ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಹರಡುತ್ತಿರುವ 25 ಪ್ರಮುಖ ನಗರಗಳನ್ನು ಸೂಕ್ಷ್ಮ ಕ್ಷೇತ್ರಗಳ ಪಟ್ಟಿ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಎರಡು ಜಿಲ್ಲೆಗಳಿವೆ. ಹಾಗಾದ್ರೆ ಯಾವವು ಜಿಲ್ಲೆಗಳು?
ಬೆಂಗಳೂರು, (ಏ.01) : ಭಾರತದಲ್ಲಿ ದಿನೇ ದಿನೇ ಕೊರೋನಾ ಮಾಹಾಮಾರಿ ವ್ಯಾಪಿಸುತ್ತಲೇ ಇದೆ. ಇದರ ಮಧ್ಯೆ ಕೇಂದ್ರ ಆರೋಗ್ಯ ಇಲಾಖೆ ದೇಶದ 25 ನಗರಗಳನ್ನು ಕೊರೋನಾ ಸೂಕ್ಷ್ಮ ಪ್ರದೇಶಗಳಿಂದ ಪಟ್ಟಿ ಮಾಡಿದೆ.
ಈ ಪಟ್ಟಿಯಲ್ಲಿ ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳ ಹೆಸರು ಇರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಹರಡುತ್ತಿರುವ 25 ಪ್ರಮುಖ ಸೂಕ್ಷ್ಮ ಕ್ಷೇತ್ರಗಳಲ್ಲಿ ಬೆಂಗಳೂರು ನಗರ ಹಾಗೂ ಮೈಸೂರು ಗುರುತಿಸಲ್ಪಟ್ಟಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೋಂಕು ಹರಡುತ್ತಿರುವ 25 ಪ್ರಮುಖ ಸೂಕ್ಷ್ಮ ಕ್ಷೇತ್ರಗಳಲ್ಲಿ ಬೆಂಗಳೂರು ನಗರ ಹಾಗೂ ಮೈಸೂರು ಗುರುತಿಸಲ್ಪಟ್ಟಿದೆ. ಚಿಕ್ಕಬಳ್ಳಾಪುರವನ್ನು ಕೋವಿಡ್-19 ಸೋಂಕು ಹರಡುತ್ತಿರುವ (ಕಳೆದ 14 ದಿನಗಳಲ್ಲಿ) ಹೊಸ ಸೂಕ್ಷ್ಮ ಕ್ಷೇತ್ರಗಳಲ್ಲೊಂದು ಎಂದು ಗುರುತಿಸಲಾಗಿದೆ ಎಂಬ ಮಾಹಿತಿಯನ್ನು ಶ್ರೀರಾಮುಲು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ 101 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 8 ಮಂದಿ ಗುಣಮುಖರಾಗಿದ್ದಾರೆ.
ಈವರೆಗೆ ಬೆಂಗಳೂರಿನಲ್ಲಿ 45, ಮೈಸೂರಿನಲ್ಲಿ 14 ಮಂದಿಗೆ ಸೋಂಕು ತಗುಲಿದೆ. ಮಾರ್ಚ್ 30ರವರೆಗಿನ ವರದಿ ಪ್ರಕಾರ, ಭಾರತದ 7 ರಾಜ್ಯದಲ್ಲಿ ಕೊರೋನಾ ವೈರಸ್ ವೇಗವಾಗಿ ಹರಡುತ್ತಿದೆ. ದೆಹಲಿ, ಜಮ್ಮು ಮತ್ತು ಕಾಶ್ಮೀರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಕೋವಿಡ್-19 ಅಟ್ಟಹಾಸ ಮೆರೆಯುತ್ತಿದೆ.
ಭಾರತದಲ್ಲಿ ಶೇ. 80ರಷ್ಟು ಪ್ರಕರಣಗಳು ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ದೆಹಲಿ, ಜಮ್ಮು ಮತ್ತು ಕಾಶ್ಮೀರ್, ಕರ್ನಾಟಕ, ತೆಲಂಗಾಣ, ಗುಜರಾತ್, ತಮಿಳುನಾಡು, ಪಂಜಾಬ್ ರಾಜ್ಯದಲ್ಲಿ ವರದಿಯಾಗುತ್ತಿದೆ.