
ದಿ ಗರ್ಲ್‌ಫ್ರೆಂಡ್ ಸಿನಿಮಾ ಗಳಿಕೆ
ಕನ್ನಡತಿ, ನ್ಯಾಷನಲ್ ಕ್ರಶ್ ಖ್ಯಾತಿಯ ಸ್ಯಾಂಡಲ್‌ವುಡ್‌ನ ಹೆಮ್ಮೆಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಬಹುನಿರೀಕ್ಷಿತ ಚಿತ್ರ 'ದಿ ಗರ್ಲ್‌ಫ್ರೆಂಡ್' ಬಾಕ್ಸ್ ಆಫೀಸ್‌ನಲ್ಲಿ ತನ್ನ ಛಾಪು ಮೂಡಿಸಲು ಸಜ್ಜಾಗಿದೆ. ರಾಹುಲ್ ರವೀಂದ್ರನ್ ನಿರ್ದೇಶನದ (The Girlfriend) ಈ ಲವ್ ಸ್ಟೋರಿ, ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿಯೇ ಪ್ರೇಕ್ಷಕರ ಮನ ಗೆದ್ದು, ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಕಾಣುತ್ತಿದೆ.
ಮೊದಲ ಎರಡು ದಿನಗಳಲ್ಲಿ 3.8 ಕೋಟಿ ರೂ. ಗಳಿಸಿದ್ದ ಈ ಚಿತ್ರ, ಮೂರನೇ ದಿನ ಅಂದರೆ ಭಾನುವಾರ (ನವೆಂಬರ್ 9, 2025) ಅಂದಾಜು 3.00 ಕೋಟಿ ರೂ. ಗಳಿಸಿದೆ. ಇದರೊಂದಿಗೆ, ಮೂರು ದಿನಗಳಲ್ಲಿ ಚಿತ್ರದ ಒಟ್ಟು ಗಳಿಕೆ ಭಾರತದಲ್ಲಿ 6.80 ಕೋಟಿ ರೂ. ತಲುಪಿದೆ. ಇದು ನಿಜಕ್ಕೂ ಸಖತ್ ಸ್ಟಾರ್ಟ್ ಎಂದೇ ಹೇಳಬಹುದು!
ತೆಲುಗು ಪ್ರೇಕ್ಷಕರ ಮನಗೆದ್ದ ಭೂಮಾ!
ಸ್ಯಾಕ್ನಿಲ್ಕ್ ವರದಿಗಳ ಪ್ರಕಾರ, 'ದಿ ಗರ್ಲ್‌ಫ್ರೆಂಡ್' ತೆಲುಗು ಆವೃತ್ತಿಯು ಬಾಕ್ಸ್ ಆಫೀಸ್‌ನಲ್ಲಿ ಸಿಂಹಪಾಲು ಗಳಿಸಿದೆ. ಭಾನುವಾರ ತೆಲುಗು ಆವೃತ್ತಿಗೆ ಶೇಕಡಾ 37.27 ರಷ್ಟು ಒಟ್ಟಾರೆ ಆಕ್ಯುಪೆನ್ಸಿ ದಾಖಲಾಗಿದೆ. ಅದರಲ್ಲೂ ಮಧ್ಯಾಹ್ನ ಮತ್ತು ಸಂಜೆ ಪ್ರದರ್ಶನಗಳು ಕಮಾಲ್ ಮಾಡಿದ್ದು, ಶೇಕಡಾ 46ರಷ್ಟು ಆಕ್ಯುಪೆನ್ಸಿ ಕಂಡಿವೆ. ರಶ್ಮಿಕಾ ಅವರ ಮೋಡಿಗೆ ತೆಲುಗು ಪ್ರೇಕ್ಷಕರು ಸಂಪೂರ್ಣವಾಗಿ ಮಾರುಹೋಗಿದ್ದಾರೆ ಎಂಬುದಕ್ಕೆ ಇದು ಉತ್ತಮ ನಿದರ್ಶನ.
'ದಿ ಗರ್ಲ್‌ಫ್ರೆಂಡ್' ಚಿತ್ರವು ಭೂಮಾ (ರಶ್ಮಿಕಾ ಮಂದಣ್ಣ) ಎಂಬ ಯುವತಿಯ ಸುತ್ತ ಹೆಣೆದ ಕಥೆ. ಪ್ರೀತಿ ಮತ್ತು ಸ್ವಾತಂತ್ರ್ಯದ ನಡುವಿನ ಸಂಕೀರ್ಣ ಸಂಬಂಧಗಳನ್ನು ಇದು ವಿವರಿಸುತ್ತದೆ. ನಿರ್ದೇಶಕ ರಾಹುಲ್ ರವೀಂದ್ರನ್ ಪ್ರೀತಿಯ ಎಲ್ಲಾ ಹಂತಗಳನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರೀತಿಯಲ್ಲಿ ಬಿದ್ದ ಪ್ರತಿಯೊಬ್ಬರಿಗೂ ಈ ಕಥೆ ಒಂದಲ್ಲ ಒಂದು ರೀತಿಯಲ್ಲಿ ಕನೆಕ್ಟ್ ಆಗುವುದು ಗ್ಯಾರಂಟಿ. ವಿಷಕಾರಿ ಸಂಬಂಧವೊಂದು ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದನ್ನು ಚಿತ್ರ ಅದ್ಭುತವಾಗಿ ಸೆರೆಹಿಡಿದಿದೆ.
ಹಲವು ವಿಮರ್ಶೆಗಳ ಪ್ರಕಾರ, "ರಶ್ಮಿಕಾ ಮಂದಣ್ಣ ಭೂಮಿ ಪಾತ್ರದ ಭಾವನಾತ್ಮಕ ಏರಿಳಿತಗಳನ್ನು ಅತ್ಯಂತ ಸುಂದರವಾಗಿ ಸೆರೆಹಿಡಿದಿದ್ದಾರೆ. ಭೂಮಾಳ ಸಂಕೀರ್ಣ ಪ್ರಯಾಣಕ್ಕೆ ಅವರು ಸೂಕ್ಷ್ಮತೆ ಮತ್ತು ಮನವೊಲಿಸುವಿಕೆಯನ್ನು ನೀಡಿದ್ದಾರೆ." ರಶ್ಮಿಕಾ ಅವರ ನಟನೆಯ ಕುರಿತು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ಅವರ ಅಭಿನಯದ ಮತ್ತೊಂದು ಮಗ್ಗುಲನ್ನು ನೋಡಬಹುದು.
"ವಿಕ್ರಮ್ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ (Dheekshith Shetty) ಅತ್ಯದ್ಭುತವಾಗಿ ನಟಿಸಿದ್ದಾರೆ. ನಿಯಂತ್ರಣ ಮನೋಭಾವದ, ಅಧಿಕಾರಯುತ ಗೆಳೆಯನಾಗಿ, ಅವನ ಪ್ರೀತಿ ಕ್ರಮೇಣ ಕೋಪವಾಗಿ, ನಂತರ ಸೇಡು ತೀರಿಸಿಕೊಳ್ಳಲು ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಭೂಮಾ ತನ್ನನ್ನು ತಾನು ಸಮರ್ಥಿಸಿಕೊಂಡಾಗ, ಮೋಹಕ ಗೆಳೆಯನಿಂದ ಸೇಡು ತೀರಿಸಿಕೊಳ್ಳುವ ವಿರೋಧಿಯಾಗಿ ಬದಲಾಗುವ ಅವನ ಪಾತ್ರವು ಧೀಕ್ಷಿತ್ ಶೆಟ್ಟಿಯವರ ನಟನಾ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ."
ಒಟ್ಟಾರೆ, ಉತ್ತಮ ವಿಮರ್ಶೆಗಳು ಮತ್ತು ಆಕ್ಯುಪೆನ್ಸಿ ಅಂಕಿಅಂಶಗಳೊಂದಿಗೆ, ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರ ಮುಂದಿನ ದಿನಗಳಲ್ಲಿ ಉತ್ತಮ ಗಳಿಕೆ ಮಾಡುವ ನಿರೀಕ್ಷೆಯಿದೆ. ಈ ಚಿತ್ರವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರಶ್ಮಿಕಾ ಅವರ ಹಿಂದಿನ ಚಿತ್ರಗಳು ಹೇಗಿದ್ದವು?
ಇದೇ ವೇಳೆ, ರಶ್ಮಿಕಾ ಮಂದಣ್ಣ ಅವರ ಹಿಂದಿನ ಹಿಂದಿ ಚಿತ್ರಗಳಾದ ಬಾಲಿವುಡ್ ಭಯಾನಕ ಹಾಸ್ಯ ಚಿತ್ರ 'ಥಮ್ಮಾ' ಸಕ್ಸಸ್ ದಾಖಲಿಸಿದೆ.ಇದೀಗ, 'ದಿ ಗರ್ಲ್‌ಫ್ರೆಂಡ್' ಮೂಲಕ ರಶ್ಮಿಕಾ ಮತ್ತೊಮ್ಮೆ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಜೊತೆಗೆ, ತಾವು ಬಾಕ್ಸ್ ಆಫೀಸ್ ಕ್ವೀನ್ ಎಂಬುದನ್ನು ಕೂಡ ರಶ್ಮಿಕಾ ಇಡೀ ಭಾರತಕ್ಕೆ ಸಾಕ್ಷಿ ಸಮೇತ ಮನದಟ್ಟು ಮಾಡಿದ್ದಾರೆ ಎನ್ನಬಹುದು. ಅಷ್ಟಕ್ಕೂ 'ದಿ ಗರ್ಲ್‌ಫ್ರೆಂಡ್' ಚಿತ್ರವು ಪ್ಯಾನ್ ಇಂಡಿಯಾ ಅಲ್ಲ, ಸೀಮಿತ ಬಜೆಟ್ ನಿರ್ಮಾಣದಲ್ಲಿ ಮಾಡಿರೋ ಜಸ್ಟ್ ಬಾಲಿವುಡ್ ಸಿನಿಮಾ ಅಷ್ಟೇ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.