ದೇಶದಲ್ಲಿ 1000ಕ್ಕೂ ಹೆಚ್ಚು ಜನಕ್ಕೆ ಸೋಂಕು, ನಿನ್ನೆ 106 ಹೊಸ ಪ್ರಕರಣಗಳು!

By Kannadaprabha NewsFirst Published Mar 30, 2020, 7:04 AM IST
Highlights

ದೇಶದಲ್ಲಿ ಈಗ 1000ಕ್ಕೂ ಹೆಚ್ಚು ಜನಕ್ಕೆ ಸೋಂಕು| ನಿನ್ನೆ 106 ಹೊಸ ಪ್ರಕರಣಗಳು ದೃಢ| ಮತ್ತೆ 4 ಬಲಿ, ಮೃತರ ಸಂಖ್ಯೆ 27ಕ್ಕೆ| 

ನವದೆಹಲಿ(ಮಾ.30): ಕೊರೋನಾ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ನಾನಾ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ ಏರುಮುಖದಲ್ಲೇ ಸಾಗಿದ್ದು, ಭಾನುವಾರ ಸಾವಿರದ ಗಡಿ ದಾಟಿದೆ. ಭಾನುವಾರ ದೇಶಾದ್ಯಂತ 106 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1024ಕ್ಕೆ ತಲುಪಿದೆ. ಈ ನಡುವೆ ಭಾನುವಾರ 6 ಜನ ಸೋಂಕಿಗೆ ಬಲಿಯಾಗಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 27ಕ್ಕೆ ತಲುಪಿದೆ. ಇದೇ ವೇಳೆ ಸೋಂಕಿಗೆ ತುತ್ತಾದವರ ಪೈಕಿ 96 ಜನ ಈಗಾಗಲೇ ಚೇತರಿಸಿಕೊಂಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

106 ಕೇಸು:

ದೇಶದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾದ ಮಹಾರಾಷ್ಟ್ರ, ಕೇರಳ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾನುವಾರವೂ ಭಾರೀ ಪ್ರಮಾಣದಲ್ಲಿ ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಭಾನುವಾರ ಪತ್ತೆಯಾದ ಪ್ರಕರಣಗಳ ಬಳಿಕ ಮಹಾರಾಷ್ಟ್ರದಲ್ಲಿ ಒಟ್ಟು 203, ಕೇರಳದಲ್ಲಿ 202, ಕರ್ನಾಟಕದಲ್ಲಿ 83, ದೆಹಲಿಯಲ್ಲಿ 72, ಉತ್ತರ ಪ್ರದೇಶದಲ್ಲಿ 68, ತೆಲಂಗಾಣದಲ್ಲಿ 67 ಬೆಳಕಿಗೆ ಬಂದಂತೆ ಆಗಿದೆ.

ಎಲ್ಲೆಲ್ಲಿ ಎಷ್ಟೆಷ್ಟುಸಾವು: ಈವರೆಗೆ ಮಹಾರಾಷ್ಟ್ರದಲ್ಲಿ ಅತಿಹೆಚ್ಚು 6 ಮಂದಿ, ಗುಜರಾತ್‌(5), ಕರ್ನಾಟಕ(3), ಮಧ್ಯಪ್ರದೇಶ, ದೆಹಲಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ತಲಾ ಇಬ್ಬರು ಹಾಗೂ ಕೇರಳ, ತೆಲಂಗಾಣ, ತಮಿಳುನಾಡು, ಬಿಹಾರ, ಪಂಜಾಬ್‌, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

click me!