
ಕೇರಳದಲ್ಲಿ ವಾಝಾ ಹವಾ!
ಚಿತ್ರರಂಗ ಅಂದ್ರೆ ಅಲ್ಲಿ ಬರೀ ದೊಡ್ಡ ಸ್ಟಾರ್‌ಗಳದ್ದೇ ಹವಾ, ಕೋಟಿ ಕೋಟಿ ಸಂಭಾವನೆ ಪಡೆಯುವ ನಟರದ್ದೇ ಕಾರುಬಾರು ಅಂದುಕೊಂಡಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ! ಯಾವುದೇ ಸ್ಟಾರ್ ಪವರ್ ಇಲ್ಲದೆ, ಕೇವಲ ಪ್ರತಿಭೆ ಮತ್ತು ಗೆಳೆತನದ ಕಥೆಯನ್ನು ನಂಬಿಕೊಂಡು ಬಂದ 'ಹೊಸಬರ ತಂಡ'ವೊಂದು ಇಂದು ಇಡೀ ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಅದೇ ಮಲಯಾಳಂನ ಇತ್ತೀಚಿನ ಸೆನ್ಸೇಷನ್ 'ವಾಝಾ 2: ಬಯೋಪಿಕ್ ಆಫ್ ಎ ಬಿಲಿಯನ್ ಬ್ರದರ್ಸ್'.
ನಿರ್ದೇಶಕ ಸವಿನ್ ಎಸ್.ಎ. ಅವರು ತಮ್ಮ ಚೊಚ್ಚಲ ಸಿನಿಮಾದಲ್ಲೇ (Vaazha 2) ಇಂತಹದೊಂದು ಮ್ಯಾಜಿಕ್ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಚಿತ್ರ ಬಿಡುಗಡೆಯಾದ ದಿನದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ರಿವ್ಯೂಗಳ ಸುರಿಮಳೆಯೇ ಆಯಿತು. ಅದರ ಪರಿಣಾಮವೇನು ಗೊತ್ತಾ? ಮೊದಲ ವಾರದಲ್ಲೇ ಈ ಸಿನಿಮಾ ಬರೊಬ್ಬರಿ ₹55 ಕೋಟಿ ಬಾಚಿಕೊಂಡಿತು. ಅಲ್ಲಿಗೆ ನಿಲ್ಲದ ಈ 'ಬ್ರದರ್ಸ್' ಓಟ, 17ನೇ ದಿನದ ವೇಳೆಗೆ ಕೇರಳ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ ₹101.85 ಕೋಟಿ ಗಳಿಸಿ ಹೊಸ ಇತಿಹಾಸ ಬರೆದಿದೆ. ಈಗ ಈ ಚಿತ್ರ ₹200 ಕೋಟಿ ಕ್ಲಬ್‌ನತ್ತ ಕಣ್ಣಿಟ್ಟಿದೆ!
ಮೋಹನ್ ಲಾಲ್ ದಾಖಲೆಯನ್ನೇ ಮುರಿದ ಯುವ ಪಡೆ!
ಈ ಯಶಸ್ಸು ಸಾಮಾನ್ಯವಾದದ್ದಲ್ಲ. ಕೇರಳದಲ್ಲಿ ಅತಿ ವೇಗವಾಗಿ ₹100 ಕೋಟಿ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ 'ವಾಝಾ 2' ಪಾತ್ರವಾಗಿದೆ. ಈ ಹಿಂದೆ ಕಲ್ಯಾಣಿ ಪ್ರಿಯದರ್ಶನ್ ಅವರ ಚಿತ್ರ (24 ದಿನ) ಮತ್ತು ಸ್ವತಃ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರ ದಾಖಲೆಗಳನ್ನೇ (19 ದಿನ) ಈ ಯುವ ತಂಡ ಅಳಿಸಿ ಹಾಕಿದೆ. ಇದನ್ನು ಕಂಡು ಫ್ಯಾನ್ಸ್ "ಇದು ಹೊಸಬರ ಯುಗ" ಎಂದು ಸಂಭ್ರಮಿಸುತ್ತಿದ್ದಾರೆ. ಚಿತ್ರದ ಬರಹಗಾರ ವಿಪಿನ್ ದಾಸ್ ಅವರು ಇನ್ಸ್ಟಾಗ್ರಾಮ್ ನಲ್ಲಿ "ನಿಮ್ಮ ಪ್ರೀತಿಗೆ ಧನ್ಯವಾದಗಳು" ಎಂದು ಭಾವುಕರಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದು ಕೇವಲ ಸಿನಿಮಾ ಅಲ್ಲ, ನಮ್ಮ ನಿಮ್ಮಂತಹ ಸಾಮಾನ್ಯ ಯುವಕರ ಕಥೆ. ಹಶೀರ್, ಅಲನ್, ಅಜಿನ್ ಮತ್ತು ವಿನಾಯಕ್ ಎಂಬ ನಾಲ್ವರು ಸ್ನೇಹಿತರ ಜೀವನದ ಸುತ್ತ ಕಥೆ ಸಾಗುತ್ತದೆ. ಸಮಾಜದ ಒತ್ತಡ, ಓದಿನ ಗೋಳು, ಮನೆಯವರ ನಿರೀಕ್ಷೆಗಳ ನಡುವೆ ಸಿಕ್ಕಿಬಿದ್ದು ಒದ್ದಾಡುವ ಈ 'ಬ್ಯಾಕ್‌ಬೆಂಚರ್ಸ್' ಕಥೆ ಪ್ರತಿಯೊಬ್ಬ ಯುವಕನಿಗೂ ಕನೆಕ್ಟ್ ಆಗುತ್ತಿದೆ. ಹಶೀರ್ ಎಚ್., ಅಲನ್ ಬಿನ್ ಸಿರಾಜ್ ಅಂತಹ ಹೊಸ ಮುಖಗಳ ಜೊತೆಗೆ ಅಜು ವರ್ಗೀಸ್ ಮತ್ತು ಅಲ್ಫೋನ್ಸ್ ಪುತ್ರೇನ್ ಅವರಂತಹ ಅನುಭವಿಗಳ ಸಾಥ್ ಈ ಚಿತ್ರಕ್ಕಿದೆ.
ಮುಂದೆ ಬರ್ತಿದ್ದಾರೆ ಲೇಡಿ 'ವಾಝಾ'ಗಳು!
'ವಾಝಾ 2' ಇಷ್ಟೊಂದು ದೊಡ್ಡ ಹಿಟ್ ಆಗುತ್ತಿದ್ದಂತೆಯೇ ಚಿತ್ರತಂಡ ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದೆ. ಹೌದು, ಈಗಲೇ 'ವಾಝಾ 3' ಘೋಷಣೆಯಾಗಿದೆ! ವಿಶೇಷ ಅಂದ್ರೆ, ಮುಂದಿನ ಭಾಗದಲ್ಲಿ ಹುಡುಗರ ಬದಲಿಗೆ ಮಹಿಳಾ ನಾಯಕಿಯರೇ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ.
ಒಟ್ಟಿನಲ್ಲಿ, ದೊಡ್ಡ ಬಜೆಟ್ ಇಲ್ಲದಿದ್ದರೂ ಕೇವಲ ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ತಲೆ ಮೇಲೆ ಹೊತ್ತು ಮೆರೆಸುತ್ತಾರೆ ಅನ್ನೋದಕ್ಕೆ 'ವಾಝಾ 2' ಒಂದು ಪಕ್ಕಾ ಉದಾಹರಣೆ. ನೀವು ಇನ್ನು ಈ ಚಿತ್ರ ನೋಡಿಲ್ಲ ಅಂದ್ರೆ, ಈ ಗೆಳೆಯರ ಗ್ಯಾಂಗ್ ಮಾಡುವ ಮಜಾವನ್ನು ಮಿಸ್ ಮಾಡ್ಕೋಬೇಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.