ಪೇಪರ್ ಕವರ್‌ನಲ್ಲಿ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಪತ್ಯೇಕವಾಗಿ ನೀಡವಂತೆ ಮನವಿ ಮಾಡಿದರೂ ಸಾರ್ವಜನಿಕರು ಮಿಶ್ರ ಕಸದಲ್ಲಿ ನೀಡುತ್ತಿರುವುದರಿಂದ ಬಿಬಿಎಂಪಿ ಪೌರಕಾರ್ಮಿಕರು ಆತಂಕಗೊಂಡಿದ್ದು, ಕೊರೋನಾ ಹಬ್ಬುವ ಭೀತಿಗೆ ಗುರಿಯಾಗಿದ್ದಾರೆ.
ಬೆಂಗಳೂರು(ಮಾ.24): ಪೇಪರ್ ಕವರ್‌ನಲ್ಲಿ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಪತ್ಯೇಕವಾಗಿ ನೀಡವಂತೆ ಮನವಿ ಮಾಡಿದರೂ ಸಾರ್ವಜನಿಕರು ಮಿಶ್ರ ಕಸದಲ್ಲಿ ನೀಡುತ್ತಿರುವುದರಿಂದ ಬಿಬಿಎಂಪಿ ಪೌರಕಾರ್ಮಿಕರು ಆತಂಕಗೊಂಡಿದ್ದು, ಕೊರೋನಾ ಹಬ್ಬುವ ಭೀತಿಗೆ ಗುರಿಯಾಗಿದ್ದಾರೆ.
ದಿನದಿಂದ ದಿನಕ್ಕೆ ನಗರದಲ್ಲಿ ಕೊರೋನಾ ಭೀತಿ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಒಳಗಾಗಿರುವ ಸಾರ್ವಜನಿಕರಲ್ಲಿ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ, ಬಳಕೆ ಮಾಡಿದ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಅನ್ನು ಸಾರ್ವಜನಿಕರು ಕಸದಲ್ಲಿ ಮಿಶ್ರಣ ಮಾಡಿ ಪೌರಕಾರ್ಮಿಕರಿಗೆ ನೀಡುತ್ತಿದ್ದಾರೆ. ಇದರಿಂದ ಪ್ರತಿನಿತ್ಯ ಕಸ ವಿಲೇವಾರಿ ಮಾಡುವ ಪೌರಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಸೆಕ್ಷನ್ 144: ಬಾರ್ ಓಪನ್ ಮಾಡಿದ್ರೆ ಲೈಸೆನ್ಸ್ ರದ್ದು..!
ಬಿಬಿಎಂಪಿಯ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಹಾಗೂ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಮ್ಮ ಟ್ವೀಟರ್ ಖಾತೆಯಲ್ಲಿ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್‌ಗಳನ್ನು ಪೇಪರ್ ಕವರ್‌ನಲ್ಲಿ ಸುತ್ತಿ ಪ್ರತ್ಯೇಕವಾಗಿ ನೀಡುವಂತೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಸಾರ್ವಜನಿಕರು ಹಸಿ ಮತ್ತು ಒಣ ತ್ಯಾಜ್ಯದಲ್ಲಿ ಮಿಶ್ರಣ ಮಾಡಿ ಕೊಡುತ್ತಿದ್ದಾರೆ.
ಈ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್, ಯಾವುದೇ ಕಾರಣಕ್ಕೂ ಮಾಸ್ಕ್ ಹಾಗೂ ಗ್ಲೌಸ್ ಸೇರಿದಂತೆ ವೈದ್ಯಕೀಯ ತ್ಯಾಜ್ಯಗಳನ್ನು ನೇರವಾಗಿ ನೀಡಿದರೆ ತೆಗೆದುಕೊಳ್ಳಬೇಡಿ ಎಂದು ಪೌರಕಾರ್ಮಿಕರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸಬಾರದು. ಈ ರೀತಿ ಮಾಡುವುದರಿಂದ ಪೌರಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ, ಮಾಸ್ಕ್, ಗ್ಲೌಸ್‌ಗಳನ್ನು ಪೇಪರ್‌ನಲ್ಲಿ ಸುತ್ತಿ ನೀಡಿದರೆಮಾತ್ರ ಸ್ವೀಕರಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಾಸ್ಕ್, ಗ್ಲೌಸ್ ಹೀಗೆ ಕೊಡಿ!
ಬಳಸಿದ ಮಾಸ್ಕ್, ಹ್ಯಾಂಡ್ ಗ್ಲೌಸ್, ಟಿಶುಪೇಪರ್, ವೈದ್ಯಕೀಯ ಚಿಕಿತ್ಸೆಗೆ ಬಳಕೆ ಮಾಡಿದ ಹತ್ತಿ, ಬ್ಯಾಂಡೇಜ್ ಅನ್ನು ಒಂದು ಕಾಗದದ ಕವರ್ ಅಥವಾ ಪೇಪರ್‌ನಲ್ಲಿ ಸುತ್ತಿ ಪ್ರತ್ಯೇಕವಾಗಿ ಪೌರಕಾರ್ಮಿಕರಿಗೆ ನೀಡಬೇಕು. ಹಸಿ ಮತ್ತು ಒಣ ತ್ಯಾಜ್ಯದೊಂದಿಗೆ ಮಿಶ್ರಣ ಮಾಡಿ ನೀಡಬಾರದು.