
ಮಂಗಳೂರು (ಫೆ.8): ಜಯಕಿರಣ ಫಿಲಂಸ್ ಲಾಂಛನದಲ್ಲಿ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾಗಿರುವ ‘ನಾನ್ ವೆಜ್’ ತುಳು ಸಿನಿಮಾ ಭಾರತ್ ಸಿನಿಮಾಸ್‌ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.
ದೀಪ ಬೆಳಗಿಸಿ ಮಾತನಾಡಿದ ಹಿರಿಯ ವಕೀಲ ಮಯೂರಕೀರ್ತಿ ಅವರು, ನನಗೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿರುವುದು ಒಬ್ಬ ನೈಜ ತುಳು ಸಿನಿಮಾ ಪ್ರೇಕ್ಷಕನಿಗೆ ಸಂದ ದೊಡ್ಡ ಗೌರವ. ನಾನು ಬಹುತೇಕ ಎಲ್ಲ ತುಳು ಸಿನಿಮಾಗಳನ್ನು ನೋಡುತ್ತೇನೆ. ಈ ಹಿಂದೆ ‘ಚಾಲಿಪೋಲಿಲು’ ಅನ್ನುವ ತುಳು ಚಿತ್ರ ನಿರ್ಮಿಸಿ ದಾಖಲೆ ಬರೆದಿದ್ದ ಆತ್ಮೀಯ ಮಿತ್ರ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ಮಾಡಿರುವ ಈ ಸಿನಿಮಾ ಕೂಡ ಶತದಿನ ಆಚರಿಸಲಿ ಎಂದರು. ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ ಮಾತಾಡಿ, ಎಲ್ಲರೂ ನೋಡಿ ಚಿತ್ರತಂಡವನ್ನು ಗೆಲ್ಲಿಸಿ ಎಂದರು.
ಕುಸೇಲ್ದರಸೆ ನವೀನ್ ಡಿ. ಪಡೀಲ್ ಮಾತಾಡಿ, ನಾನ್ ವೆಜ್ ಸಿನಿಮಾ ಇಡೀ ಕುಟುಂಬ ಕೂತು ನೋಡಬಹುದಾದ ಫ್ಯಾಮಿಲಿ ಒರಿಯೆಂಟೆಡ್ ಚಿತ್ರ. ತುಳು ಚಿತ್ರಾಭಿಮಾನಿಗಳು ಸಿನಿಮಾ ನೋಡಿ ಆಶೀರ್ವಾದ ಮಾಡಿ ಎಂದರು. ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ವಿರಾಟ್ ಗೌಡ, ಅರ್ಜುನ್ ಕಾಪಿಕಾಡ್, ನಿರ್ಮಾಪಕ ಮುಖೇಶ್ ಹೆಗ್ಡೆ, ಭೋಜರಾಜ್ ವಾಮಂಜೂರ್, ಕ್ಯಾಟ್ಕದ ಮಾಜಿ ಅಧ್ಯಕ್ಷ ಪಮ್ಮಿ ಕೊಡಿಯಾಲ್ ಬೈಲ್, ಅಶ್ವಿನಿ ಪ್ರಕಾಶ್, ಇಸ್ಮಾಯಿಲ್ ಮೂಡುಶೆಡ್ಡೆ, ನಿರ್ದೇಶಕ ಸೂರಜ್ ಶೆಟ್ಟಿ, ನಟ ಅಥರ್ವ ಪ್ರಕಾಶ್ ಮತ್ತಿತರರು ಇದ್ದರು.
ಇಡೀ ಸಿನಿಮಾದ ಕಥೆ ಹಾಗೂ ಸಂದೇಶವನ್ನು ಹಾಸ್ಯದಲ್ಲೇ ತೆಗೆದುಕೊಂಡಿರುವ ಹೋಗಿರುವುದು ಒಂದು ದೊಡ್ಡ ಪ್ಲಸ್ ಪಾಯಿಂಟ್. ಯುವಜನತೆಯ ತಳಮಳ, ಗೊಂದಲ, ಕುತೂಹಲಗಳನ್ನು ಮನಸ್ಪರ್ಶಿಯಾಗಿ ಚಿತ್ರಿಸಲಾಗಿದೆ. ಅದಕ್ಕೊಂದು ಸುಂದರ ಕಥೆಯ ರೂಪ, ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನೂ ನೀಡಲಾಗಿದೆ ಎಂದು ಸಿನಿಮಾದ ನಿರ್ದೇಶಕ ಸೂರಜ್ ಶೆಟ್ಟಿ ಹೇಳಿದರು.
ಯುವಜನತೆಯ ತಳಮಳವನ್ನು ಕೇಂದ್ರೀಕರಿಸಿಕೊಂಡು ಸಿದ್ಧಪಡಿಸಲಾಗಿರುವ ಈ ಸಿನಿಮಾವು ಕಾಲೇಜು ವಿದ್ಯಾರ್ಥಿಗಳು ಸಹಿತ ಯುವಜನಾಂಗದ ಮನ ಗೆಲ್ಲ ಬಹುದೆಂದು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ.
ಮಲ್ಟಿಪ್ಲೆಕ್ಸ್‌ನಲ್ಲೂ 99 ರು. ಟಿಕೆಟ್ ದರನಾನ್ ವೆಜ್ ಸಿನಿಮಾ ಮಂಗಳೂರುನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್‌ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ಕುಂದಾಪುರದಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದೆ. ಮಲ್ಟಿಫ್ಲೆಕ್ಸ್‌ನಲ್ಲೂ ಕೂಡ 99 ರು. ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.