
ಹೈದರಾಬಾದ್(ಏ.10): ಆಂಧ್ರಪ್ರದೇಶದಲ್ಲಿ ಬಾಕಿಯಾಗಿದ್ದ ತನ್ನ ಮಗನನ್ನು ಕರೆತರಲು ಅಮ್ಮ ಮೂರು ದಿನ 1400 ಕಿಲೋಮೀಟರ್ ದೂರಕ್ಕೆ ಒಬ್ಬರೇ ಸ್ಕೂಟಿ ಓಡಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಅನಿರೀಕ್ಷಿತ ಲಾಕ್‌ಡೌನ್‌ನಿಂದಾಗಿ ಹೈದರಾಬಾದ್‌ನ ಬಾಲಕ ಆಂದ್ರಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದ.
ರಜಿಯಾ ಬೇಗಂ(48) ತನ್ನ ಮಗನಿಗಾಗಿ ಈ ಸಾಹಸ ಮಾಡಿದ ಮಹಿಳೆ. ಸ್ತಳೀಯ ಪೊಲೀಸ್ ಅಧಿಕಾರಿಗಳ ಅನುಮತಿಯೊಂದಿಗೆ ಮಹಿಳೆ ಹೈದರಾಬಾದ್‌ನಿಂದ ಹೊರಟಿದ್ದರು. ಸೋಮವಾರ ಬೆಳಗ್ಗೆ ಹೊರಟ ಅವರು ಬುಧವಾರ ಸಂಜೆ ನೆಲ್ಲೂರಿಗೆ ತಲುಪಿ ತಮ್ಮ ಎರಡನೇ ಮಗನೊಂದಿಗೆ ವಾಪಾಸ್ ಆಗಿದ್ದಾರೆ.
ಕೊರೋನಾ ತಗುಲಿದೆಯೆಂದು ನೀರೂ ಕೊಡದ ಗ್ರಾಮಸ್ಥರು!
ಒಬ್ಬ ಮಹಿಳೆ ಮೂರು ದಿನ ಸ್ಕೂಟಿಯಲ್ಲಿ ರಾತ್ರಿ ಹಗಲು ಸಂಚರಿಸುವುದು ಸುಲಭದ ಮಾತಲ್ಲ. ಆದರೆ ನನ್ನ ಮಗನನ್ನು ಕರೆದುಕೊಂಡು ಬರಲೇಬೇಕೆಂಬ ನನ್ನ ನಿರ್ಧಾರ ನನ್ನ ಭಯವನ್ನೆಲ್ಲ ಓಡಿಸಿತು. ಪ್ರಯಾಣದ ಅಗತ್ಯಕ್ಕೆ ರೊಟ್ಟಿಗಳನ್ನು ಕಟ್ಟಿಕೊಂಡಿದ್ದೆ. ಆದರೆ ಖಾಲಿಯಾಗಿರುವ ರಸ್ತೆಗಳಲ್ಲಿ ರಾತ್ರಿ ಸಂಚರಿಸುವಾಗ ನಿಜಕ್ಕೂ ಭಯವಾಗಿತ್ತು ಎನ್ನುತ್ತಾರೆ ಬೇಗಂ.
ಹೈದರಾಬಾದ್‌ನಿಂದ 200 ಕಿ.ಮೀಟರ್ ದೂರದಲ್ಲಿ ನಿಝಾಮಾಬಾದ್‌ನಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ರಜಿಯಾ ಬೇಗಂ ಮುಖ್ಯೋಪಾದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 15 ವರ್ಷಗಳ ಹಿಂದೆಯೇ ಎಜಿಯಾ ಅವರು ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಹಿರಿಯ ಮಗ ಎಂಜಿನಿಯರಿಂಗ್ ಪದವೀಧರನಾಗಿದ್ದು, 19 ವರ್ಷದ ನಿಜಾಮುದ್ದೀನ್ ವೈದ್ಯನಾಗುವ ಗುರಿ ಹೊಂದಿದ್ದಾನೆ.
ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸ್ವಾಗತ
ನಿಜಾಮುದ್ದೀನ್ ತನ್ನ ಗೆಳೆಯನನ್ನು ಬಿಡಲೆಂದು ಮಾರ್ಚ್ 12ರಂದು ನೆಲ್ಲೂರಿಗೆ ತೆರಳಿದ್ದ. ನಂತರ ಅಲ್ಲಿಯೇ ಉಳಿದುಕೊಂಡಿದ್ದ. ಆ ಸಂದರ್ಭದಲ್ಲಿಯೇ ಲಾಕ್‌ಡೌನ್ ಘೋಷಣೆಯಾಗಿ ನಿಜಾಮುದ್ದೀನ್ ಅಲ್ಲಿ ಸಿಕ್ಕಿಹಾಕಿಕೊಂಡಿದ್ದ. ನಂತರದಲ್ಲಿ ಮಗನನ್ನು ಕರೆ ತರಲು ಬೇಗಂ ಹೊರಟು ನಿಂತರು. ತನ್ನ ಹಿರಿಯ ಮಗನನ್ನು ಕಳುಹಿಸಿದರೆ ಜಾಲಿ ರೈಡ್ ಎಂದು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳುವ ಭಯದಿಂದ ತಾವೇ ಸ್ವತಂ ನೆಲ್ಲೂರಿಗೆ ಹೊರಟು ನಿಂತಿದ್ದರು. ಕಾರ್ ತೆಗೆದುಕೊಳ್ಳು ನಿರ್ಧಾರ ಮಾಡಿದ್ದರೂ, ನಂತರದಲ್ಲಿ ತಮ್ಮ ಸ್ಕೂಟಿಯನ್ನೇ ಆರಿಸಿಕೊಂಡರು.