ಕೊರೋನಾ ಜಾಗೃತಿಗಾಗಿ ಟಿಕ್ ಟಾಕ್ ವಿಡಿಯೋ/ ಬಂಟ್ವಾಳದ ಯುವಕನ ಹೊಸ ಹೊಸ ಆಲೋಚನೆಗೆ ಜನಮೆಚ್ಚುಗೆ/ ಟಿಕ್ ಟಾಕ್ ಮೂಲಕ ಕೊರೋನಾ ಜಾಗೃತಿ
ಮೌನೇಶ ವಿಶ್ವಕರ್ಮ
ಬಂಟ್ವಾಳ (ಮಾ. 30) ಸಮಯ ಕಳೆಯಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗುವವರೇ ಹೆಚ್ಚು. ಅದರಲ್ಲೂ ಹಾಸ್ಯ ಸನ್ನಿವೇಶಕ್ಕಾಗಿ ಟಿಕ್ ಟಾಕ್ ಆ್ಯಪ್ ಬಳಕೆ ಮಾಡುವವರೂ ಇದ್ದಾರೆ. ಆದರೆ ಬಂಟ್ವಾಳದ ಕುಟುಂಬವೊಂದು ಟಿಕ್ ಟಾಕ್ ಮೂಲಕ ಕೊರೋನಾ ವೈರಸ್ ಕುರಿತಾಗಿ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದೆ.
ತಾಲೂಕಿನ ಅನಂತಾಡಿ ಗ್ರಾಮದ ಮಾಮೇಶ್ವರದ ಸಂಕೇಶ ದಲ್ಲಿ ವಾಸ್ತವ್ಯ ವಿರುವ ಈ ಕುಟುಂಬದ ಯುವಕ ಧನರಾಜ್ ಆಚಾರ್ ಬೆಂಗಳೂರಿನಲ್ಲಿ ಕಿರುತೆರೆ ಚಾನೆಲ್ ನಲ್ಲಿ ಉದ್ಯೋಗಿಯಾಗಿದ್ದು, ಕೊರೋನಾ ಲಾಕ್ ಡೌನ್ ಹಿನ್ನೆಲೆಯ ರಜೆಯ ಕಾರಣಕ್ಕೆ ಊರಿಗೆ ಬಂದವನು ಮನೆಮಂದಿಯನ್ನೆಲ್ಲಾ ಸೇರಿಸಿಕೊಂಡು ಕೊರೋನಾ ಜಾಗೃತಿಯ ಟಿಕ್‌ಟಾಕ್ ದೃಶ್ಯಗಳನ್ನು ನಿರ್ಮಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಟಿಕ್ ಟಾಕ್ ದೃಶ್ಯಾವಳಿಗಳ ಸಾರಾಂಶ ಇಂತಿದೆ..
ಪಾರ್ಕ್ ಗೆ ಬರುವ ಪ್ರೇಮಿಗಳು, ಅಲ್ಲಿಯ ಜನರು ಹೋಗುವಂತರ ಮಾಡಲು ಪಾರ್ಕ್ ನಲ್ಲಿ ಕೊರೋನಾ ಇದೆ ಎಂದು ಬೊಬ್ಬೆ ಹೊಡೆಯುತ್ತಾನೆ, ಪರಿಣಾಮ ಇದ್ದವರೆಲ್ಲಾ ಓಡಿಹೋಗುತ್ತಾರೆ.ಕೊನೆಗೆ ಪಾರ್ಕ್‌ನಲ್ಲಿ ಕೊರೋನಾ ಇದೆ ಎಂದುಸುಳ್ಳು ಸುದ್ದಿ ಹರಡಿಸಿದ ಪ್ರೇಮಿಯನ್ನು ಪೊಲೀಸರು ಬಂಧಿಸಿ ಲಾಕಪ್ ಗೆ ತಳ್ಳುತ್ತಾರೆ. ಕೊರೋನಾಬಗ್ಗೆ ಅಪಪ್ರಚಾರ ಬೇಡ ಎನ್ನುತ್ತದೆ ಈ ಟಿಕ್ ಟಾಕ್ ದೃಶ್ಯ.
ಕೊರೋನಾ ರಕ್ಕಸರು ಮನೆಯಿಂದ ಹೊರಗೆ ಕಾಯುತ್ತಿದ್ದಾರೆ.ಮನೆಯಿಂದಹೊರ ಹೋಗಬೇಡಿ ಲಕ್ಷ್ಮಣ ರೇಖೆ ಹಾಕಿಕೊಂಡು ಮನೆಯಲ್ಲಿರಿ ಎಂದು ಪ್ರಧಾನಿ ಮಾತುಗಳನ್ನು ಪಾಲಿಸುತ್ತಿದ್ದ ಗೃಹಿಣಿಯೊಬ್ಬಳಿಗೆ ಕೊರೋನಾ ರಕ್ಕಸರು ತರಕಾರಿಯ ಆಸೆ ತೋರಿಸಿ ಮನೆಯಿಂದ ಹೊರಬರುವಂತೆ ಮಾಡುತ್ತಾರೆ. ಅದರಂತೆ ಗೃಹಿಣಿ ಹೊರಬರುತ್ತಾಳೆ. ಆದರೆ ಹೊರಗೆ ಬರುವ ಗೃಹಿಣಿ ಮಾಸ್ಕ್ ಧರಿಸಿ, ಕೈಗಳನ್ನು ಸ್ಯಾನಿಟೈಸರ್ ನಿಂದ ಶುದ್ಧಮಾಡುವ ಆರೋಗ್ಯ ಇಲಾಖೆಯ ಸೂಚನೆ ಪಾಲಿಸುತ್ತಾಳೆ, ಆಗ ಕೊರೋನಾ ರಕ್ಕಸನೇ ಹೆದರಿ ಓಡುವ ಟಿಕ್ ಟಾಕ್ ಕೂಡ ಕೆಲವೇ ಸೆಕೆಂಡ್ ಗಳಲ್ಲಿ ಅಗಾಧ ಜಾಗೃತಿ ಸಂದೇಶ ನೀಡುತ್ತದೆ.
ಕೊರೋನಾ ಅಬ್ಬರದ ನಡುವೆ ದಾವಣಗೆರೆ ಎಸ್ ಪಿ ಎಡವಟ್ಟು
ಲಾಕ್ ಡೌನ್ ನ ಆದೇಶ ಇದ್ದರೂ ಮನೆಯಿಂದ ಹೊರಗೆ ಹೋಗುತ್ತೇನೆಂದು ಮನೆಯ ಮಗ ತಾಯಿಯಲ್ಲಿ ಹೇಳುತ್ತಾನೆ.ಅದಕ್ಕೆ ಅವನ ಸಹೋದರಿ ಬೆಂಬಲ ಸೂಚಿಸಿ, ಏನಾದ್ರೂ ತಿಂದು ಬರಲಿ ಎನ್ನುತ್ತಾಳೆ. ತಂಗಿಗೆ ಥ್ಯಾಂಕ್ಸ್ ಹೇಳುವ ಅಣ್ಣ, ತಾಯಿಯ ಮಾತು ಮೀರಿ ರಸ್ತೆಗಿಳಿಯುತ್ತಾನೆ. ಲಾಕ್ ಡೌನ್ ಉಲ್ಲಂಘಿಸಿ ದ ಕಾರಣಕ್ಕೆ ಪೊಲೀಸರ ಲಾಠಿ ಏಟನ್ನು ತಿಂದು ವಾಪಾಸಾಗುತ್ತಾನೆ. ತಿಂದು ಬರುತ್ತಾನೆ ಎಂದ ತಂಗಿಯ ಮಾತಿನ ತಾತ್ಪರ್ಯ ಅರಿತು ತಾಯಿ ನಗುತ್ತಾಳೆ. ಕೊನೆಯಲ್ಲಿ ಲಾಕ್ ಡೌನ್ ಉಲ್ಲಂಘಿಸಬೇಡಿ ಎನ್ನುವ ಸಂದೇಶ ನೀಡಲಾಗಿದೆ.
ಕೊರೋನಾ ಬರುವ ಮೊದಲು ಸಾಕುನಾಯಿಯನ್ನು ಮನೆಯಲ್ಲಿ ಕಟ್ಟಿಹಾಕಿ ಯುವಕ ಎಲ್ಲೆಂದರಲ್ಲಿ ಆಡುತ್ತಿದ್ದ, ಅದೇ ಕೊರೋನ ಬಂದ ಬಳಿಕ ಮನೆಯಲ್ಲೇ ಕುಳಿತ್ತಿದ್ದ, ಆದರೆ ಮನೆಯ ಸಾಕುನಾಯಿ ಎಲ್ಲೆಂದರಲ್ಲಿ ಆಡುತ್ತಿತ್ತು. ಈ ದೃಶ್ಯದ ಮೂಲಕ ಮನುಷ್ಯನ ಈಗಿನ ಸಾಮಾಜಿಕ ಸ್ಥಿತಿಯನ್ನು ಮನೋಜ್ಞವಾಗಿ ಬಿಂಬಿಸಲಾಗಿದೆ.
ಉಳಿದಂತೆ ಕೊರೋನಾ ಕುರಿತಾಗಿ ಕೆಮ್ಮುವ ದನಿಯ ರಿಂಗ್ ಟೋನ್ ಬಗ್ಗೆ, ಮನೆಯೊಳಗೇ ಇದ್ದು ವರ್ಕ್ ಫ್ರಮ್ ಹೋಮ್ ಗೆ ಆದ್ಯತೆ ಗೆ ಒತ್ತು ನೀಡುವ , ಗೋ ಕೊರೋನಾ ಎಂದು ಪ್ರತಿಭಟಿಸುವರ ಬಗ್ಗೆ ಹಾಗೂ ಮಾಸ್ಕ್ ಹಾಕಿ ನಾಳೆ ಎಂದು ಬರೆದು ತಿರುಗಾಡುವ ವ್ಯಕ್ತಿಗಳ ಕುರಿತಾಗಿಯೂ ಮಾಡಿರುವ ವಿಡಿಯೋಗಳು ಗಮನಸೆಳೆದಿವೆ.
ಮನೆಯೊಳಗೇ ಇರಿ, ಮನೆಯವರ ಜೊತೆಗೇ ಇರಿ ಎನ್ನುವ ಕೊರೋನಾ ನಿಗ್ರಹದ ಎಲ್ಲಾ ನಿಯಮಗಳನ್ನು ಪಾಲಿಸುತ್ತಲೇ ಇರುವ ಈ ಕುಟುಂಬ ನಡೆಸುತ್ತಿರುವ ಟಿಕ್ ಟಾಕ್ ಜಾಗೃತಿ ನಿಜಕ್ಕೂ ಪ್ರಶಂಸನೀಯ.
ಧನರಾಜ್ ಚಮತ್ಕಾರ ಇದೇ ಮೊದಲಲ್ಲ:
ಪತ್ರಿಕೋದ್ಯಮದ ಪದವಿ ಪೂರೈಸಿರುವ ಧನರಾಜ್ ಮೈಸೂರು ರಂಗಾಯಣದಲ್ಲಿ ಎರಡು ವರ್ಷ ರಂಗಪಾಠವನ್ನೂ ಕರಗತ ಮಾಡಿಕೊಂಡವರು. ಖಾಸಗಿ ವಾಹಿನಿಯಲ್ಲಿ ಉದ್ಯೋಗಿಯಾಗಿರುವ ಇವರು, ತನ್ನಬೆಂಗಳೂರು ಸ್ನೇಹಿತರ ಜೊತೆ ಸೇರಿ ಈಗಾಗಲೇ ಅನೇಕ ಜಾಗೃತಿ ವಿಡಿಯೋಗಳನ್ನು ಮಾಡಿ ಗಮನ ಸೆಳೆದವರು. ಈವರೆಗೆ 188ಕ್ಕೂ ಅಧಿಕ ಟಿಕ್ ಟಾಕ್ ವಿಡಿಯೋ ನಿರ್ಮಿಸಿದ್ದಾರೆ.
ಪಂಪ್ವೆಲ್ ಫ್ಲೈಓವರ್ ಕುರಿತಾಗಿ ಇವರು ನಿರ್ಮಿಸಿದ ಟಿಕ್ ಟಾಕ್ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಮನ್ನಣೆಗೆ ಪಾತ್ರವಾಗಿತ್ತು, ಅಲ್ಲದೆ ಬಳಿಕ ಉಳ್ಳಾಲದ ಒಂಭತ್ತು ಎಕ್ರೆ ಮನೆಗಳು, ಸುಳ್ಯದ ಕರೆಂಟ್ ಸಮಸ್ಯೆ ಕುರಿತಾದ ಟಿಕ್ ಟಾಕ್ ದೃಶ್ಯಾವಳಿಗಳು ಆಡಳಿತ ವ್ಯವಸ್ಥೆ ಗೆ ಚುರುಕುಮುಟ್ಟಿಸಿತ್ತು. ಹೀಗೆ ಸಾಮಾಜಿಕ ಸಮಸ್ಯೆಗಳಿಗೆ ಟಿಕ್‌ಟಾಕ್ ಮೂಲಕವೂ ಬಿಸಿಮುಟ್ಟಿಸಲು ಸಾಧ್ಯ ಎನ್ನುವುದನ್ನು ಧನರಾಜ್ ಸಾಧಿಸಿ ತೋರಿಸುತ್ತಿದ್ದಾರೆ. ಅವರ ಎಲ್ಲಾ ಪ್ರಯತ್ನಗಳಿಗೆ ಆಲ್ ದಿ ಬೆಸ್ಟ್ ಎನ್ನೋಣ..