ಬಿಪಿಎಲ್ ಕಾರ್ಡ್‌ದಾರರ ಮನೆಗೇ ಅಕ್ಕಿ, ಬೇಳೆ| ಜನ ಅಂಗಡಿಗೆ ಬರದಂತೆ ತಡೆಯಲು ಕ್ರಮ-ಡಿಸಿಗಳಿಗೆ ಸಿಎಂ ಸೂಚನೆ|ಬ್ಯಾಂಕ್ ಸಾಲ ಮತ್ತು ಕಿರು ಹಣಕಾಸು ಸಂಸ್ಥೆಗಳ ಸಾಲದ ಕಂತು ಪಾವತಿ ಮುಂದೂಡಲು ಕ್ರಮ|
ಬೆಂಗಳೂರು(ಮಾ.27): ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ಮಾಡಿರುವ ಕಾರಣ ಬಡವರಿಗೆ ಸಮಸ್ಯೆಯಾಗದಿರಲಿ ಎಂಬ ಉದ್ದೇಶದಿಂದ ಬಿಪಿಎಲ್ ಕಾರ್ಡುದಾರರ ಮನೆಗಳಿಗೇ ಪಡಿತರ ಪೂರೈಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜತೆ ಕೊರೋನಾ ವೈರಸ್ ಹರಡದಂತೆ ಕೈಗೊಂಡಿರುವ ಕ್ರಮ, ಲಾಕ್‌ಡೌನ್ ಆದೇಶದ ಅನುಷ್ಠಾನ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಿರುವ ಕುರಿತು ಮಾಹಿತಿ ಪಡೆದುಕೊಳ್ಳಲು ನಡೆಸಿದ ವಿಡಿಯೋ ಸಂವಾದದಲ್ಲಿ ಈ ಸೂಚನೆ ನೀಡಿದರು. ಪಡಿತರಕ್ಕಾಗಿ ಜನರು ಅಂಗಡಿಗಳಿಗೆ ಬರುವುದನ್ನು ತಪ್ಪಿಸಲು ಅವರ ಮನೆಗೇ ಪಡಿತರ ಪೂರೈಕೆ ವ್ಯವಸ್ಥೆ ಮಾಡಬೇಕು. ಅಗತ್ಯ ವಸ್ತುಗಳ ಸಾಗಾಣಿಕೆ ಸುಗಮವಾಗಿ ನಡೆಯುವಂತೆ ಕ್ರಮ ವಹಿಸಬೇಕು ಎಂದು ಹೇಳಿದರು.
ಕೋರೋನಾ ಜಾಗೃತಿ ಮೂಡಿಸಿದ್ದ ತಹಸೀಲ್ದಾರ್ ಹೃದಯಾಘಾತದಿಂದ ಸಾವು
ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ರೀತಿ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕು. ಜನರು ತಾವು ನೆಲೆಸಿರುವ ಪ್ರದೇಶದಲ್ಲಿನ ಅಂಗಡಿಯಲ್ಲಿಯೇ ವಸ್ತುಗಳನ್ನು ಖರೀದಿಸಬೇಕು. ಬೇರೆ ಪ್ರದೇಶಗಳಿಗೆ ಹೋಗಬಾರದು. ತಮ್ಮ ಮನೆಯ ಬಳಿಯೇ ಅಗತ್ಯ ವಸ್ತುಗಳನ್ನು ಖರೀದಿಸುವುದರಿಂದ ಸಣ್ಣ ವ್ಯಾಪಾರಿಗಳಿಗೂ ಅನುಕೂಲವಾಗಲಿದೆ ಎಂಬುದನ್ನು ಜನರಿಗೆ ತಿಳಿಸಬೇಕು. ಅಲ್ಲದೇ, ನಗರದ/ಪಟ್ಟಣದ ಕೇಂದ್ರ ಭಾಗಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಲಿದೆ. ಹೆಚ್ಚು ಜನಸಂದಣಿಯಾಗದಂತೆ ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು. ಕೇವಲ ಪಾಸ್ ಇದ್ದವರಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗುವುದು. ಇದೆಲ್ಲದರ ನಡುವೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರ ವಹಿಸಬೇಕು. ರಸ್ತೆಗಳಲ್ಲಿ ಅನಗತ್ಯವಾಗಿ ಜನರು ಓಡಾಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು. ಅಗತ್ಯ ಸೇವೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ಕ್ಲಿನಿಕ್ ಬಂದ್ ಮಾಡುವಂತಿಲ್ಲ:
ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು. ಇಡೀ ರಾಜ್ಯದಲ್ಲಿ ಖಾಸಗಿ ಕ್ಲಿನಿಕ್‌ಗಳನ್ನು ಬಂದ್ ಮಾಡುವ ಹಾಗಿಲ್ಲ. ಕ್ಲಿನಿಕ್ ಬಂದ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಲಾಠಿ ಇಲ್ಲದೆ ಪೊಲೀಸ್ರು ಕೆಲಸ ಮಾಡಬೇಕು: ಭಾಸ್ಕರ್ ರಾವ್ ಆದೇಶ
ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಹಾಸಿಗೆ ಕೋವಿಡ್‌ಗಾಗಿ ಮೀಸಲಿಡಬೇಕು. ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವವರಿಗೆ ಮನೆ/ಪಿ.ಜಿ/ಹಾಸ್ಟೆಲ್ ಮಾಲಿಕರಿಂದ ಯಾವುದೇ ರೀತಿಯ ಕಿರುಕುಳ ಆಗದಂತೆ ಎಚ್ಚರ ವಹಿಸಬೇಕು. ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅಂತಹ ಮಾಲಿಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಸೋಂಕಿನ ನಿರ್ವಹಣೆ ವಿಚಾರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಧಿಕಾರಿಗಳು, ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ನರ್ಸ್, ಪೌರಕಾರ್ಮಿಕರು ಕರೋನಾ ನಿವಾರಣೆಗೆ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ಅವರಿಗೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸಲು ಕ್ರಮ ವಹಿಸುವಂತೆ ತಿಳಿಸಿದರು.
ಸಾಲದ ಇಎಂಐ ಪಾವತಿ ಮುಂದೂಡಿ:
ಬ್ಯಾಂಕ್ ಸಾಲ ಮತ್ತು ಕಿರು ಹಣಕಾಸು ಸಂಸ್ಥೆಗಳ ಸಾಲದ ಕಂತು ಪಾವತಿ ಮುಂದೂಡಲು ಕ್ರಮ ವಹಿಸಬೇಕು. ರೈತರಿಗೆ ಕೃಷಿ ಬಳಕೆಗೆ ಅಗತ್ಯವಾದ ಕೀಟನಾಶಕ, ರಸಗೊಬ್ಬರ ಮತ್ತಿತರ ಕೃಷಿ ಪರಿಕರಗಳು ಲಭ್ಯವಾಗುವಂತೆ ಕ್ರಮ ವಹಿಸಬೇಕು. ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಸಾಕಷ್ಟುಅನುದಾನ ಲಭ್ಯವಿದ್ದು, ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ವೈದ್ಯಕೀಯ ಕಾಲೇಜುಗಳ ಸಹಕಾರ ಪಡೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಸುರೇಶ್ ಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ಮತ್ತೆ 3 ಸಹಾಯವಾಣಿ
ಕೊರೋನಾ ವೈರಸ್ ಕುರಿತು ಮಾಹಿತಿ ಇತ್ಯಾದಿಗಳ ಬಗ್ಗೆ ಮಾತ್ರ ತಿಳಿದುಕೊಳ್ಳಲು ಪ್ರಸ್ತುತ ಸಹಾಯವಾಣಿ 104 ಇದೆ. ಗುರುವಾರ ರಾತ್ರಿಯಿಂದ ಕೋವಿಡ್-19 ಹೊರತುಪಡಿಸಿ ಸಾಮಗ್ರಿಗಳು ಲಭ್ಯವಾಗದೇ ಇದ್ದಲ್ಲಿ ಅಥವಾ ಬೇರೆ ರೀತಿಯ ಸಹಾಯ ಪಡೆಯಲು ಹೊಸದಾಗಿ ಮೂರು ಸಹಾಯವಾಣಿ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. 155215 (ವಾಯ್ಸ್ ಕಾಲ್, ಟೋಲ್ ಫ್ರೀ) ಹಾಗೂ ವಾಟ್ಸ್‌ಆ್ಯಪ್ 9333333684/ 9777777684 ಮೂಲಕ ಸಂಪರ್ಕಿಸಬಹುದು.