ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

By Kannadaprabha News  |  First Published Mar 29, 2020, 9:00 AM IST

ನಡುಗುವ ಕೈ, ಬೆವರುವ ಮೈ, ನಿದ್ದೆಯಿಲ್ಲದ ರಾತ್ರಿಗಳು, ಉದ್ವಿಗ್ನ ಹಗಲುಗಳು, ಆತ್ಮಹತ್ಯೆ ಪ್ರಚೋದನೆ.. ಕೊರೋನಾ ಕಾಲ ಕುಡುಕರಿಗೆ ದುಃಸ್ವಪ್ನ. ಊರೆಲ್ಲ ಲಾಕ್‌ಡೌನ್‌ ಆಗಿ, ಹೆಂಡದಂಗಡಿಗಳೂ ಮುಚ್ಚಿ ಹೋಗಿ ಮದ್ಯಕ್ಕೆ ಹಾಹಾಕಾರ ಉಂಟಾಗಿರುವ ಈ ಟೈಮ್‌ನಲ್ಲಿ ಕುಡಿಯಲು ಆಲ್ಕೋಹಾಲ್‌ ಸಿಗದೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳೂ ಬರುತ್ತಿವೆ. ಅಲ್ಲದೆ ಆಲ್ಕೋಹಾಲ್‌ ಬೇಕೇಬೇಕು ಅಂತ ಹಠ ಹಿಡಿದು ಕುಳಿತ ಘಟನೆಗಳೂ ವರದಿಯಾಗುತ್ತಿವೆ. ಇಂಥಾ ಸಂದರ್ಭದಲ್ಲಿ ಡಾ.ಪಿ ವಿ ಭಂಡಾರಿ ‘ಕುಡಿತದ ಹಿಂತೆಗೆತ’ ಹೇಗೆ ಪ್ರಾಣಕ್ಕೆ ಎರವಾಗಬಲ್ಲದು ಅಂತ ವಿವರಿಸಿದ್ದಾರೆ.


ಪ್ರಿಯಾ ಕೆರ್ವಾಶೆ

‘68 ವರ್ಷದ ವ್ಯಕ್ತಿ ನಮ್ಮ ಆಸ್ಪತ್ರೆಗೆ ಇವತ್ತು ದಾಖಲಾಗಿದ್ದಾರೆ. ದಿನಕ್ಕೆ 90 ಎಂಎಲ್‌ ಕುಡೀತಿದ್ರು. ಕಳೆದ ಎರಡು ದಿನಗಳಿಂದ ಎಲ್ಲ ಲಾಕ್‌ ಡೌನ್‌ ಆಗಿ ಅವರಿಗೆ ಮದ್ಯ ಸಿಕ್ಕಿಲ್ಲ. ಕೈ ಕಾಲುಗಳಲ್ಲಿ ನಡುಕ ಶುರುವಾಗಿದೆ. ನಿದ್ದೆ ಬರುತ್ತಿಲ್ಲ. ಮನೆಯವರ ಮೇಲೆಲ್ಲ ರೇಗಾಡುತ್ತಿದ್ದಾರೆ. ಬಹಳ ರೆಸ್ಟ್‌ ಲೆಸ್‌ ಆಗಿದ್ದಾರೆ. ಮನೆಯಲ್ಲಿರೋದು ಅವರು, ಅವರ ಹೆಂಡತಿ ಮಾತ್ರ. ಮಗ ಪಕ್ಕದೂರಿನಲ್ಲಿರುವುದು. ಆತ ಕರ್ಕೊಂಡು ಬಂದು ಆಸ್ಪತ್ರೆಗೆ ಎಡ್ಮಿಟ್‌ ಮಾಡಿ ಹೋಗಿದ್ದಾನೆ.

Tap to resize

Latest Videos

ಇನ್ನೊಂದು ಕೇಸ್‌ ನಲ್ಲಿ ಯುವಕನಿಗೆ ಇಪ್ಪತ್ತೈದು ವರ್ಷ ವಯಸ್ಸು. ನಿತ್ಯ ಬೆಳಗ್ಗೆಯಿಂದಲೇ ಕುಡಿಯೋ ಅಭ್ಯಾಸ. ಈಗ ಸಿಕ್ತಾ ಇಲ್ಲ. ಅವನಿಗೆ ಕೈಯೆಲ್ಲ ನಡುಗುತ್ತಾ ಇದೆ ಮಾತ್ರವಲ್ಲ. ಫಿಟ್ಸ್‌ ಬಂದಿದೆ. ಬೈಕ್‌ ನಲ್ಲಿ ಆಸ್ಪತ್ರೆಗೆ ಬರುವಾಗಲೇ ಫಿಟ್ಸ್‌ ಬಂತು. ಅವನನ್ನು ಅಡ್ಮಿಟ್‌ ಮಾಡಿದ್ದೇನೆ.

ಉಡುಪಿ ಲಾಕ್‌ಡೌನ್‌: ಕುಡಿಯೋಕೆ ಮದ್ಯ ಸಿಗದೆ ವ್ಯಕ್ತಿ ಆತ್ಮಹತ್ಯೆ

undefined

ಕಳೆದೆರಡು ದಿನಗಳಿಂದ ಈ ಬಗೆಯ ಕೇಸ್‌ ಗಳು ಹೆಚ್ಚೆಚ್ಚು ಬರುತ್ತಿವೆ. ಇವತ್ತೊಂದೇ ದಿನ ನಾಲ್ಕೈದು ಜನ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ಳಂಬೆಳಗ್ಗೆ ನಮ್ಮ ಮನೆಗೆ ಇಬ್ಬರು ಹುಡುಕಿಕೊಂಡು ಬಂದಿದ್ದಾರೆ. ಸಡನ್ನಾಗಿ ಕುಡಿತ ನಿಲ್ಲಿಸಿದಾಗ ಬರುವ ಈ ಸಮಸ್ಯೆಗೆ ’ಮದ್ಯ ವ್ಯಸನಿಗಳ ಹಿಂತೆಗೆತ’ ಅಂತಾರೆ. ನಿತ್ಯವೂ ಚೆನ್ನಾಗಿ ಮದ್ಯಪಾನ ಮಾಡುತ್ತಿದ್ದವರು ಸಡನ್ನಾಗಿ ಕುಡಿಯೋದು ನಿಲ್ಲಿಸಿದರೆ ಹೀಗೆಲ್ಲ ಆಗುತ್ತದೆ. ಇದರ ತೀವ್ರತೆಯಿಂದ ಸಾವೂ ಸಂಭವಿಸಬಹುದು.’

ಕಳೆದೆರಡು ದಶಕಗಳಿಂದ ಸಮುದಾಯದ ಪರವಾದ ಕೆಲಸಗಳಲ್ಲಿ ತೊಡಗಿಸಿಕೊಂಡವರು ಉಡುಪಿಯ ಹಿರಿಯ ವೈದ್ಯ ಡಾ, ಎ ವಿ ಭಂಡಾರಿ. ಕೊರೋನಾ ಟೈಮು ಕುಡುಕರಿಗೆ ಹೇಗೆ ಜೀವಕ್ಕೇ ಎರವಾಗಬಹುದು ಅನ್ನೋದನ್ನು ಅವರು ವಿವರಿಸೋದು ಹೀಗೆ.

ಸಾಮಾನ್ಯವಾಗಿ ಕುಡುಕರಿಗೆ ಮದ್ಯ ಸಪ್ಲೈ ನಿಂತು ಹೋದ ಕೂಡಲೇ ಅವರ ಒದ್ದಾಟವನ್ನು ಕಂಡು ನಗುವವರೇ ಹೆಚ್ಚು. ದಿನಾ ಕುಡೀತಿದ್ದ, ಈಗ ಅನುಭವಿಸಲಿ ಅಂತಲೇ ಹೇಳುತ್ತಾರೆ. ಕೊರೋನಾ ಟೈಮ್‌ನಲ್ಲಿ ಎಲ್ಲೆಲ್ಲೂ ಹೆಂಡದಂಗಡಿಗಳು ಮುಚ್ಚಿವೆ. ಶ್ರೀಮಂತರೇನೋ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಆದರೆ ಬಡವರ ಸ್ಥಿತಿ ಚಿಂತಾಜನಕವಾಗುತ್ತದೆ. ನಿತ್ಯವೂ ಕುಡಿಯುತ್ತಿದ್ದವರಲ್ಲಿ ಅನೇಕ ದೈಹಿಕ, ಮಾನಸಿಕ ಬದಲಾವಣೆಗಳಾಗುತ್ತವೆ. ಅರವತ್ತು ವರ್ಷ ದಾಟಿದವರು ಬೇಗ ಪರಿಣಾಮಕ್ಕೆ ಒಳಗಾಗುತ್ತಾರೆ. ಚಿಕ್ಕ ವಯಸ್ಸಿನವರಿಗೆ ಸಮಸ್ಯೆಯಾದರೂ ಮೂರ್ನಾಲ್ಕು ದಿನದಲ್ಲಿ ತಹಬಂದಿಗೆ ಬರಬಹುದು. ಆದರೆ ಅವರು ನಿತ್ಯವೂ ಕುಡಿಯುತ್ತಿದ್ದರೆ ಅವರಿಗೆ ಪಿಟ್ಸ್‌, ಸನ್ನಿ ನಡುಕದಂಥಾ ಸಮಸ್ಯೆ ಬರಬಹುದು. ಇದನ್ನು ಡಾ. ಭಂಡಾರಿ ವಿವರಿಸೋದು ಹೀಗೆ..

 

‘ಸಡನ್ನಾಗಿ ಕುಡಿತ ನಿಲ್ಲಿಸಿದರೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳೆರಡೂ ಬರಬಹುದು. ಇದರಲ್ಲಿ ಸಿಂಪಲ್‌ ವಿತ್‌ ಡ್ರಾವಲ್‌, ಕಾಂಪ್ಲಿಕೇಟೆಡ್‌ ವಿತ್‌ ಡ್ರಾವಲ್‌ ಅಂತ ಎರಡು ವಿಧ ಇದೆ. ಸಿಂಪಲ್‌ ವಿತ್‌ ಡ್ರಾವಲ್‌ ನಲ್ಲಿ ಕೈ ನಡುಕ, ನಿದ್ರಾಹೀನತೆ, ಎದೆಬಡಿತ ಹೆಚ್ಚಾಗೋದು, ಬೆವರೋದು, ಕೆಟ್ಟಕನಸು ಬರೋದೆಲ್ಲ ಆಗಬಹುದು. ಕಾಂಪ್ಲಿಕೇಟೆಡ್‌ ವಿತ್‌ಡ್ರಾವಲ್‌ ನಲ್ಲಿ ಪಿಟ್ಸ್‌ ಆಗುತ್ತೆ, ಈ ಸಂಕೀರ್ಣ ಸಮಸ್ಯೆಯಲ್ಲೇ ಇನ್ನೊಂದು ನಡುಕ ಸನ್ನಿ ಅಂತಿದೆ, ಇದರಲ್ಲಿ ಮೈಯೆಲ್ಲ ನಡುಗುತ್ತೆ. ಇದು ಮಾರಣಾಂತಿಕವೂ ಆಗಬಹುದು. ಕೊರೋನಾದಲ್ಲಿ ನೂರರಲ್ಲಿ ಇಬ್ಬರು ಸಾಯ್ತಾರೆ. ಇಂಥಾ ಕಾಂಪ್ಲಿಕೇಶನ್‌ ಗಳಲ್ಲಿ ನೂರರಲ್ಲಿ ಒಬ್ಬರು ಸಾಯ್ತಾರೆ. ಇದರಲ್ಲಿ ಮೈಯೆಲ್ಲ ನಡುಗೋದರ ಜೊತೆಗೆ ಯಾರೋ ಕಿವಿಯಲ್ಲಿ ಮಾತಾಡಿದಂಥಾ ಅನುಭವ. ಏನೇನೋ ಧ್ವನಿಗಳು ಕೇಳುತ್ತವೆ. ಆಡಿಟರಿ ಹೆಲ್ಯುಸಿನೇಶನ್‌ ಅಂದರೆ ಶೂನ್ಯದಲ್ಲಿ ಶಬ್ದಗಳು ಕೇಳುತ್ತವೆ. ಯಾರೋ ಕರೆದ ಹಾಗಾಗೋದು, ಪೊಲೀಸರು ಮಾತನಾಡಿದ ಹಾಗಾಗೋದು, ಯಾರೋ ಬೈದ ಹಾಗಾಗೋದು, ಆತ್ಮಹತ್ಯೆ ಮಾಡ್ಕೋ ಅಂತ ಹೇಳಿದಂತಾಗೋದು. ಇದರಿಂದ ಹಲವಾರು ಜನ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಕಣ್ಣಿಗೆ ಏನೇನೋ ಆಕೃತಿಗಳು ಕಾಣುತ್ತವೆ. ಕೆಲವರಿಗೆ ಹಾವು ಕಾಣುತ್ತೆ. ಕೆಲವರಿಗೆ ಸಣ್ಣ ಕೀಟ, ಕ್ರಿಮಿಗಳು ಕಂಡ ಹಾಗಾಗುತ್ತೆ. ಹೆದರಿಕೊಂಡು ಓಡಲಿಕ್ಕೆ ಶುರು ಮಾಡುತ್ತಾರೆ. ಊಟ ಮಾಡಲಿಕ್ಕೆ ಹೋದರೆ ಊಟದಲ್ಲಿ ಇರುವೆ ಕಾಣುತ್ತೆ. ಜಿರಲೆ ಕಾಣುತ್ತೆ. ಏನೇನೆಲ್ಲ ಸಂಶಯ ಬರುತ್ತೆ. ಹೀಗಾದವರು ಹತ್ತಿರದ ವೈದ್ಯರ ಬಳಿ ಹೋದರೆ ಈ ಸಮಸ್ಯೆಗೆ ಟ್ರೀಟ್‌ ಮೆಂಟ್‌ ಕೊಡುತ್ತಾರೆ. ಮಡಿಕೇರಿಯಲ್ಲಿ ಅತಿವೃಷ್ಟಿಆದಾಗ ಆಗಿತ್ತು. ಈಗ ದೇಶಾದ್ಯಂತ ಈ ಸಮಸ್ಯೆ ಕಾಣಿಸಿಕೊಳ್ಳುವ ಅಪಾಯ ಇದೆ’ ಎನ್ನುತ್ತಾರೆ ಡಾ. ಭಂಡಾರಿ.

ಮದ್ಯ ಫ್ಯಾಕ್ಟರಿಯಲ್ಲಿ ಸ್ಯಾನಿಟೈಸರ್‌ ತಯಾರಿಕೆ ಆರಂಭಿಸಿದ ಶೇನ್ ವಾರ್ನ್!

ಸಡನ್ನಾಗಿ ಹೀಗೆ ಮಾಡೋದರಿಂದ ಸಮಸ್ಯೆಗಳಾಗುವುದು ನಿಜ. ಆದರೆ ಕುಡಿತ ಬಿಡಲು ಇದನ್ನೇ ಉತ್ತಮ ಅವಕಾಶ ಅಂದುಕೊಳ್ಳಬಹುದು. ಡಾಕ್ಟರ್‌ ಹೇಳುವ ಪ್ರಕಾರ ದಿನಾ ಸ್ವಲ್ಪ ಕುಡಿಯುತ್ತಿದ್ದವರಿಗೆ ಮೂರ್ನಾಲ್ಕು ದಿನ ಕಷ್ಟಆಗುತ್ತೆ. ಅವರು ಧೈರ್ಯ ಮಾಡಿ ಎದುರಿಸಿದರೆ ಸರಿಹೋಗುತ್ತೆ. ಆದರೆ ಅಸಹಜ ವರ್ತನೆ, ಪಿಟ್ಸ್‌ ಇತ್ಯಾದಿ ಇದ್ದರೆ ಖಂಡಿತಾ ಆಸ್ಪತ್ರೆಗೆ ಹೋಗಲೇ ಬೇಕು. ವೈದ್ಯಕೀಯ ನೆರವಿನಿಂದ ಅವರು ಮೂರ್ನಾಲ್ಕು ವಾರಗಳಲ್ಲಿ ಮದ್ಯ ಮುಕ್ತರಾಗಬಹುದು. ವೈದ್ಯಕೀಯದಲ್ಲೂ ಇದಕ್ಕೆ ಒಂದಿಷ್ಟುಮೆಡಿಸಿನ್‌ ಗಳಿವೆ. ಹೀಗಾಗಿ ಕುಡಿತದಿಂದ ಹೊರಬರೋದಕ್ಕೆ ಇದು ಬೆಸ್ಟ್‌ ಟೈಮ್‌. ಈ ಅವಕಾಶ ಮಿಸ್‌ ಮಾಡಬೇಡಿ.

ಇಂಥ ಸಮಯದಲ್ಲಿ ಕುಟುಂಬದವರು ಏನ್ಮಾಡಬೇಕು?

- ಈ ಸಮಯದಲ್ಲಿ ನಿರ್ಜಲೀಕರಣ ಸಮಸ್ಯೆ ಆಗದ ಹಾಗೆ ದ್ರವಾಹಾರ ಹೆಚ್ಚೆಚ್ಚು ಕೊಡಬೇಕು. ನೀರಿನ ಜೊತೆಗೆ ನಿಂಬೆ ರಸ ಕೊಡಬಹುದು. ಜ್ಯೂಸ್‌ ಕೊಡಬಹುದು.

- ಅವರಿಂದ ತುಂಬ ಕೆಲಸ ಮಾಡಿಸೋದಾಗಲೀ, ಪ್ರಯಾಣ ಮಾಡಿಸೋದಾಗಲಿ ಮಾಡಬಾರದು.

ಮದ್ಯ ಸಿಗದೆ ಖಿನ್ನತೆಯಿಂದ ವ್ಯಕ್ತಿ ಆತ್ಮಹತ್ಯೆ

ತಿರುವನಂತಪುರಂ: ಕೊರೋನಾ ತಡೆಯಲು ದೇಶಾದ್ಯಂತ ಲಾಕ್‌ ಡೌನ್‌ ಆಗಿದ್ದು, ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ. ಹೀಗಿರುವಾಗ ವ್ಯಕ್ತಿಯೊಬ್ಬ ಮದ್ಯ ಇಲ್ಲದೆ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತ್ರಿಸೂರ್‌ ಜಿಲ್ಲೆಯ ಕುನ್ನಾಕುಲಂನಲ್ಲಿ ನಡೆದಿದೆ.

ಸನೋಜ್‌ ಕುಲಂಗಾರಾ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೇರಳ ಸರ್ಕಾರ ಸಂಪೂರ್ಣವಾಗಿ ಮದ್ಯ ಬ್ಯಾನ್‌ ಮಾಡಿದೆ. ಹೀಗಿರುವಾಗ ಸನೋಜ್‌ ಮದ್ಯ ಸೇವಿಸದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದಕ್ಕೂ ಮೊದಲು ನಾಲ್ಕು ಮಂದಿ ಮದ್ಯ ಸೇವಿಸದೇ ಖಿನ್ನತೆಗೆ ಒಳಗಾಗಿ ತಿರುವನಂತಪುರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಎಂದು ತಿಳಿಸಿದ್ದಾರೆ.

click me!