ಲಾಕ್‌ಡೌನ್‌ ಕ್ಯಾರೇ ಇಲ್ಲ: ಮಾರುಕಟ್ಟೆಗಳಲ್ಲಿ ಜನಜಂಗುಳಿ!

By Kannadaprabha NewsFirst Published Apr 1, 2020, 10:18 AM IST
Highlights

ಲಾಕ್‌ಡೌನ್‌ ಕ್ಯಾರೇ ಇಲ್ಲ: ಮಾರುಕಟ್ಟೆಗಳಲ್ಲಿ ಜನಜಂಗುಳಿ!| ಹಣ್ಣು-ತರಕಾರಿ, ದಿನಸಿಗಾಗಿ ಮುಗಿಬಿದ್ದ ಜನ| ಬೆಂಗಳೂರು, ಮಂಗಳೂರು ಸೇರಿ ಅನೇಕ ಜಿಲ್ಲೆಗಳಲ್ಲಿ ನಿಯಮ ಉಲ್ಲಂಘನೆ

ಬೆಂಗಳೂರು(ಏ.01): ಕೊರೋನಾ ವೈರಾಣು ಸೋಂಕು ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಷ್ಟೇ ಸದ್ಯಕ್ಕಿರುವ ಏಕೈಕ ಮದ್ದು. ಆದರೆ, ಲಾಕ್‌ಡೌನ್‌ ಘೋಷಣೆಯಾಗಿ ವಾರವಾದರೂ ಜನ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಸರ್ಕಾರ, ಪೊಲೀಸರು ಪದೇ ಪದೆ ನೀಡಿದ ಎಚ್ಚರಿಕೆ, ಮಾಡಿದ ಮನವಿಗಳ ಹೊರತಾಗಿಯೂ ಅಗತ್ಯ ವಸ್ತುಗಳ ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬೀಳುವುದು ಮುಂದುವರಿದಿದೆ. ಬೆಂಗಳೂರು, ದಕ್ಷಿಣ ಕನ್ನಡ, ಹಾವೇರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಮಂಗಳವಾರವೂ ಜನ ನಿಯಮ ಉಲ್ಲಂಘಿಸಿ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ.

ಉತ್ತರ ಕನ್ನಡ, ಧಾರವಾಡ, ಉಡುಪಿ, ಬೆಳಗಾವಿ, ಕಲಬುರಗಿ, ಚಿತ್ರದುರ್ಗ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ನಿಧಾನವಾಗಿ ಜನ ಸಾಮಾಜಿಕ ಅಂತರದ ನಿಯಮಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಮೈಸೂರಿನಲ್ಲೂ ನಿಯಮ ಮುರಿಯುತ್ತಿದ್ದ ಜನ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಮಂಡ್ಯದ ಹಳ್ಳಿಭಾಗಗಳನ್ನು ಹೊರತುಪಡಿಸಿ ಬಹುತೇಕ ಕಡೆ ನಿಯಮ ಪಾಲನೆಯಾಗುತ್ತಿದೆ. ಆದರೆ, ಬೆಂಗಳೂರು, ದಕ್ಷಿಣ ಕನ್ನಡ, ಹಾವೇರಿ, ಗದಗ, ಹಾವೇರಿ, ಬಾಗಲಕೋಟೆ, ಕೋಲಾರ ಜಿಲ್ಲೆಗಳಲ್ಲಿ ಅನೇಕ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದಿದ್ದ ಜನ ನಿಯಮ ಉಲ್ಲಂಘಿಸಿದ್ದು ಬೆಳಕಿಗೆ ಬಂದಿದೆ.

ಗದಗದಲ್ಲಿ ಬೆಳಗ್ಗೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಿರಾಣಿ ಅಂಗಡಿಯಲ್ಲಿ ಮಾಸ್ಕೂ ಇಲ್ಲ, ಸಾಮಾಜಿಕ ಅಂತರವೂ ಇಲ್ಲ. ಕೋಲಾರದಲ್ಲೂ ಸಂತೆ ಮೈದಾನ ಹಾಗೂ ಬಜಾರ್‌ ರಸ್ತೆಯಲ್ಲಿ ಜನಜಂಗುಳಿ ಇತ್ತು. ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಎಚ್ಚರಿಕೆ ಕೊಟ್ಟಬಳಿಕ ಪರಿಸ್ಥಿತಿ ಸುಧಾರಿಸಿತು. ಹಾಸನದಲ್ಲಿ ಜನಜಂಗುಳಿ ತಪ್ಪಿಸಲೆಂದೇ ನಿತ್ಯದ ಮಾರುಕಟ್ಟೆಬದಲು ಜಿಲ್ಲಾ ಕ್ರೀಡಾಂಗಣದಲ್ಲಿ ತರಕಾರಿ ಖರೀದಿಗೆ ವ್ಯವಸ್ಥೆ ಮಾಡಿದ್ದರೂ ಜನ ಅಂತರ ಕಾಯ್ದುಕೊಳ್ಳಬೇಕೆಂಬ ಸೂಚನೆಯನ್ನು ಪಾಲಿಸದೆ ಪೊಲೀಸರಿಗೆ ತಲೆನೋವು ತಂದಿಟ್ಟರು. ಮಾಮೂಲಿ ಸಂತೆಯಲ್ಲಿ ನಡೆಯುವಂತೆ ಮುಗಿಬಿದ್ದ ತರಕಾರಿಗಳನ್ನು ಖರೀದಿಸಿದರು.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳ ಬಂದ್‌ ಬಳಿಕ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದು, ಸುಳ್ಯ ಸೇರಿದಂತೆ ಹಲವು ತಾಲೂಕು ಕೇಂದ್ರಗಳಲ್ಲಿ ಜನ ಸಾಮಾಜಿಕ ಅಂತರದ ನಿಯಮ ಉಲ್ಲಂಘಿಸಿ ಖರೀದಿಗಿಳಿದರು.

ಮಂಗಳೂರು ನಗರದಲ್ಲಿ ಕೆಲವೇ ಕೆಲ ಅಂಗಡಿಗಳು ಹಾಗೂ ಸೂಪರ್‌ ಮಾರ್ಕೆಟ್‌ಗಳ ಹೊರಗೆ ಜನ ಶಿಸ್ತಿನಿಂದ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಬಹುತೇಕ ಕಡೆ ಇದ್ಯಾವುದರ ಪರಿವೆಯೇ ಇಲ್ಲದೆ ಜನ ಖರೀದಿಯಲ್ಲಿ ನಿರತರಾಗಿದ್ದರು. ಹೀಗಾಗಿ ನಗರದ ದಿನಸಿ ಅಂಗಡಿಗಳಲ್ಲಿ ಬೆಳಗ್ಗಿನ ಹೊತ್ತಿನಲ್ಲೇ ತೀವ್ರ ನೂಕುನುಗ್ಗಲು ಉಂಟಾಗಿತ್ತು. ಈ ಮೂಲಕ ಜನರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಆಡಳಿತದ ಆಶಯ ಸಂಪೂರ್ಣವಾಗಿ ವಿಫಲವಾಯಿತು.

click me!