ದಿಢೀರ್ ಹಣ ಮಾಡಲು ಹೋದ ವಂಚಕರು ಕೋಟಿ ಕೋಟಿ ಹಣ ಮಾಡಿ ವಿದೇಶಕ್ಕೆ ಹೋಗುವ ಸಿದ್ಧತೆಯಲ್ಲಿರುವಾಗಲೇ ವಂಚನೆ ಬಯಲಾಗಿ ಪೊಲೀಸರ ಅತಿಥಿಯಾಗಿದ್ದಾರೆ. ನಕಲಿ ಡಾಕ್ಯುಮೆಂಟ್ಸ್ ಮೂಲಕ ಕೋಟಿ ಕೋಟಿ ರೂಪಾಯಿ ದೋಚಲಿದ್ದ ಖತರ್ನಾಕ್ ಕಳ್ಳರನ್ನು ಚಿಕ್ಕಬಳ್ಳಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ(ಅ.26): ದಿಢೀರ್ ಹಣ ಮಾಡಲು ಹೋದ ವಂಚಕರು ಕೋಟಿ ಕೋಟಿ ಹಣ ಮಾಡಿ ವಿದೇಶಕ್ಕೆ ಹೋಗುವ ಸಿದ್ಧತೆಯಲ್ಲಿರುವಾಗಲೇ ವಂಚನೆ ಬಯಲಾಗಿ ಪೊಲೀಸರ ಅತಿಥಿಯಾಗಿದ್ದು, ಲಾರಿಗಳ ಮೇಲೆ ಲಕ್ಷ ಲಕ್ಷ ರುಪಾಯಿ ಸಾಲ ನೀಡಿದ ಫೈನಾನ್ಸ್ ಕಂಪನಿಗಳು ಬೆಚ್ಚಿ ಬೀಳುವಂತಾಗಿದೆ.
ಈ ಜಾಲ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ವ್ಯಾಪಿಸಿದೆ. ಸಾರಿಗೆ ಇಲಾಖೆಯಿಂದ ಹಿಡಿದು ಬ್ಯಾಂಕು, ಫೈನಾನ್ಸ್ ಕಂಪೆನಿಗಳು, ನ್ಯಾಯಾಲಯಕ್ಕೂ ವಂಚನೆ ಎಸಗಿರುವುದು ಬಹಿರಂಗವಾಗಿದೆ. ಪೊಲೀಸರ ಸಮಯಪ್ರಜ್ಞೆಯಿಂದ ಅಂತಾರಾಜ್ಯ ವಂಚಕರು ಶ್ರೀಕೃಷ್ಣ ಜನ್ಮಸ್ಥಾನ ಸೇರುವಂತಾಗಿದೆ.
ಏನಿದು ಪ್ರಕರಣ?
ಶಿಡ್ಲಘಟ್ಟತಾಲೂಕಿನ ದ್ಯಾವರಹಳ್ಳಿಯ ನಿವಾಸಿ ಡಿ.ಶ್ರೀನಿವಾಸ ಅಲಿಯಾಸ್ ಸಾದಲಿ ಸೀನ ಮತ್ತು ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ನಿವಾಸಿ ಅನಿಲ್ ಎಂಬುವರು ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ದಿಢೀರ್ ಹಣ ಮಾಡಲು ಹೋಗಿ ಕಳವು ಮಾಡಿದ ಲಾರಿಗಳನ್ನು ಅಮಾಯಕರಿಗೆ ತೋರಿಸಿ, ಯಾಮಾರಿಸಿ ಮಾರುತ್ತಿದ್ದ ಖತರ್ನಾಕ್ ಕಳ್ಳರಾಗಿದ್ದಾರೆ. ಸಾದಲಿ ಸೀನಾ ಹಾಗೂ ಅನಿಲ್ ಇಬ್ಬರೂ ಕದ್ದ ಲಾರಿಗಳ ಎಂಜಿನ್ ನಂಬರ್ ಹಾಗೂ ಚಾಸೀ ನಂಬರ್‌ಗಳನ್ನು ಬದಲಿಸಿ ಮಾರಾಟ ಮಾಡುತ್ತಿದ್ದ ವಿಚಾರ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ. ಈ ಪ್ರಕರಣ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದಂತೆ ಅನಿಲ್ ತಲೆ ಮರೆಸಿಕೊಂಡಿದ್ದಾನೆ. ಸಾದಲಿ ಸೀನನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅನರ್ಹ ಶಾಸಕ ನಾರಾಯಣ ಗೌಡಗೆ ಕೆ.ಆರ್. ಪೇಟೆ BJP ಟಿಕೆಟ್ ಫಿಕ್ಸ್..?
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪಿಎಸ್‌ಐ ಚೇತನ್‌ಕುಮಾರ್ ಸಿಬ್ಬಂದಿಯೊಂದಿಗೆ ವಾಹನಗಳ ತಪಾಸಣೆ ಮಾಡುವ ವೇಳೆ ಈ ಲಾರಿ ಸಿಕ್ಕಿಬಿದ್ದು, ಅದರ ದಾಖಲೆ ನೋಡಿ ತಡಬಡಿಸಿದಾಗ ಅನುಮಾನಗೊಂಡು ವಿಚಾರಣೆ ಮಾಡಿದ್ದಾರೆ. ಈ ವೇಳೆ ಇವರ ಬಗ್ಗೆ ಮಾಹಿತಿ ದೊರೆತಿದೆ. ಆಟೋ ಚಾಲಕನಾಗಿರುವ ಸಾದಲಿ ಸೀನ, ಲೋನ್ ಪಡೆದು ಟಿಪ್ಪರ್ ಖರೀದಿಸಿ ಮಾಲಿಕರಿಗೆ ಗಾಳ ಹಾಕ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲ ಪಡೆದು ಯಾಮಾರಿಸುತ್ತಿದ್ದರು:
ಟಿಪ್ಪರ್ ಮೇಲಿರುವ ಸಾಲವನ್ನು ತೀರಿಸುತ್ತೇನೆ, ಹಣವೂ ನೀಡುತ್ತೇನೆ ಎಂದು ನಂಬಿಸಿ, ಟಿಪ್ಪರ್ ಹಾಗೂ ಲಾರಿಗಳ ಮಾಲಿಕರಿಂದ ವಾಹನಗಳನ್ನು ಖರೀದಿಸಿ, ನಂತರ ಚಾಸಿ ನಂಬರ್ ಅಳಿಸಿ ಉತ್ತರ ಭಾರತ ಮೂಲದ ಯಾವುದೋ ವಾಹನಗಳ ಚಾಸಿ ನಂಬರ್ ನಮೂದು ಮಾಡಿ, ನಖಲಿ ದಾಖಲೆಗಳನ್ನು ಸೃಷ್ಟಿಮಾಡುವ ಮೂಲಕ ಭಾರೀ ವಾಹನಗಳ ಮೇಲೆ ಬ್ಯಾಂಕ್ ಹಾಗೂ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಯಾಮಾರಿಸುತ್ತಿದ್ದರು ಎಂಬುದು ಪೊಲೀಸರ ವಿಚಾರಣೆಯಲ್ಲಿ ಹೊರಬಂದಿದೆ.
ಹೀಗೆ ನೂರಾರು ಜನರಿಗೆ, ನೂರಾರು ವಾಹನಗಳ ಮೇಲೆ ಕೋಟ್ಯಂತರ ರುಪಾಯಿ ವಂಚಿಸಿ ಪ್ರಸ್ತುತ ಒಬ್ಬನು ಪೊಲೀಸರ ಅತಿಥಿಯಾಗಿದ್ದರೆ ಮತ್ತೂಬ್ಬ ನಾಪತ್ತೆಯಾಗಿದ್ದಾನೆ. ಸಾದಲಿ ಸೀನ ಮತ್ತು ಅನಿಲ್ ವಂಚನೆ ಆಂಧ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ವ್ಯಾಪಿಸಿದ್ದು, ಹಲವು ಲಾರಿಗಳನ್ನು ಚಿಕ್ಕಬಳ್ಳಾಫುರ ಗ್ರಾಮಾಂತರ ಪಿಎಸ್‌ಐ ಚೇತನ್‌ಕುಮಾರ್ ವಶಕ್ಕೆ ಪಡೆದಿದ್ದಾರೆ.
ಬೈಕ್‌ನಲ್ಲಿ ಹೋಗುತ್ತಿದ್ದ ರೌಡಿಯ ಅಟ್ಟಾಡಿಸಿ ಹತ್ಯೆ! ಹಾಡಹಗಲೆ ಭೀಕರ ಕೊಲೆ
ಉಳಿದ ಲಾರಿಗಳ ಮಾಲಿಕರು ಸಿಗಬೇಕಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೋಟ್ಯಂತರ ರುಪಾಯಿ ಮೌಲ್ಯದ ಹತ್ತಕ್ಕೂ ಹೆಚ್ಚು ಲಾರಿಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಚಿಕ್ಕಬಳ್ಳಾಪುರದ ಫೈನಾನ್ಸ್‌ವೊಂದಕ್ಕೆ ಇದೇ ನಕಲಿ ದಾಖಲೆಗಳನ್ನು ನೀಡಿರುವ ವಂಚಕರು ಸುಮಾರು 80 ಲಕ್ಷ ಸಾಲ ಪಡೆದಿದ್ದು, ಈಗ ಲಾರಿಗಳೂ ಇಲ್ಲದೆ, ಹಣವೂ ಇಲ್ಲದೆ ಫೈನಾನ್ಸ್ ಕಂಪನಿ ಮಾಲಿಕರು ಪರದಾಡುವಂತಾಗಿದೆ.