Asianet Suvarna News Asianet Suvarna News

ಊರಿನ ಕಡೆ ಗುಳೇ ಹೊರಟ ಯುವಕರು, ಬಿಕೋ ಎನ್ನುತ್ತಿದೆ ಬೆಂಗಳೂರು!

ನಿತ್ಯ ಜೀವನ ಎನ್ನುವ ಚದುರಂಗದಾಟವನ್ನ ನಾವು ತುಂಬಾ ಎಚ್ಚರಿಕೆಯಿಂದ ಪ್ರತಿದಿನ ಆಡುತ್ತಿರುತ್ತೇವೆ. ಎಷ್ಟುಗಂಟೆಗೆ ಏಳಬೇಕು, ಜಿಮ್ಮಲ್ಲಿ ಬೆವರು ಹರಿಸೋಕೆ, ಸ್ನಾನ ತಿಂಡಿಗೆ, ಟ್ರಾಫಿಕ್ಕಲ್ಲಿ ಕಾಯೋಕೆ, ಆಫೀಸಿನ ಕೆಲಸಗಳ ಮುಗಿಸೋಕೆ, ಕಾಫಿ ಟೀ ಬ್ರೇಕಿಗೆ, ಸಂಜೆ ಬಂದು ಕಾಲು ಚಾಚಿ ಟೀವಿ ಮುಂದೆ ಕೂರುವುದಕ್ಕೆ, ನಿದ್ದೆಗೆ ಪ್ರತಿಯೊಂದನ್ನು ಒಂದೊಂದು ಪಾನ್‌ ನಡೆಸುವ ಹಾಗೆ ಬದುಕುತ್ತಿರುವಾಗ ಕಣ್ಮುಚ್ಚಿ ಬಿಡುವಷ್ಟರಲ್ಲಿ ಯಾರೋ ನಮ್ಮ ಆಟವನ್ನ ನಮಗೆ ಗೊತ್ತಿಲ್ಲದೆ ಆಡಿದಾಗ ಯಾವ ಪಾನು ಎಲ್ಲಿ ಹೋಯಿತು ಅಂತ ಗಾಬರಿಯಾಗುತ್ತೋ, ಈ ಕೊರೋನಾ ಅನ್ನುವ ಕೇಳದೂರಿಂದ ಕರೆಯದೆ ಬಂದ ಅತಿಥಿ ನಮ್ಮಲ್ಲಿ ಅಷ್ಟೆಗಾಬರಿಯನ್ನ ಹುಟ್ಟಿಸಿದೆ.

Bangalore techie new idea to fight coronavirus
Author
Bangalore, First Published Mar 29, 2020, 4:08 PM IST

ಸಚಿನ್‌ ತೀರ್ಥಹಳ್ಳಿ

ಮಾರ್ಚ್ ಮೊದಲ ವಾರದಲ್ಲಿ ಹೀಗೊಂದು ರೋಗ ಬಂದಿದೆಯಂತೆ ಅಂತ ಕಾಫಿ ಟೀ ಬ್ರೇಕಲ್ಲಿ ಮಾತಾಡಿಕೊಂಡಿದ್ದವರಿಗೆ, ಮೂರನೇ ವಾರದಲ್ಲೇ ಅದು ಮನೆ ಬಾಗಿಲ ಹತ್ತಿರ ಬಂದಿದೆ ಅಂತ ಗೊತ್ತಾಗಿದೆ. ಕಾಲಿಂಗ್‌ ಬೆಲ್‌ ಯಾವಾಗ ಒತ್ತುತ್ತದೋ ಅಂತ ಭಯದಲ್ಲಿ ದಿನದೂಡುವ ಹಾಗಾಗಿದೆ. ಕೋರೋನಾದಿಂದ ಮೊದಲು ಪೆಟ್ಟು ಬಿದ್ದಿದ್ದೇ ನಮ್ಮ ವರ್ಕು ಲೈಫಿಗೆ. ಜಗತ್ತು ನಾಳೆ ಮುಳುಗುತ್ತದೆ ಅಂದರೆ ಇವತ್ತು ಕೊಟ್ಟಕೆಲಸ ಮುಗಿಸೇ ಮನೆಗೆ ಹೋಗಬೇಕು ಅನ್ನುವ ಜಾಯಮಾನದ ಕಾರ್ಪೋರೇಟ್‌ ಕಂಪನಿಗಳು ನನ್ನಂತಹ ಟೆಕ್ಕಿಗಳಿಗೆ ಮನೆಯಲ್ಲೇ ಕೆಲಸ ಮಾಡಿ, ಯಾವುದೇ ಕಾರಣಕ್ಕೂ ಆಫೀಸಿನ ಕಡೆ ತಲೆ ಕೂಡ ಹಾಕಿ ಮಲಗಬೇಡಿ ಅಂತ ತಾಕೀತು ಮಾಡಿದವು. ಮೊದಲೆಲ್ಲ ವರ್ಕ್ ಫ್ರಂ ಹೋಮ್‌ ಮಾಡುತ್ತೇವೆ ಲ್ಯಾಪ್‌ಟಾಪ್‌ ಕೊಡಿ ಅಂದರೆ, ಯಾಕೆ ಏನೂ ಅಂತ ಕಾರಣ ಕೇಳಿ ಲ್ಯಾಪ್‌ಟಾಪ್‌ ಕೊಡುವುದಕ್ಕೆ ತಿಂಗಳುಗಟ್ಟಲೇ ಸತಾಯಿಸುತ್ತಿದ್ದ ಮ್ಯಾನೇಜರುಗಳೇ ಈಗ ಗೋಡೌನುಗಳಲ್ಲಿದ್ದ ಲ್ಯಾಪ್‌ಟಾಪುಗಳನ್ನ ಧೂಳೊರೆಸಿ ಕೊಡುತ್ತಿದ್ದಾರೆ. ಸ್ಟಾಕ್‌ ಇಲ್ಲದಿದ್ದರೆ ಡೆಸ್ಕ್‌ಟಾಪನ್ನ ಮನೆಗೇ ಕಳುಹಿಸಿ ಕೊಡುತ್ತಿದ್ದಾರೆ.

ಕೊರೋನಾ ಆತಂಕ: ಫಟಾ ಫಟ್‌ ಅಂತ 10 ನಿಮಷದಲ್ಲೇ ಮುಗಿದ ಮದುವೆ!

ಆದರೆ ವಾರಕ್ಕೆ ಒಂದೋ ಎರಡೋ ದಿನ ಮನೆಯಿಂದ ಕೆಲಸ ಮಾಡುತ್ತಿದ್ದವನಿಗೆ ವಾರಪೂರ್ತಿ ಮನೆಯಲ್ಲೇ ಇರುವುದು ಎಂತಹ ಯಾತನೆ ಅನ್ನುವುದು ಕೊರೋನಾ ಅರ್ಥ ಮಾಡಿಸಿದೆ. ಇಂಟರ್‌ನೆಟ್ಟಿಗಾಗಿ ರೂಮ್‌ಮೇಟ್ಸಗಳ ಹತ್ತಿರ ಜಗಳವಾಡುವುದು, ಕ್ಲೈಂಟ್‌ ಫೋನ್‌ ಬಂದರೆ ಒಬ್ಬ ಅಡಿಗೆ ಮನೆಯಲ್ಲಿ ಮತ್ತೊಬ್ಬ ಹಾಲಿನಲ್ಲಿ ಇನ್ನೊಬ್ಬ ಬಾಲ್ಕನಿಯಲ್ಲಿ ನಿಂತು ಮಾತಾಡುವುದು, ಊಟಕ್ಕೆ ಚಿತ್ರಾನ್ನವೋ ಪುಳಿಯೊಗರೆಯೋ ಅಂತ ನಿರ್ಧರಿಸಲು ಸಾಧ್ಯವಾಗದೇ ಊಟ ಮಾಡುವಷ್ಟರಲ್ಲಿ ಸಂಜೆಯಾಗುವುದೆಲ್ಲಾ ಮಾಮೂಲಿಯಾಗಿದೆ. ಕೊರೋನಾ ಭಯಕ್ಕೆ ಹೊರಗಡೆ ತಿನ್ನುವುದು ಕಡಿಮೆಯಾದ ಪರಿಣಾಮ ಬರೀ ಬ್ಯಾಚುಲರ್‌ಗಳೇ ಇರುವ ನಮ್ಮ ಮನೆಯ ಅಕ್ಕಪಕ್ಕದಲ್ಲಿ ಕುಕ್ಕರ್‌ಗಳು ಇದ್ದಕ್ಕಿದ್ದಂತೆ ದಿನದ ಮೂರು ಹೊತ್ತು ಕೂಗಿಕೊಳ್ಳಲು ಶುರುಮಾಡಿವೆ.

ನಾವು ದಿನಾ ಏಳುವ ಮುಂಚೆಯೇ ಆಫೀಸಿಗೆ ಹೋಗುತ್ತಿದ್ದರೋ ಏನೋ, ನಮ್ಮ ಏರಿಯಾದಲ್ಲಿ ಇರುವ ಸುಂದರವಾದ ಹುಡುಗಿಯರೆಲ್ಲಾ ಹಾಲು ತರಕಾರಿ ತರಲು ಹೊರಗೆ ಹೋದಾಗ ಮೊದಲ ಬಾರಿಗೆ ಕಣ್ಣಿಗೆ ಕಾಣುತ್ತಿದ್ದಾರೆ. ನಾವು ಮನೆಯಲ್ಲೇ ಬಿದ್ದು ಸಾಯುವುದನ್ನ ನೋಡಿ ಮೊನ್ನೆ ಎದುರುಗಡೆ ಮನೆ ಆಂಟಿ ‘ಏನಪ್ಪಾ ಕೋರೋನಾ ಬಂದು ಕೆಲಸ ಎಲ್ಲಾ ಹೋಯಿತಾ..? ಮನೇಲಿ ಇದೀರಲ್ಲ’ ಅಂತ ಕೇಳಿಯೇ ಬಿಟ್ಟರು. ಅವರಿಗೆ ವರ್ಕ್ ಫ್ರಮ್‌ ಹೋಮ್‌ ಅಂದರೆ ಏನು ಅಂತ ತಿಳಿಸಿ ಹೇಳುವಷ್ಟರಲ್ಲಿ ಸಾಕು ಸಾಕಾಯಿತು. ಪಾಪ ಆಂಟಿ ಆಮೇಲೆ ಮನೆಯಲ್ಲಿದ್ದು ಕೆಲಸ ಮಾಡ್ತೀರಲ್ಲ ಅಂತ ಎರಡು ದಿನ ಸಾಂಬಾರು ಬೇರೆ ತಂದುಕೊಟ್ಟರು.

ಏನೇ ಆದರೂ ಬೆಳಿಗ್ಗೆ ಎದ್ದು ಸ್ನಾನ ಮಾಡಿ ನೀಟಾಗಿ ಡ್ರೆಸ್‌ ಮಾಡಿಕೊಂಡು, ಏನೋ ಸಾಧಿಸುವ ಭ್ರಮೆಯಲ್ಲಿ ಬೈಕು ಹತ್ತಿ ಆಫೀಸಿಗೆ ಹೋಗಿ, ಕೆಲಸ ಮಾಡಿಕೊಂಡು, ಕಾಫಿ ಬ್ರೇಕಲ್ಲಿ ಕಲೀಗಗಳ ಜೊತೆ ಕೊಂಚ ಹರಟಿ, ಸಂಜೆ ಟ್ರಾಫಿಕಲ್ಲಿ ಪಕ್ಕದಲ್ಲಿ ನಿಂತ ಆಟೋದವನು ಹಾಕಿದ ಹಂಸಲೇಖ ಹಾಡು ಯಾವುದೋ ನೆನಪನ್ನ ಕೆದಕುವಾಗ ಈ ನಗರದ ಗದ್ದಲದಲ್ಲಿ ಗೊತ್ತಿಲ್ಲದೇ ಒಂದಾಗಿ, ಮತ್ತೆ ಮನೆಗೆ ವಾಪಾಸು ಬರುವಾಗ ಇರುವ ನೆಮ್ಮದಿ ಈ ವರ್ಕ್ ಫ್ರಮ್‌ ಹೋಮಲ್ಲಿ ಇಲ್ಲ ಎನ್ನುವ ಜ್ಞಾನೋದಯ ಕೋರೋನಾ ದಯೆಯಿಂದಾಯಿತು.

ಮಾನವೀಯತೆ ಮೆರೆದ NBF; 3 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಊಟ ವಿತರಣೆ

ಕೋರೋನಾ ಭಯದಿಂದಾಗಿ ಬೆಂಗಳೂರು ಸಂಪೂರ್ಣ ಲಾಕ್‌ಡೌನ್‌ ಆಗುತ್ತಿದ್ದಂತೆ ಇಲ್ಲಿದ್ದ ಅನೇಕ ಗೆಳೆಯರು ಟೆಂಟೆತ್ತಿಕೊಂಡು ಊರಿನ ಕಡೆ ಗುಳೇ ಹೊರಟಾಗಿದೆ. ಇಷ್ಟುದಿನ ನಮ್ಮನ್ನು ಸಾಕಿ ದುಡಿಯಲು ಕೆಲಸ, ಬದುಕಲು ಸ್ವಾಭಿಮಾನ ಸ್ವಾತಂತ್ರ್ಯ ಕೊಟ್ಟನಗರವನ್ನ ಇಂತಹ ಕಷ್ಟಕಾಲದಲ್ಲಿ ಅನಾಥವಾಗಿಸಿ ಹೋಗಲು ಮನಸ್ಸು ಹೇಗೆ ಬರುತ್ತದೋ ಗೊತ್ತಾಗುತ್ತಿಲ್ಲ. ನಾನಂತೂ ಯಾವುದೇ ಕಾರಣಕ್ಕೂ ಬೆಂಗಳೂರನ್ನ ಬಿಟ್ಟು ಹೋಗಬಾರದು ಅಂತ ತೀರ್ಮಾನಿಸಿದ್ದೇನೆ. ಇಂತಹ ಕಷ್ಟಕಾಲದಲ್ಲೂ ಈ ನಗರ ನನ್ನನ್ನು ಕಾಪಾಡುತ್ತದೆ ಅನ್ನುವ ನಂಬಿಕೆ ನನಗಿದೆ.

ಊರಿಂದ ಫೋನು ಮಾಡಿ ಹಬ್ಬಕ್ಕೆ ಹರಕೆಗೆ ಯಾವಾಗ ಬರುತ್ತೀರಾ ಕೇಳುತ್ತಿದವರೆಲ್ಲಾ ಕೋರೋನಾ ಬಂದ ಮೇಲೆ, ಎಲ್ಲ ಮಾತಾಡುತ್ತಾರೆ ವಿನಹ ಊರಿಗೆ ಯಾವಾಗ ಬರುತ್ತೀರಾ ಅಂತ ಮಾತ್ರ ಅಪ್ಪಿತಪ್ಪಿಯೂ ಕೇಳುತ್ತಿಲ್ಲ. ವಾಟ್ಸಾಪಲ್ಲಿ ಫೇಸಬುಕಲ್ಲಿ ಸ್ಟೇಟಸ್‌ಗಳನ್ನ ಹಾಕಿ ಊರಿನ ಕಡೆ ಬರಲೇಬೇಡಿ ಅಂತ ನಯವಾಗಿ ಹೇಳುತ್ತಿದ್ದಾರೆ. ಇಲ್ಲಿ ಅವರನ್ನು ದೂರುವ ಹಾಗಿಲ್ಲ ಪರಿಸ್ಥಿತಿ ಅವರನ್ನ ಮಾತಾಡಿಸುತ್ತಿದೆ. ಆದರೆ ಬೆಂಗಳೂರು ಇರಬೇಕು ಅನ್ನುವಷ್ಟುದಿನ ನನ್ನ ಜೊತೆ ಇರು ಅನ್ನುತ್ತದೆ ಹೊರತು, ಇಲ್ಲಿಂದ ಹೊರಡು ಇಲ್ಲಿಗೆ ಬರಲೇಬೇಡ ಅನ್ನುವ ಮಾತನ್ನ ಮಾತ್ರ ಅದು ಯಾವತ್ತೂ ಯಾರಿಗೂ ಹೇಳುವುದಿಲ್ಲ. ಅದೇ ಈ ನಗರಕ್ಕಿರುವ ದೊಡ್ಡ ಗುಣ. ನಾವು ಎಲ್ಲಿ ಇರುತ್ತಿವೋ ಅದೇ ನಮ್ಮೂರು ಇರುವಷ್ಟದಿನ ನಿರಾಕಾರಣವಾಗಿ ಅದನ್ನು ಪ್ರೀತಿಸಬೇಕು, ಹುಟ್ಟಿಸಿದ ಊರು ಹಳೇ ಹುಡುಗಿಯ ನೆನಪಿನ ಹಾಗೆ ಬೇಗ ಮರೆತಷ್ಟುಒಳ್ಳೆಯದು. ಈ ನಗರ ನಮ್ಮನ್ನು ಕಾಯುವ ಪ್ರೀತಿಸುವ ಹುಡುಗಿಯ ಹಾಗೆ ಬೇಗ ಅರ್ಥಮಾಡಿಕೊಂಡಷ್ಟುಬದುಕು ಇಲ್ಲಿ ಚೆನ್ನಾಗಿರುತ್ತದೆ ಅನ್ನುವ ಸತ್ಯವನ್ನೆಲ್ಲಾ ಕೊರೋನಾ ಅರ್ಥಮಾಡಿಸಿದೆ.

ಆದರೆ ಬೆಂಗಳೂರು ಹೀಗೆ ಜನರಿಲ್ಲದೆ ಗೌಜು ಗದ್ದಲವಿಲ್ಲದೆ ಮೂಕಿ ಸಿನಿಮಾದ ಲೊಕೇಷನ್ನಿನ ಹಾಗೆ ಕಾಣುವಾಗ ಮಾತ್ರ ಸಂಕಟವಾಗುತ್ತಿದೆ. ಒಂದು ನಗರಕ್ಕೆ ಅದರ ಗದ್ದಲವೇ ಭೂಷಣ. ಪ್ರೇಮಿಗಳಿಲ್ಲದೆ ಪಾರ್ಕುಗಳು, ಟಿಕ್‌ ಟಾಕ್‌ ಮಾಡುವ ಹುಡುಗಿಯರಿಲ್ಲದೆ ಮಾಲುಗಳು, ಯುವಜನರ ಸಂಭ್ರಮವಿಲ್ಲದೆ ಪಬ್ಬುಗಳು, ಹೀರೋಗಳ ಫ್ಯಾನ್ಸ್‌ಯಿಲ್ಲದೆ ಥಿಯೇಟರುಗಳು, ಮಕ್ಕಳಿಲ್ಲದೇ ಸ್ಕೂಲು ಬಸ್ಸುಗಳು, ಹಿರಿಯರಿಲ್ಲದೆ ದೇವಸ್ಥಾನಗಳು.. ನಿಜಕ್ಕೂ ಕೋರೋನಾ ಇಡೀ ಬೆಂಗಳೂರನ್ನೆ ಮೌನಿಯಾಗಿಸಿದೆ. ಈ ಕೋರೋನಾನ ಒದ್ದೋಡಿಸಿ ಮತ್ತೆ ಬೆಂಗಳೂರು ಬಿಟ್ಟು ಹೋದವರೆಲ್ಲಾ ವಾಪಾಸು ಬರುವ ಹಾಗೆ ಮೈಕೊಡವಿ ಎದ್ದೇಳುವ ದಿನಕ್ಕೆ ನಾನಂತೂ ಕಾಯುತ್ತಿರುವೆ.

COVID19: ಲಾಠಿ ಬದಲು ಪೊಲೀಸರ ಕೈಯಲ್ಲಿ ಮಾಸ್ಕ್

ಬದುಕಿನ ಅನಿಶ್ಚತತೆ, ಸಹಬಾಳ್ವೆಯ ಸುಖ, ಮನೆಯಲ್ಲೇ ಇರುವುದರ ಕಷ್ಟ, ಕೆಲಸದ ಮಹತ್ವ, ನಗರವೊಂದರ ಅಂತಃಕರಣವನ್ನೆಲ್ಲಾ ಪರಿಚಯಿಸಿದ ಕೋರೋನಾಗೆ ನಿಜಕ್ಕೂ ಒಮ್ಮೆ ಥ್ಯಾಂಕ್ಸ್‌ ಅಂತಲೂ ಹೇಳಬೇಕು ಅನ್ನಿಸುತ್ತದೆ. ಈ ಗ್ರಹದಲ್ಲಿ ನಾವು ಇತರ ಜೀವಜಂತುಗಳ ಜೊತೆಗೆ ಸಹಜೀವಿಗಳೇ ಹೊರತು ನಾವಿದರ ವಾರಸುದಾರರೋ ಹಕ್ಕುದಾರರೋ ಅಲ್ಲ ಅನ್ನುವುದಾರೂ ಈ ಕೋರೋನಾ ನೆಪದಲ್ಲಿ ನಾವು ಕಲಿಯಬೇಕಿದೆ. ಡಿಯರ್‌ ಕೋರೋನಾಗೆ ಒಂದೇ ಮನವಿ, ನೀನು ಕಲಿಯಬೇಕು ಅಂತ ಕೊಟ್ಟಿರುವ ಸಿಲೆಬಸ್ಸು ಮಾಡಿದ ಸಣ್ಣ ಪರೀಕ್ಷೆಗೇ ನಮ್ಮ ಜೀವ ಹೋದ ಹಾಗಾಗಿದೆ, ಇನ್ನೂ ಪಾಠ ಕಲಿಯುವುದಕ್ಕೆ ಅವಕಾಶ ಕೊಟ್ಟು ಬಂದ ದಾರಿಯಲ್ಲಿ ತಿರುಗಿಯೂ ಕೂಡ ನೋಡದೆ ಹೋಗು ಅನ್ನುವುದೇ ಕೊನೆಗುಳಿದ ಪ್ರಾರ್ಥನೆ.

Follow Us:
Download App:
  • android
  • ios