ನಿಷೇಧ ಮಧ್ಯೆ 6 ಜಿಲ್ಲೆಗಳಲ್ಲಿ ಸಾಮೂಹಿಕ ನಮಾಜ್‌: ಉದ್ರಿಕ್ತರಿಂದ ಚಪ್ಪಲಿ, ಕಲ್ಲು ತೂರಾಟ!

By Kannadaprabha NewsFirst Published Apr 4, 2020, 7:18 AM IST
Highlights

ನಿಷೇಧ ಮಧ್ಯೆ 6 ಜಿಲ್ಲೆಗಳಲ್ಲಿ ಸಾಮೂಹಿಕ ನಮಾಜ್‌!| 180ಕ್ಕೂ ಹೆಚ್ಚು ಜನರ ವಿರುದ್ಧ ಕೇಸ್‌| ಹುಬ್ಬಳ್ಳಿ: ಉದ್ರಿಕ್ತರಿಂದ ಚಪ್ಪಲಿ, ಕಲ್ಲು ತೂರಾಟ| ಪೊಲೀಸರು ಸೇರಿ 10ಕ್ಕೂ ಹೆಚ್ಚು ಜನರಿಗೆ ಗಾಯ| ಹುಬ್ಬಳ್ಳಿ, ಬಾಗಲಕೋಟೆ, ಉತ್ತರ ಕನ್ನಡ ಸೇರಿ 6 ಜಿಲ್ಲೆಗಳ 8 ಮಸೀದಿಗಳಲ್ಲಿ ನಮಾಜ್‌| ಶಿವಮೊಗ್ಗದಲ್ಲಿ ನಮಾಜ್‌ನಲ್ಲಿ ತೊಡಗಿದ್ದ 77ಕ್ಕೂ ಹೆಚ್ಚು ಮಂದಿಯಲ್ಲಿ 7 ಮಂದಿಗೆ ಜ್ವರ

ಬೆಂಗಳೂರು(ಏ.04): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲಾ ಧರ್ಮದವರಿಗೂ ಸಾಮೂಹಿಕ ಪೂಜೆ, ಪ್ರಾರ್ಥನೆಗೆ ನಿಷೇಧವಿದ್ದರೂ ಹುಬ್ಬಳ್ಳಿ, ಬಾಗಲಕೋಟೆ, ಉತ್ತರ ಕನ್ನಡ ಸೇರಿ ರಾಜ್ಯದ ಆರು ಜಿಲ್ಲೆಗಳ ಕನಿಷ್ಠ 8 ಮಸೀದಿಗಳಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆಗಳು ನಡೆದಿದ್ದು, ಈ ಸಂಬಂಧ 180ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಹುಬ್ಬಳ್ಳಿಯಲ್ಲಿ ಸಾಮೂಹಿಕ ಸಮಾಜ್‌ ತಡೆದು, ಬುದ್ಧಿವಾದ ಹೇಳಲು ಮುಂದಾದ ಪೊಲೀಸರ ಮೇಲೆ ಕಲ್ಲು-ಚಪ್ಪಲಿ ತೂರಲಾಗಿದ್ದು, ಘಟನೆಯಲ್ಲಿ ಪೊಲೀಸರು ಸೇರಿ 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಇನ್ನು ಶಿವಮೊಗ್ಗದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ 77ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿದಾಗ, 7 ಮಂದಿ ತೀವ್ರ ಜ್ವರದಿಂದ ಬಳಲುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಏತನ್ಮಧ್ಯೆ, ಬಾಗಲಕೋಟೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಮುಂದಾದ ಯುವಕರಿಗೆ ಸ್ಥಳೀಯರೇ ಧರ್ಮದೇಟು ನೀಡಿದ ಪ್ರಸಂಗವೂ ನಡೆದಿದೆ.

ಕೊರೋನಾ ಅಟ್ಟಹಾಸ: ಅಮೆರಿಕದಲ್ಲಿ ಒಂದು ಲಕ್ಷ ಶವಬ್ಯಾಗ್‌ ಸಿದ್ಧತೆ..!

ಹುಬ್ಬಳ್ಳಿಯ ಅರಳಿಕಟ್ಟಿಓಣಿಯ ಮಸೀದಿಯಲ್ಲಿ ಮಧ್ಯಾಹ್ನ ಸಾಮೂಹಿಕ ಪ್ರಾರ್ಥನೆ ತಡೆದ ಪೊಲೀಸರ ಜತೆಗೆ ಯುವಕರು ವಾಗ್ವಾದಕ್ಕಿಳಿದ ಹಿನ್ನೆಲೆಯಲ್ಲಿ ಮಸೀದಿಯ ಮುತುವಲ್ಲಿ, ಮೌಲಾನಾ ಸೇರಿ ಮೂವರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ವಿಷಯ ತಿಳಿದು ಕಾಂಗ್ರೆಸ್‌ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು ಠಾಣೆಗೆ ತೆರಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಮೂವರನ್ನು ವಾಪಸ್‌ ಬಿಡಲು ಸ್ಥಳಕ್ಕೆ ಬಂದಾಗ ಮಹಿಳೆಯರು, ಯುವಕರ ಗುಂಪು ರಸ್ತೆಗೆ ಅಡ್ಡವಾಗಿ ಕಲ್ಲು, ಇಟ್ಟಿಗೆಗಳನ್ನು ಇಟ್ಟು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡದ್ದಕ್ಕೆ ತಗಾದೆ ತೆಗೆದಿದ್ದಾರೆ. ನಂತರ ಏಕಾಏಕಿ ಕಲ್ಲು, ಚಪ್ಪಲಿ ತೂರಾಟಿದ್ದಾರೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದು, ಘಟನೆಯಲ್ಲಿ ಪೊಲೀಸರು ಸೇರಿ 10ಕ್ಕೂ ಮಂದಿಗೆ ಗಾಯಗಳಾಗಿದೆ. ಈ ಸಂಬಂಧ 60 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಜ್ವರದಲ್ಲೇ ನಮಾಜ್‌:

ದೆಹಲಿಯ ನಿಜಾಮುದ್ದೀನ್‌ ಘಟನೆ ದೇಶಾದ್ಯಂತ ಆತಂಕ ಸೃಷ್ಟಿಸಿರುವ ನಡುವೆಯೇ ಶಿವಮೊಗ್ಗದ ಆಯನೂರು ಸಮೀಪದ ಕೆಸವಿನಕಟ್ಟೆಗ್ರಾಮದ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದ 77 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಗ್ಯ ಇಲಾಖೆಯವರನ್ನು ಕರೆಸಿ ಮಸೀದಿಯಲ್ಲಿದ್ದವರ ತಪಾಸಣೆ ನಡೆಸಿದಾಗ 7 ಮಂದಿ ತೀವ್ರ ಜ್ವರದಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಇನ್ನು ಶಿವಮೊಗ್ಗ ನಗರದ ಜೆ.ಸಿ.ನಗರ ರಸ್ತೆಯಲ್ಲಿ ನಮಾಜ್‌ಗೆ ಮುಂದಾಗಿದ್ದವರಲ್ಲಿ ಐವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ದಿಲ್ಲಿ ಆಸ್ಪತ್ರೆಗಳಲ್ಲಿ ತಬ್ಲೀಘಿ ಸದಸ್ಯರ ಹುಚ್ಚಾಟ, ವೈದ್ಯರ ಜೊತೆಗೆ ದುರ್ವರ್ತನೆ!

ಗ್ರಾಮಸ್ಥರಿಂದ ಗೂಸಾ: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾಡರಕೊಪ್ಪದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದದವರಿಗೆ ಸ್ಥಳೀಯರೇ ಧರ್ಮದೇಟು ನೀಡಿದ್ದು, ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಮಧ್ಯೆ, ಬಾಗಲಕೋಟೆ ನವನಗರದ ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದ 7 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಬಳ್ಳಾರಿಯ ಹಗರಿಬೊಮ್ಮನಹಳ್ಳಿಯ ಬಲ್ಲಾಹುಣಸೆ ಗ್ರಾಮದ ಮಸೀದಿಯಲ್ಲಿ 23, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ 15 ಮತ್ತು ಶಿರಸಿಯಲ್ಲಿ ಮೂವರು ಹಾಗೂ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಮಸೀದಿ ಪಕ್ಕದ ಮನೆಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

click me!