅಂತರ್‌ ರಾಜ್ಯಗಳಿಗೆ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಿರುವುದರಿಂದ ಟೊಮೆಟೋ ಬೆಲೆ ತೀವ್ರವಾಗಿ ಕುಸಿದಿದೆ.

Tap to resize

Latest Videos

ಭಾರತ್‌ ಲಾಕ್‌ಡೌನ್‌: 'ಬೇರೆ ರಾಜ್ಯದಲ್ಲಿರುವ ಕನ್ನಡಿಗರ ನೆರವಿಗೆ ಮನವಿ'

ಹದಿನೈದು ಕೆಜಿಯ ಒಂದು ಬಾಕ್ಸ್‌ ಟೊಮೆಟೋ ಬೆಲೆ ಸದ್ಯ 10 ರು.ನಿಂದ 50 ರು.ಗಳಿಗೆ ಇದೆ. ಕೊರೋನಾ ಎಫೆಕ್ಟ್ ಟೊಮೆಟೋಗೆ ಬೆಲೆ ಕುಸಿತಗೊಂಡಿತ್ತು, ಮಾರುಕಟ್ಟೆಗೆ ತಂದಿದ್ದ ಟೊಮೆಟೋ ಮಾರಾಟವಾಗದ ಹಿನ್ನೆಲೆಯಲ್ಲಿ ಅದನ್ನು ವಾಪಸ್ಸು ಮನೆಗೆ ತೆಗೆದುಕೊಂಡು ಹೋಗದೆ ರೈತರು ಅದನ್ನು ರಸ್ತೆಯಲ್ಲೇ ಸುರಿದ ವಾಪಸಾದರು.

10 ಸಾವಿರ ಹೆಕ್ಟೇರ್‌ನಲ್ಲಿ ಟೊಮೆಟೋ:

ರಸ್ತೆಗೆ ಸುರಿದ ಟೊಮೆಟೋಗಾಗಿ ಮುಗಿಬಿದ್ದ ಮಹಿಳೆಯರು ಅದನ್ನು ಆರಿಸಿಕೊಂಡು ಮನೆಗೆ ಹೊರಟರು. ಕೋಲಾರ ನಗರದ ಬಸ್‌ ನಿಲ್ದಾಣ ಸಮೀಪ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದೃಶ್ಯಗಳು ಕಂಡು ಬಂದಿದ್ದು ರಸ್ತೆ ಮಧ್ಯದಲ್ಲಿ ಸುರಿದ ಟೊಮೆಟೋ ಹಾಯುತ್ತಿದ್ದ ದೃಶ್ಯ ಮನಕಲುಕುವಂತೆ ಇತ್ತು. ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋ ಬೆಳೆಯುತ್ತಾರೆ, ಇಲ್ಲಿ ಟೊಮೆಟೋಗೆ ಉತ್ತಮ ಮಾರುಕಟ್ಟೆಯೂ ಇದೆ. ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಮಾರುಕಟ್ಟೆಇದ್ದು ಇದಕ್ಕೆ ಪ್ರತಿನಿತ್ಯ 5 ಸಾವಿರ ಟನ್‌ನಷ್ಟುಟೊಮೆಟೋ ಬರುತ್ತದೆ.

ಅಂತಾರಾಷ್ಟ್ರೀಯ ಮಾರಾಟ:

ಜೂನ್‌ ಮತ್ತು ಜುಲೈ ತಿಂಗಳಲ್ಲಿ 18 ಟನ್‌ನಷ್ಟುಟೊಮೆಟೋ ಆವಕ ಇರುತ್ತದೆ. ಕೋಲಾರ ಜಿಲ್ಲೆಯಲ್ಲಿ 500 ಕೋಟಿಯಷ್ಟುವ್ಯವಹಾರ ಟೊಮೆಟೋ ವಹಿವಾಟಿನಿಂದ ನಡೆಯುತ್ತದೆ. ಕೋಲಾರದ ಟೊಮೆಟೋಗೆ ಎಲ್ಲಿಲ್ಲದ ಬೇಡಿಕೆ ಇದೆ. ಇಲ್ಲಿ ಉತ್ಕೃಷ್ಟಗುಣಮಟ್ಟದ ಟೊಮೆಟೋವನ್ನು ಬೆಳೆಯುವುದರಿಂದ ವಿದೇಶಗಳಿಗೂ ಸಾಗಣೆ ಆಗುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ, ಅರಬ್‌ ರಾಷ್ಟ್ರಗಳು ಹಾಗೂ ಸಿಂಗಪುರ್‌ಗೂ ಸರಬರಾಜು ಆಗುತ್ತದೆ. ಹೊರ ರಾಜ್ಯಗಳಾ ಆಂಧ್ರಪ್ರದೇಶ, ತಮಿಳುನಾಡು, ಕೇರಳಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ ಮುಂತಾದ ಕಡೆಗಳಿಗೆ ಸರಬರಾಜು ಆಗುತ್ತದೆ.

1.5 ಲಕ್ಷ ಖರ್ಚು:

ಆದರೆ ಕೊರೋನಾ ವೈರಸ್‌ ಹರಡದಂತೆ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ಅಂತಾರಾಷ್ಟ್ರೀಯ ವ್ಯಾಪಾರವನ್ನೂ ಸ್ಥಗಿತಗೊಳಿಸುವುದರಿಂದ ಟೊಮೆಟೋ ಬೆಲೆ ಕುಸಿದಿದೆ. ರೈತರು ಟೊಮೆಟೋ ಬೆಳೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗಿದೆ. ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋ ಬೆಳೆಯಲು 1.5 ಲಕ್ಷ ಖರ್ಚು ಮಾಡಬೇಕು. ನೀರಿನ ಅಭಾವದೊಡನೆ ಟೊಮೆಟೋಗೆ ಲಕ್ಷಾಂತರ ರು. ಖರ್ಚು ಮಾಡಿ ಬೆಳೆದರೂ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ ಎಂದರೆ ರೈತರ ಗತಿ ಏನು?

ಬೆಲೆ ಇಲ್ಲದೆ ಕಂಗಾಲು:

ಸಾಮಾನ್ಯವಾಗಿ ಏಪ್ರಿಲ್‌ನಿಂದ ಜೂನ್‌ವರೆಗೆ ಟೊಮೆಟೋ ಸೀಸನ್‌, ಈ ಅವಧಿಯಲ್ಲಿ ಕೋಲಾರದಲ್ಲಿ ಬೆಳೆದ ಟೊಮೆಟೋಗೆ ಹೆಚ್ಚು ಬೇಡಿಕೆ ಇರುತ್ತದೆ. ಆದರೆ ಕೊರೋನಾ ವೈರಸ್‌ನಿಂದಾಗಿ ಟೊಮೆಟೋ ಸಾಗಣೆ ಇಲ್ಲದೆ ಅದನ್ನು ಕೊಳ್ಳುವ ವ್ಯಾಪಾರಿಗಳಿಲ್ಲದೆ ಟೊಮೆಟೋ ಬೆಲೆ ಕುಸಿತಗೊಂಡಿದೆ. ಬೆಲೆ ಇಲ್ಲದೆ ಕಂಗಾಲಾಗಿರುವ ರೈತರು ಈ ಕೊರೋನಾ ವೈರಸ್‌ ನಮ್ಮಿಂದ ಯಾವಾಗ ತೊಲಗಿಹೋಗುತ್ತದೋ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರೈತರು ಟೊಮೆಟೋವನ್ನು ರಸ್ತೆಗೆ ಸುರಿಯಬಾರದು:

ರೈತರು ಟೊಮೆಟೋವನ್ನು ಬೆಲೆ ಇಲ್ಲವೆಂದು ರಸ್ತೆಗೆ ಸುರಿಯುವುದು, ತಿಪ್ಪೆಗೆ ಎಸೆಯುವುದು ಹಾಗೂ ತೋಟದಲ್ಲಿ ಬಿಡುವುದನ್ನು ಮಾಡಬಾರದು, ಟೊಮೆಟೋಗೆ ಸೂಕ್ತ ಮಾರುಕಟ್ಟೆಒದಗಿಸುವ ಸಂಬಂಧ ಕೃಷಿ ಅಥವಾ ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದೆ ರೈತರು ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದ್ದಾರೆ. ಮಾರುಕಟ್ಟೆಸಂಬಂಧ ಯಾವುದೇ ಸಮಸ್ಯೆಗಳಿದ್ದಲ್ಲಿ ಅದನ್ನು ರೈತರು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದ್ದಾರೆ.

ಭಾರತ್‌ ಲಾಕ್‌ಡೌನ್‌: 'ಬೇರೆ ರಾಜ್ಯದಲ್ಲಿರುವ ಕನ್ನಡಿಗರ ನೆರವಿಗೆ ಮನವಿ'

click me!