ಕೊರೋನಾ ಶಂಕೆ: ಚಿಕಿತ್ಸೆ ಸಿಗದೆ ಕಾಮಾಲೆ ರೋಗಿ ಸಾವು

By Kannadaprabha NewsFirst Published Apr 4, 2020, 7:25 AM IST
Highlights

ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಕಾಮಾಲೆ ರೋಗದಿಂದ ಬಳಲುತ್ತಿದ್ದ  ವ್ಯಕ್ತಿ ಸಾವು| ಧಾರವಾಡದಲ್ಲಿ ನಡೆದ ಘಟನೆ| ಒಂಬತ್ತು ತಿಂಗಳ ಹಿಂದೆಷ್ಟೇ ಮದುವೆಯಾಗಿದ್ದ ವ್ಯಕ್ತಿ| ಚಿಕಿತ್ಸೆ ನೀಡಬೇಕಾದ ಕಿಮ್ಸ್‌ ವೈದ್ಯರು ಕೊರೋನಾ ವರದಿಗಾಗಿ ಕಾದಿರುವುದು ಸರಿಯಲ್ಲ| 

ಧಾರವಾಡ(ಏ.04): ಕಾಮಾಲೆ ರೋಗದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಕೊರೋನಾ ಬಂದಿದೆ ಎಂದು ವೈದ್ಯರು ತಪ್ಪು ಅಂದಾಜು ಮಾಡಿದ ಹಿನ್ನೆಲೆಯಲ್ಲಿ ಒಂಬತ್ತು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್‌ ಇಹಲೋಕ ತ್ಯಜಿಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ದೊಡ್ಡನಾಯಕನಕೊಪ್ಪ ಬಡಾವಣೆಯ ಎಂಜಿನಿಯರ್‌ ರಾಜು ನಾಯಕ (30) ಮೃತರಾದ ದುರ್ದೈವಿ.

ರಾಜು ಅವರು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇತ್ತೀಚೆಗೆ ಪುಣೆಯಿಂದ ಧಾರವಾಡಕ್ಕೆ ಬಂದಿದ್ದರು. ಜ್ವರ, ನೆಗಡಿ, ಕೆಮ್ಮು ಹಾಗೂ ನ್ಯುಮೋನಿಯಾ ರೋಗಲಕ್ಷಣಗಳು ಇದ್ದ ಕಾರಣ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದರು. ಹುಬ್ಬಳ್ಳಿಯ ಕಿಮ್ಸ್‌ಗೆ ಹೋಗಿ ಚಿಕಿತ್ಸೆ ಪಡೆಯಿರಿ ಎಂದು ಎಸ್‌ಡಿಎಂ ವೈದ್ಯರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಕಿಮ್ಸ್‌ಗೆ ಹೋಗಿದ್ದರು.

COVID-19 ವಿರುದ್ಧ ಹೋರಾಟ: ಧಾರವಾಡ ಐಐಟಿಯಿಂದ ಕೊರೋನಾ ಮುಖ ಕವಚ!

ಕಿಮ್ಸ್‌ನಲ್ಲಿ ವೈದ್ಯರು ತಪಾಸಣೆಗೆ ಒಳಪಡಿಸಿ ರಕ್ತ ಮಾದರಿ ಹಾಗೂ ಗಂಟಲಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ವರದಿ ಬರಲು ಮೂರು ದಿನ ಕಾಯ್ದು ನಂತರದಲ್ಲಿ ತೀರ್ಮಾನಿಸುವುದಾಗಿ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಅಷ್ಟರಲ್ಲಿ ರಕ್ತ ತಪಾಸಣೆ ಸಂದರ್ಭದಲ್ಲಿ ರಾಜು ಅವರಿಗೆ ಕಾಮಾಲೆ ರೋಗ ಪತ್ತೆಯಾಗಿದ್ದು, ನಂತರದಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಮೃತರಾಗಿದ್ದಾರೆ ಎಂದು ರಾಜು ಅವರ ತಂದೆ ನಿವೃತ್ತ ಪಿಎಸ್‌ಐ ಚಂದ್ರಕಾಂತ ನಾಯಕ್‌ ಪ್ರಸ್ತುತ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೋನಾ ಪರಿಣಾಮ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಬದಲು ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸುತ್ತಿದ್ದಾರೆ. ರಕ್ತದಲ್ಲಿ ಕಾಮಾಲೆ ರೋಗ ಇರುವುದು ಪತ್ತೆಯಾದರೂ ಚಿಕಿತ್ಸೆ ನೀಡಬೇಕಾದ ಕಿಮ್ಸ್‌ ವೈದ್ಯರು ಕೊರೋನಾ ವರದಿಗಾಗಿ ಕಾದಿರುವುದು ಸರಿಯಲ್ಲ. ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿಯ ಕಿಮ್ಸ್‌ ವೈದ್ಯರಿಗೆ ಹಾಗೂ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಹೋರಾಟಗಾರ ಬಸವರಾಜ ಕೊರವರ ಆಗ್ರಹಿಸಿದರು.
 

click me!