ಬೆಂಗಳೂರನ್ನು ಬೆಂದಕಾಳೂರಾಗಿಸಿದ ವೈರಸ್‌!

By Kannadaprabha NewsFirst Published Mar 29, 2020, 4:15 PM IST
Highlights

ನನ್ನೂರನ್ನ ಮತ್ತೆ ನನ್ನೂರನ್ನಾಗಿ ನೋಡುವುದಕ್ಕೆ ಒಂದು ವೈರಸ್‌ ಬರಬೇಕಾಯಿತು, ಅದು ವಾಪಸ್ಸು ಹೋದಮೇಲೂ ನನ್ನೂರು ನನ್ನೂರಾಗೇ ಉಳಿಯಲಿ.. ಮತ್ತೆ ವೈರಸ್‌ ವಾಪಸ್ಸು ಬರದೇ ಇರಲಿ...

ಮೇಘನಾ ಸುಧೀಂದ್ರ

ಗೂಗಲ್‌ ಮ್ಯಾಪ್‌ ನೋಡೆ, ಬೇಗ ಎಂದು ಗೆಳತಿಯೊಬ್ಬಳು ಮೆಸೇಜು ಕಳಿಸಿದ್ದಳು. ಜಗತ್ತಿನ ಯಾವ ಮೂಲೆಗೆ ಹೋಗಬೇಕಾದರೂ ಗೂಗಲ್‌ ಮ್ಯಾಪ್‌ ಬೇಕೇ ಬೇಕಾದ ನನಗೆ ಸೂರ್ಯಂಗೆ ಟಾರ್ಚಾ ಥರದ ಪರಿಸ್ಥಿತಿ. ಆಯ್ತು ಎಂದು ತೆಗೆದರೆ, ಮಲ್ಲೇಶ್ವರದಿಂದ ಮಾರತಹಳ್ಳಿ ನೋಡೆ ಎಂದಳು. ಆಯ್ತು ಹಾಳಾಗಿ ಹೋಗಲಿ ಎಂದು ನೋಡಿದರೆ 25 ನಿಮಿಷ ಎಂದು ತೋರಿಸಿತು. ಯಪ್ಪಾ ಇದು ಖಂಡಿತಾ ನನ್ನ ಹಳೇ ಬೆಂಗಳೂರಿನ ನೆನಪೇ ಎಂದು ನಕ್ಕು ಗೆಳತಿಗೆ ಥ್ಯಾಂಕ್ಸ್‌ ಎಂದೆ. ಅವಳು ಕೊರೋನಾ ಎಫೆಕ್ಟ್ ಕಣೆ ಎಂದು ಹೇಳಿದಳು.

ಊರಿನ ಕಡೆ ಗುಳೇ ಹೊರಟ ಯುವಕರು, ಬಿಕೋ ಎನ್ನುತ್ತಿದೆ ಬೆಂಗಳೂರು!

ಈ ಕೋರೋನಾ ಎಂಬ ಮಹಾಮಾರಿ ಭಾರತಕ್ಕೆ ಕಾಲಿಟ್ಟಾಗ ಅದು ಸಾಧಾರಣ ಫä್ಲ ಎಂದು ಜನ ಅಂದುಕೊಂಡಿದ್ದರು. ಜೊತೆಗೆ ನಮ್ಮ ಸಂಸ್ಕೃತಿಗೆ ಇದು ಹರಡಲ್ಲ, ನಮಗೆ ಶಕ್ತಿ ಜಾಸ್ತಿ ಇದೆ ಎಂದು ವಾಟ್ಸಾಪ್‌ ವೀರರು ಇಂತಹ ವಿಷಯಗಳನ್ನು ಸಾರಿ ಸಾರಿ ಹೇಳುತ್ತಿದ್ದರು. ಅದು ಈಗ ನಮ್ಮ ಮನೆ ಬಾಗಿಲ ಹೊಸ್ತಿಲಲ್ಲಿ ಕೂತಿದೆ. ಬಾಗಿಲು ತೆರೆಯುವ ಧೈರ್ಯ ಯಾರಿಗೂ ಇಲ್ಲ. ಆದರೆ ಬಾಗಿಲನ್ನು ತೆರೆಯದಿದ್ದರೆ ಮನೆಯ ಸಾಮಾನುಗಳಿಗೆ ಖೋತಾ, ಈ ಥರದ ಪರಿಸ್ಥಿತಿಯನ್ನ ಕಂಡು ಸರ್ಕಾರಕ್ಕಿಂತ ಮೊದಲು ಎಚ್ಚೆತ್ತುಗೊಂಡಿದ್ದು ಐಟಿ ಕಂಪೆನಿಗಳು. ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿಯಲ್ಲಿ ಆಫೀಸ್‌ ಇಟ್ಟುಕೊಂಡಿದ್ದರೂ ಅರಿಝೋನಾದ ಜಿಯೋಗ್ರಫಿ ಗೊತ್ತಿರುವ ಜನರೇ ಜಾಸ್ತಿ ಇರುವಾಗ, ಬೆಂಗಳೂರು-ಮೈಸೂರು ಲೋಕಲ್‌ ಓಡಾಡುವ ಹಾಗೆ ಬೆಂಗಳೂರು, ಟೆಲ್‌ ಅವೀವ್‌ ಎಂದು ಓಡಾಡುವ ಮಂದಿ ಮಧ್ಯರಾತ್ರಿ, ಹಗಲು, ಇರುಳು ಎಂದು ಲೆಕ್ಕವಿಲ್ಲದೇ ಯಾವುದ್ಯಾವುದೋ ಟೈಮ್‌ ಝೋನಿನಲ್ಲಿ ಕೆಲಸ ಮಾಡುವವರು, ಏರ್‌ಪೋರ್ಟ್‌ ಟ್ಯಾಕ್ಸಿ ಹುಡುಗನ್ನ ಸ್ಪೀಡ್‌ ಡಯಲ್ಲಿಗೆ ಹಾಕಿಕೊಳ್ಳುವವರು, ಇಲ್ಲಿ ರಾಘವೇಂದ್ರ ಸ್ವಾಮಿ ಮಠಕ್ಕೆ ಮಾತ್ರ ಹೋಗಿ ಅಲ್ಲಿ ರಾಝ್‌ ಮತಾಝ್‌ ಬಾರಿಗೆ ಮಾತ್ರ ಹೋಗುವವರಿಗೆ ರೋಗ ಬೇಗ ಅಂಟಿದೆ. ಅದೂ 14 ದಿವಸಗಳ ನಂತರ ರೋಗ ಇದೆ ಎಂದು ಗೊತ್ತಾಗುವ ಗುಣ ಲಕ್ಷಣ ಇರುವ ಕೊರೋನಾವನ್ನ ಏಸಿ ಆಫೀಸಿನಲ್ಲಿ ಹರಡಬಾರದೆಂಬ ಒಂದೇ ಕಾರಣಕ್ಕೆ ವರ್ಕ್ ಫ್ರಮ್‌ ಹೋಂ ಕೊಟ್ಟು ಕೈ ತೊಳೆದುಕೊಳ್ಳುವ ಕಂಪೆನಿಗಳು ಬಹಳ.

ಯಾವಾಗಲೂ ಕೆಲಸ ಮಾಡುತ್ತಲೇ ಇರಬೇಕು ಎಂದು ಲ್ಯಾಪ್‌ ಟಾಪ್‌ ಬ್ಯಾಗಿಗೇ ತಮ್ಮ ಜೀವನವನ್ನೇ ಅರ್ಪಿಸುವ ಐಟಿ ಜನರಿಗೆ ಈ ಕೊರೋನಾ ಅಪೇಕ್ಷಿಸದ ಅತಿಥಿ. ಇನ್ನು ವರ್ಕ್ ಫ್ರಂ ಹೋಂ ಬೇಡದೇ ಇರುವ ಅತಿಥಿ, ಹಳೇ ಬೆಂಗಳೂರಿನ ವಾತಾವರಣ ಬೇಕೇ ಬೇಕಾದ ಅತಿಥಿ. ಒಂದು ಇಪ್ಪತ್ತು ವರ್ಷದ ಹಿಂದೆ ಬೆಂಗಳೂರು ಇಷ್ಟೇ ಮುದವಾಗಿತ್ತು. ಬೆಳಗೆದ್ದಾಗ ಅಕ್ಕ ಪಕ್ಕದ ಮನೆಯವರ ರಂಗೋಲಿ, ತುಳಸೀ ಗಿಡದ ನೋಟ, ಹಕ್ಕಿಗಳ ಚಿಲಿಪಿಲಿ, ಪೇಪರಿನ ಹುಡುಗನ ಓದು, ಹಾಲು ಮಾರುವವವನ ಹೊಸ ಕಥೆ, ಮಕ್ಕಳ ಸಂಗೀತಾಭ್ಯಾಸ, ವಗೈರೆ ವಗೈರೆಗಳು. 9 ಘಂಟೆಯವರೆಗೂ ಯಾರೂ ಮನೆ ಬಿಡುತ್ತಿರಲ್ಲಿಲ್ಲ. ಸ್ವಲ್ಪ ಬೇಗ ಬಿಟ್ಟರೋ, ಓಹ್‌ ಶಿಫ್ಟಾ, ಸೆಂಟ್ರಲ್‌ ಗೌರ್ನರ್ಮೆಂಟಾ ಎಂದು ಕೇಳುತ್ತಿದ್ದರು. ಮಾರತಹಳ್ಳಿಯಲ್ಲಿರುವ ಡಿಆರ್‌ಡಿಓಗೆ ಜಯನಗರದಿಂದ ಅರ್ಧಘಂಟೆಯ ಪಯಣ ಅಷ್ಟೆ. ಜಯದೇವ, ಬಿಟಿಎಂ, ಸಿಲ್‌್ಕ ಬೋರ್ಡು, ಅಗರ ಎಲ್ಲೂ ಕಚ್ಚಿಕೊಳ್ಳುವ ಹಾಗಿರಲಿಲ್ಲ. ಇವೆಲ್ಲ ಒಂದು 20 ವರ್ಷದ ನಂತರ ಮತ್ತೆ ಮರಳಿ ಬಾ ಮನ್ವಂತರವೇ ಅನ್ನುವ ಹಾಗಾಗಿದೆ.

ಮದುವೆಯಾಗಿ ಎರಡು ವರ್ಷವಾದರೂ ಅಕ್ಕಪಕ್ಕದ ಮನೆಯವರನ್ನ ವೀಕೆಂಡ್‌ ಮಾತ್ರ ಹಲೋ ಅಂಕಲ್‌ ಹಾಯ್‌ ಆಂಟಿ ಎಂದಷ್ಟೆಮಾತಾಡಿಸುತ್ತಿದ್ದ ಹುಡುಗ ಹುಡುಗಿಯರು ವರ್ಕ್ ಫ್ರಂ ಹೋಮ್‌ ದೆಸೆಯಿಂದ ಬೆಳಗ್ಗೆ ಗಿಡಕ್ಕೆ ನೀರು ಹಾಕುವಾಗ ಒಮ್ಮೆ, ರಂಗೋಲಿ ಹಾಕುವಾಗ ಒಮ್ಮೆ, ಕಾರು ತೆಗೆಯುವಾಗ ಒಮ್ಮೆ, ಕುಕ್ಕರಿನ ಸೀಟಿಯ ಎಣಿಕೆ ತಪ್ಪಿದಾಗ ಒಮ್ಮೆ ಮಾತಾಡಿಸುವ ಹಾಗಾಗಿದೆ. ಅದು ಒಳ್ಳೆಯದೇ. ತರಕಾರಿ ಪಕ್ಕದ ರೋಡಿನಲ್ಲಿ ತಗೋಬೇಡ, ಹಾಲು ದೇವಸ್ಥಾನದ ಹಿಂದೆ ಇರುವ ಅಂಗಡಿಯಲ್ಲಿ ತಗೋ, ಸಿಟ್ರಸ್‌ ಫä›ಟ್ಸ್‌ ತಿಂದರೆ ಸ್ವಲ್ಪ ಶಕ್ತಿ ಬರುತ್ತದೆ, ಎದುರು ಮನೆಯ ಚಿಲ್ಟಾರಿ ಹುಡುಗ ಕೇಳುವ ಒಗಟುಗಳಿಗೆ ಉತ್ತರ, ಎಕ್ಸಾಮ್‌ ಬರೆಯದೇ ಪಾಸ್‌ ಆದೆ ಎಂದು ಹೇಳುವ ಗುಂಡು ಇವರೆಲ್ಲರ ಮಾತು ಕತೆಗೆ ಅಷ್ಟುಸಮಯವಿದೆ.

ಕಾವೇರಿ ನದಿಯಲ್ಲಿ ಹರಿವು ಕ್ಷೀಣ: ಕುಡಿಯುವ ನೀರಿಗೆ ಬವಣೆ

ಇನ್ನೂ ಮೀಟಿಂಗಿನ ಮಧ್ಯದಲ್ಲಿ ಹೇಳಿದ್ದನ್ನೇ ಹೇಳುವ ಲೀಡಿನ ಮಾತುಗಳನ್ನ ಕೇಳಿಸಿಕೊಳ್ಳುವ ಬದಲಿಗೆ ಪಕ್ಕದ ಮನೆಯ ಹುಡುಗ, ಎದುರು ಮನೆಯ ಹುಡುಗಿ, ಆಚೆ ಮನೆಯ ಟ್ವಿನ್ಸ್‌ ಮನೆಯ ಮುಂಬಾಗಿಲಿನ ಬಳಿ ನಿಂತು ಅಂತ್ಯಾಕ್ಷರಿ ಆಡಿಕೊಂಡು ಅದರಲ್ಲಿ ಹಳೇ ರಾಜಕುಮಾರ್‌ ಹಾಡುಗಳು ಹಾಡಿದಾಗ ಅದೆಷ್ಟುಮುದ ಕೊಡುತ್ತದೆ. ರಾತ್ರಿಯಾದರೆ ಆವರಿಸಿಕೊಳ್ಳುವ ಅಗಾಧ ಮೌನ ಮತ್ತೆ ಆ ಪುಸ್ತಕದಲ್ಲೋ ಅಥವಾ ನೆಚ್ಚಿನ ಹುಡುಗನ ತೋಳಿನಲ್ಲಿ ಹಾಡು ಹಾಡುವಂತೆ ಪ್ರೇರೇಪಿಸುತ್ತದೆ.

ಅದೆಷ್ಟುವರ್ಷ ಇರ್ತಿವೋ ಏನೋ ಮಾರಾಯ ಮೊದಲು ಈ ಕೊರೋನಾ ಆದಮೇಲೆ ಭೇಟಿಯಾಗೋಣ. ಇವತ್ತು ಕಾಲೇಜ್‌ ಬ್ಯಾಚ್‌ 2013 ರೀಯೂನಿಯನ್‌ ಆನ್‌ಲೈನ್‌ ಎಂದು ಮಾತಾಡುವಾಗ, ಅಲ್ಲಿ ಆ್ಯಪಲ್‌ ಐಫೋನ್‌, ಹೊಸ ಕಾರು, ಪೆಂಟ್‌ ಹೌಸು ಯಾವುದರ ಬಗ್ಗೆಯೂ ಚರ್ಚೆಯಾಗುವುದಿಲ್ಲ. ಬದಲಿಗೆ ಖುಷಿ ಕೊಟ್ಟಕ್ಷಣಗಳು , ಮತ್ತೆ ಮತ್ತೆ ಮೆಲುಕು ಹಾಕಬೇಕಾದ ಪ್ರೇಮಕಥೆಗಳಷ್ಟೆಚರ್ಚೆಯ ವಿಷಯ.

ಇವೆಲ್ಲಾ ಒಂದು ಸಣ್ಣ ವೈರಸ್ಸು ಬಂದು ಮನುಷ್ಯನ ಜೀವನ ಶೈಲಿ, ಅವನ ಪ್ರಿಯಾರಿಟಿಗಳನ್ನ ಬದಲಾಯಿಸಿದೆ. ತನ್ನ ಜೀವನದ ದೊಡ್ದ ಸಂಪತ್ತು ತನ್ನ ಫ್ಯಾಮಿಲಿಯಷ್ಟೆಎಂಬ ಅರಿವಾಗಿದೆ. ಇವೆಲ್ಲಾ ಬರೀ ಉಳ್ಳವರ ಸ್ವತ್ತಾ ಎಂದು ಕೇಳಿದರೆ ಅದಕ್ಕೆ ಉತ್ತರ ಹೌದು ಮತ್ತು ಇಲ್ಲ. ಐಟಿ ಕಂಪೆನಿಗಳಲ್ಲೂ ತುಂಬಾ ವಿಧಗಳಿದೆ. ಕೆಲವು ಕಂಪೆನಿಗಳಲ್ಲಿ ಮನೆಯಿಂದ ಕೆಲಸ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಗಾರ್ಮೆಂಟ್ಸಿಗೆ ಹೋಗುವ ಹೆಣ್ಣುಮಕ್ಕಳು, ಆಟೋ ಓಡಿಸುವ ಅಣ್ಣಂದಿರು ಇವರೆಲ್ಲರ ಜೀವನ ಕಷ್ತದಲ್ಲಿದೆ. ಆ ಜನರ ಸಂಪರ್ಕ ದಿನ ನಿತ್ಯ ಮಾಡುವ ಬೆಂಗಳೂರು ಅವರ ಕಣ್ಣಲ್ಲಿ ಸಿಕ್ಕಾಪಟ್ಟೆನೀರು ತರಿಸುತ್ತಿದೆ.

ನನ್ನೂರನ್ನ ಮತ್ತೆ ನನ್ನೂರನ್ನಾಗಿ ನೋಡುವುದಕ್ಕೆ ಒಂದು ವೈರಸ್‌ ಬರಬೇಕಾಯಿತು, ಅದು ವಾಪಸ್ಸು ಹೋದಮೇಲೂ ನನ್ನೂರು ನನ್ನೂರಾಗೇ ಉಳಿಯಲಿ.. ಮತ್ತೆ ವೈರಸ್‌ ವಾಪಸ್ಸು ಬರದೇ ಇರಲಿ...

click me!