ಕಳೆದ ಕೆಲವೊಂದು ದಿನಗಳಿಂದ ಕೇರಳ ಕರ್ನಾಟಕ ಭಾಗದಲ್ಲಿ ರಸ್ತೆ ಮಧ್ಯೆ ಮಣ್ಣು ರಾಶಿ ಹಾಕುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಆದರೆ ರಸ್ತೆ ಬ್ಲಾಕ್ ಮಾಡುತ್ತಿರುವುದರಿಂದ ಕೇರಳಕ್ಕೆ ದಿನ ಬಳಕೆ ವಸ್ತು ಸೇರಿ ಅಗತ್ಯ ಸಾಮಾಗ್ರಿ ತಲುಪುವುದಕ್ಕೆ ತೊಂದರೆಯಾಗುತ್ತಿರುವುದಾಗಿ ಕೇರಳ ಸಿಎಂ ಪಿಣರಾಯ್ ವಿಜಯನ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ತಿರುವನಂತಪುರಂ(ಮಾ.28): ಇಂಡಿಯಾ ಲಾಕ್‌ಡೌನ್ ಹಿನ್ನೆಲೆ ಕೊರೋನಾ ವೈರಸ್ ಹರಡುವ ಭೀತಿಯಿಂದ ಹಲವೆಡೆ ರಸ್ತೆಗಳನ್ನು ಮಣ್ಣು ಹಾಕಿ ಬ್ಲಾಕ್ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕೇರಳ ಕರ್ನಾಟಕ ಗಡಿಗಳಲ್ಲಿ ಕರ್ನಾಟಕ ಪೊಲೀಸರು ರಸ್ತೆಗಳನ್ನು ಬಂದ್ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪಿಣರಾಜ್ ವಿಜಯನ್ ಈ ವಿಚಾರವನ್ನು ಪ್ರಾಧನಿ ಮೋದಿ ಅವರ ಗಮನಕ್ಕೆ ತಂದಿದ್ದಾರೆ. ಈ ರೀತಿ ರಸ್ತೆ ಬ್ಲಾಕ್ ಮಾಡಿರುವುದರಿಂದ ಅಗತ್ಯ ವಸ್ತುಗಳ ಸರಬರಾಜಿಗೆ ಸಮಸ್ಯೆಯಾಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಕೊರೋನಾ ಭೀತಿ: ಕೇರಳ-ಕೊಡಗು ಗಡಿಗಳು ಬಂದ್..!
ಜನರಿಗೆ ಬೇಕಾಗಿರುವ ದಿನಬಳಕೆ ವಸ್ತುಗಳು ಸೇರಿ ಹಲವು ಅಗತ್ಯ ಸಾಮಾಗ್ರಿಗಳನ್ನು ತೆಗೆದುಕೊಂಡು ಬರುತ್ತಿದ್ದ ಲಾರಿಗಳು ಗಡಿಯಲ್ಲಿ ಬಾಕಿಯಾಗಿವೆ. ರಸ್ತೆಗಳಲ್ಲಿ ಮಣ್ಣು ಹಾಕಿರುವುದರಿಂದ ವಾಹನಗಳು ಗಡಿ ದಾಟಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಕೇರಳ ಸಿಎಂ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ ಸಂಜೆ ಸಿಎಂ ಪತ್ರ ಬರೆದಿದ್ದು ಕೇರಳ-ಮಡಿಕೇರಿಯನ್ನು ಸಂಪರ್ಕಿಸುವ ತಲಶ್ಶೇರಿ, ಕೂರ್ಗ್ ರಾಜ್ಯ ಹೆದ್ದಾರಿ - 30 ಬಂದ್ ಆಗಿದೆ. ಹೀಗಾಗಿ ಅಗತ್ಯ ವಸ್ತುಗಳು ಕೇರಳ ತಲುಪಲು ಸುತ್ತು ಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕೊರೋನಾ ಲಾಕ್‌ಡೌನ್‌ನಿಂದ ಈಗಾಗಲೇ ಮನೆಯೊಳಗೆ ಉಳಿದ ಜನರಿಗೆ ಅಗತ್ಯ ವಸ್ತುಗಳು ದೊರೆಯದೆ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕೊರೋನಾ ಶಂಕೆ: ಗ್ರಾಮದಿಂದ ಹೊರ ಹೋಗುವಂತೆ ವ್ಯಕ್ತಿ ಮೇಲೆ ಹಲ್ಲೆ
ಮಣ್ಣಿನ ರಾಶಿ ಹಾಕಿ ಕೇರಳ ಕರ್ನಾಟಕ ಎಲ್ಲ ರಸ್ತೆಗಳನ್ನು ಬಂದ್ ಮಾಡಿರುವ ಕರ್ನಾಟಕ ಅಧಿಕಾರಿಗಳ ಕ್ರಮವನ್ನು ಖಂಡಿಸಿರುವ ಪಿಣರಾಯ್ ಕಾಸರಗೋಡಿನಲ್ಲಿರುವ ರೋಗಿಗಳು ಮಂಗಳೂರಿಗೆ ಚಿಕಿತ್ಸೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.