Elephant Taskforce: ಮೂಡಿಗೆರೆಯಲ್ಲಿ ಆನೆ ಟಾಸ್ಕ್ ಫೋರ್ಸ್ ರಚನೆ: ಸಹಾಯವಾಣಿ ಆರಂಭ

By Sathish Kumar KH  |  First Published Dec 10, 2022, 5:58 PM IST

ಕಾಫಿನಾಡಿನಲ್ಲಿ ಆನೆ ಹಾವಳಿ ತಡೆಯಲು ಕಾರ್ಯಪಡೆ ಆರಂಭ
ಮೂಡಿಗೆರೆ ತಾಲೂಕಿನಲ್ಲಿ 3 ಶಿಬಿರಗಳ ಸ್ಥಾಪನೆ
ಶಿಬಿರಳಿಗೆ ಅಧಿಕಾರಿ, ಸಿಬ್ಬಂದಿ ನೇಮಕ ಪೂರ್ಣ
ಕಚೇರಿಗಳ ನಿರ್ವಹಣೆಗೆ ಸಾಮಾಗ್ರಿ ಖರೀದಿ ಮಾತ್ರ ಬಾಕಿ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಡಿ.10): ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ತೀವ್ರವಾಗಿ ಹೆಚ್ಚಳವಾಗಿದ್ದ ಕಾಡಾನೆ ಹಾವಳಿಯಿಂದ ಬೆಳೆಹಾನಿ ಹಾಗೂ ಜನರ ಪ್ರಾಣರಕ್ಷಣೆಯ ಉದ್ದೇಶದಿಂದ ಸರ್ಕಾರ ನಾಲ್ಕು ಜಿಲ್ಲೆಯಲ್ಲಿ ಆನೆ ಟಾಸ್ಕ್ಫೋರ್ಸ್ ಸಮಿತಿ ರಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೂಡಿಗೆರೆ ಪಟ್ಟಣದಲ್ಲಿ ಕಛೇರಿ ಕಾರ್ಯಾರಂಭಗೊಂಡಿದೆ. 

Tap to resize

Latest Videos

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಆನೆ- ಮಾನವ ಸಂಘರ್ಷ ದೊಡ್ಡ ಪ್ರಮಾಣದಲ್ಲಿ ಏರ್ಪಟ್ಟಿತ್ತು. ಹಲವು ಜನರ ಜೀವಹಾನಿಯ ಜೊತೆಗೆ ನಾಲ್ಕು ಜಿಲ್ಲೆಗಳಲ್ಲಿ ಬೆಳೆ ಹಾನಿಯೂ ಕೂಡ ಹೆಚ್ಚಾಗಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಹಾಸನದ ಸಕಲೇಶಪುರ, ಮೈಸೂರು ಜಿಲ್ಲೆಯ ಹುಣಸೂರು, ಕೊಡಗು ಜಿಲ್ಲೆಯ ಮಡಿಕೇರಿ  ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕೇಂದ್ರ ಸ್ಥಾನವನ್ನಾಗಿಸಿಕೊಂಡು ಆನೆ ಟಾಸ್ಕ್‌ ಫೋರ್ಸ್ ರಚಿಸುವಂತೆ ಆದೇಶ ಹೊರಡಿಸಿತ್ತು. ಈ ಕಾರ್ಯಪಡೆ ತಂಡದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಸೇರಿದಂತೆ 6 ಮಂದಿ ಗಾರ್ಡಗಳು, ವಾಚರ್ ಸೇರಿದಂತೆ ಒಟ್ಟು 41 ರಿಂದ 45 ಮಂದಿ ತಂಡ ಕಾರ್ಯನಿರ್ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು.

ಕಾಡಾನೆ ಹಿಮ್ಮೆಟ್ಟಿಸಲು 4 ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್ ರಚನೆ

ಮೂಡಿಗೆರೆ ತಾಲೂಕಿನಲ್ಲಿ 3 ಕ್ಯಾಂಪ್ ಆರಂಭ: ಕಾಫಿನಾಡು ಎಂದು ಪ್ರಸಿದ್ಧಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉಪ ಸಂರಕ್ಷಣಾಧಿಕಾರಿಗಳ ಬಿ.ಎಲ್‌.ಜಿ. ಸ್ವಾಮಿ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಾಜೇಶ್‌ ನಾಯ್ಕ, ವಲಯಾರಣ್ಯಾಧಿಕಾರಿ ಜಿ.ಟಿ.ರಂಗನಾಥ್, ಫಾರೆಸ್ಟ್‌ ಗಾರ್ಡಗಳಾಗಿ ಸುಹಾಸ್, ವಿಜಯ ಕುಮಾರ್, ಕಿರಣ್ ಕುಮಾರ್, ಬಸವರಾಜ್ ಎ.ನಿಡಗುಂದ ಹಾಗೂ ವಾಚರ್‌ಗಳಾಗಿ ಕೆ.ಬಿ.ಹರೀಶ್, ಸಂತೋಷ್, ಗಾರ್ಡ್ ಗಳಾಗಿ ರಾಮಕುಮಾರ್ ಸೇರಿದಂತೆ ಇತರರು ಆನೆ ಟಾಸ್ಕ್‌ ಫೋರ್ಸ್ ಗಳಿಗೆ ಆಯ್ಕೆಯಾಗಿದ್ದಾರೆ. ಇನ್ನು ಮೂಡಿಗೆರೆ, ದೇವವೃಂದ, ಕುಂದೂರು ಸೇರಿ ಮೂರು ಶಿಬಿರಗಳಲ್ಲಿ ಆನೆ ಟಾಸ್ಕ್‌ ಫೋರ್ಸ್ ಶಿಬಿರಗಳನ್ನು ಸಿದ್ಧಪಡಿಸಲಾಗಿದೆ.

ಕಂಟ್ರೋಲ್‌ ರೂಮ್‌ ಸಂಖ್ಯೆ ಆರಂಭ: ಮೂಡಿಗೆರೆ ಪಟ್ಟಣದಲ್ಲಿ ಡಿಎಫ್ಓ, ಎಸಿಎಫ್, ಆರ್ಎಫ್ಓ ಮತ್ತು ಇಬ್ಬರು ಸಿಬ್ಬಂದಿಗಳು ಕಾರ್ಯನಿರ್ವಹಿಸಿದರೆ, ದೇವವೃಂದ ಮತ್ತು ಕುಂದೂರು ಶಿಬಿರದಲ್ಲಿ ಓರ್ವ ಫಾರೆಸ್ಟ್ ಆಫೀಸರ್, ಇಬ್ಬರು ಗಾರ್ಡ್ ಹಾಗೂ 8 ವಾಚರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಂಟ್ರೋಲ್ ರೂಮ್ ತೆರೆದಿದ್ದು, ಸಂಖ್ಯೆ 72040 04261 ಕ್ಕೆ ಕರೆಮಾಡಿದರೆ ಆನೆ ಇರುವ ಮಾಹಿತಿ ಶಿಬಿರಕ್ಕೆ ರವಾನೆಯಾಗತ್ತದೆ.  ಆನೆಯ ಚಲನವಲನಗಳನ್ನು  ಗಮನಿಸಿ, ಆನೆಯನ್ನು ಪಟಾಕಿಸಿಡಿಸಿ ಕಾಡಿಗೆ ಅಟ್ಟಲು ಮುಂದಾಗುತ್ತಾರೆ. ಈ ಟಾಸ್ಕ್‌ ಫೋರ್ಸ್ ಆಯಾ ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಂತೆ ಕಾರ್ಯನಿರ್ವಹಿಸಲಿದೆ. ಕ್ಯಾಂಪಿನಲ್ಲಿರುವವರು ಗಸ್ತು ತಿರುಗುವುದು, ಜನವಸತಿ ಪ್ರದೇಶ ಮತ್ತು ಕಾಫಿತೋಟಗಳಲ್ಲಿ ಆನೆಯ ಚಲನವಲನಗಳನ್ನು ಗಮನಿಸುತ್ತಿದೆ. ಆ ಸ್ಥಳಕ್ಕೆ ತೆರಳಿ ಆನೆಗಳನ್ನು ಕಾಡಿಗೆ ಅಟ್ಟಿಸುವತ್ತ ಗಮನ ಹರಿಸುತ್ತದೆ. ಆನೆಗಳಿರುವ ಸ್ಥಳದಲ್ಲಿ ಅರಣ್ಯ ಪ್ರದೇಶಕ್ಕೆ ತೆರಳದಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುತ್ತದೆ. 

ಅರಣ್ಯ ಸಿಬ್ಬಂದಿಗೆ ವನ್ಯಜೀವಿ ನಿರ್ವಹಣೆ ತರಬೇತಿಯೇ ಇಲ್ಲ

ಟಾಸ್ಕ್‌ ಫೋರ್ಸ್ ತಂಡಕ್ಕೆ ಬೇಕಿದೆ ಸೌಲಭ್ಯಗಳು: ಟಾಸ್ಕ್‌ ಫೋರ್ಸ್ 3 ಬೊಲೆರೊ ವಾಹನ, 2 ಕ್ಯಾಂಟರ್‌ಗಳನ್ನು ಬಾಡಿಕಗೆ ಆಧಾರದ ಮೇಲೆ ಪಡೆದುಕೊಳ್ಳಲು ಸರ್ಕಾರ ಸೂಚಿಸಿದೆ. ಅದರಂತೆ ಮೂಡಿಗೆರೆ ಪಟ್ಟಣದಲ್ಲಿರುವ ಕಚೇರಿಗೆ ಎರಡು ವಾಹನಗಳು ಬಂದಿವೆ. ಉಳಿದ ವಾಹನಗಳನ್ನು ಬಾಡಿಗೆ ಆಧರದ ಮೇಲೆ ತೆಗೆದುಕೊಳ್ಳಬೇಕಿದೆ. ಆನೆ ಓಡಿಸಲು ಪಟಾಕಿ ಸೇರಿದಂತೆ ವಿವಿಧ ಸಲಕರಣೆ, ಶಿಬಿರಗಳಿಗೆ ಆಹಾರ ಸಾಮಾಗ್ರಿಗಳ ಖರೀದಿ ಬಾಕಿ ಇದೆ. ಮೂಡಿಗೆರೆ ತಾಲೂಕಿನಲ್ಲಿ ಹಲವರನ್ನು ಕಾಡಾನೆ ಬಲಿ ಪಡೆದಿದ್ದು, ಈಗಾಗಲೇ ಎರಡು ಆನೆಗಳನ್ನು ಹಿಡಿಯಲಾಗಿದೆ. ಅದರಲ್ಲಿ ಒಂದು ಆನೆ ದಷ್ಟಪುಷ್ಟವಾಗಿದ್ದು, ಅಂಬಾರಿ ಹೊರುವ ಅರ್ಜುನನಿಗಿಂತ ಬಲಶಾಲಿಯಾಗಿದೆ. ಕೆಲವು ದಿನಗಳ ಹಿಂದೆ ಅರವಳಿಕೆ ಗುರಿತಪ್ಪಿದ್ದು, ಆನೆ ಅರಣ್ಯದೊಳಗೆ ಕಾಲ್ಕಿತ್ತಿದೆ. ಈ ಕಾಡಾನೆ ಸೆರೆಗೆ ಈಗಾಗಲೇ ಸಾಕಾನೆಗಳು ಮಾವುತರೊಂದಿಗೆ ಬಿಡಾರಹೂಡಿವೆ. 

ಶಾಸಕರ ಮೇಲೆ ಹಲ್ಲೆ ಬೆನ್ನಲ್ಲೇ ಕಾರ್ಯಪಡೆ ರಚನೆ: ಕುಂದೂರು ಹುಲ್ಲೆಮನೆಯಲ್ಲಿ ಮಹಿಳೆಯೊಬ್ಬರನ್ನು ಆನೆಯೊಂದು ಬಲಿಪಡೆದುಕೊಂಡಿದ್ದು, ಮೃತರಕುಟುಂಬಕ್ಕೆ ಸಾಂತ್ವಾನ ಹೇಳಲು ಹೋದ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಆಕ್ರೋಶಗೊಂಡ ಗುಂಪು ತಡೆದಿದ್ದು, ಅವರ ಮೇಲೆ ಹಲ್ಲೆನಡೆಸಲು ಕೆಲವರು ದೊಣ್ಣೆಹಿಡಿದು ಕಿ.ಮೀ. ಅಟ್ಟಾಡಿಸಿ ಹೋಗಿದ್ದರು. ಈ ಪರಿಸ್ಥಿತಿ ಅರಿತ ಅರಣ್ಯ ಇಲಾಖೆ ಅವರನ್ನು ವಾಹನದಲ್ಲಿ ಕೂರಿಸಿಕೊಂಡು ಮೂಡಿಗೆರೆಗೆ ವಾಪಸ್‌ ಕರೆದುಕೊಂಡು ಹೋಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಆನೆಹಾವಳಿ ಇರುವ ನಾಲ್ಕು ಜಿಲ್ಲೆಗಳಲ್ಲಿ ಎಲಿಫೆಂಟ್ ಟಾಸ್ಕ್‌ ಫೋರ್ಸ್ ರಚಿಸಿದ್ದು, ಈಗಾಗಲೇ ಬೆಳೆಹಾನಿ ಮತ್ತು ಮಾನವ ಪ್ರಾಣಹಾನಿ ರಕ್ಷಣೆಗೆ ಈ ತಂಡ ಕಾರ್ಯೋನ್ಮುಖವಾಗಿದೆ. 

ಆನೆ ಕಾರ್ಯಪಡೆಯ (ಟಾಸ್ಕ್‌ ಫೋರ್ಸ್) ಸಿಬ್ಬಂದಿ ವಿವರ: 

  • ಉಪ ಅರಣ್ಯ ಸಂರಕ್ಷಣಾಧಿಕಾರಿ- 1
  • ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ-1
  • ವಲಯಾರಣ್ಯಾಧಿಕಾರಿ-1
  • ಉಪ ವಲಯಾರಣಾಧಿಕಾರಿ- 4
  • ಫಾರೆಸ್ಟ್ ಗಾರ್ಡ್- 8
  • ಅರಣ್ಯ ವೀಕ್ಷಕರು -32
click me!